ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳ (Coastal District) ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮಲೆನಾಡು ಜಿಲ್ಲೆಗಳ ಅಲ್ಲಲ್ಲಿ ಭರ್ಜರಿಯಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Weather Report) ನೀಡಿದೆ. ಅಲ್ಲದೆ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ (Rain Alert) ಎಂದು ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಈ ಭಾಗದ ಜನತೆಗೆ ನಿರಾಸೆಯಾಗಲಿದೆ. ಇದು ಕೃಷಿ ಚಟುವಟಿಕೆ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.
ಇದನ್ನೂ ಓದಿ: Bangalore Mysore Expressway : ಬೆಂಗಳೂರು ರಸ್ತೆಯಿಂದ ಮೈಸೂರು ರಸ್ತೆಗೆ ಹಾರಿ ಗದ್ದೆಗೆ ನುಗ್ಗಿದ ಬಸ್!
ದಕ್ಷಿಣ ಒಳನಾಡಿನಲ್ಲೇನು ಪರಿಣಾಮ?
ದಕ್ಷಿಣ ಒಳನಾಡಿನ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ವ್ಯಾಪಕವಾಗಿ ಮಳೆಯಾಗಲಿದೆಯಾದರೂ ಹೆಚ್ಚಿನ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದ ಉಳಿದ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಉತ್ತರ ಒಳನಾಡಿನ ಈ ಭಾಗದಲ್ಲಿ ಭಾರಿ ಮಳೆ
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ಆದರೆ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಜಿಲ್ಲೆಗಳಲ್ಲಿ ಭರ್ಜರಿ ವರ್ಷಧಾರೆ
ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೈಶುಗರ್ ಸಕ್ಕರೆ ಕಾರ್ಖಾನೆಯಿಂದ 40 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ! ಕರೆಂಟ್ ಪೂರೈಕೆಗೆ ದಿನೇಶ್ ಗೂಳಿಗೌಡ ಮನವಿ
ಬೆಂಗಳೂರಲ್ಲಿ ಮಳೆ ಕೇಳಬೇಡಿ!
ಬೆಂಗಳೂರು ಹಾಗೂ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ. ಆಗಾಗ ಬಿಸಿಲು ಬಂದರೂ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.