ಬೆಂಗಳೂರು: ಬಿಪರ್ ಜಾಯ್ ಚಂಡಮಾರುತವು (Biperjoy cyclone) ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲಿ (Coastal Karnataka) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (Weather Report) ನೀಡಿದೆ. ಹಲವು ದಿನಗಳವರೆಗೆ ಸೈಕ್ಲೋನ್ ಎಫೆಕ್ಟ್ ಇರಲಿದ್ದು, ಮುಂದಿನ ಐದು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರು ಮತ್ತು ಮೀನುಗಾರರಿಗೆ ಸೂಚನೆ ನೀಡಿದ್ದಾರೆ. ಮಂಗಳೂರು ಮತ್ತು ಮುರ್ಡೇಶ್ವರ ಕಡಲ ತೀರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕರ್ನಾಟಕ ಮಾತ್ರವಲ್ಲ ಗುಜರಾತ್, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಉತ್ತರಾಖಂಡ, ದಕ್ಷಿಣ ಹರಿಯಾಣ, ನೈಋತ್ಯ ರಾಜಸ್ಥಾನ, ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲೂ ಸೈಕ್ಲೋನ್ ಎಫೆಕ್ಟ್ ಇರಲಿದೆ.
ದಕ್ಷಿಣ ಕನ್ನಡದಲ್ಲಿ ಹೈ ವೇವ್ ಅಲರ್ಟ್
ದಕ್ಷಿಣ ಕನ್ನಡ ಜಿಲ್ಲೆ 42 ಕಿ.ಮೀ.ನಷ್ಟು ಉದ್ದದ ಕರಾವಳಿ ತೀರವಿದ್ದು, ಇಲ್ಲಿನ ಬಹುತೇಕ ಭಾಗಗಳಲ್ಲಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮದಿಂದ ವಾಯುಭಾರ ಕುಸಿತವಾಗಲಿದೆ. ಚಂಡಮಾರುತದ ಪರಿಣಾಮವಾಗಿ ಮೂರರಿಂದ ನಾಲ್ಕು ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳಲಿದ್ದು ಸಮುದ್ರ ಪ್ರಕ್ಷುಬ್ಧವಾಗಿರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಜೂನ್ 19ರವರೆಗೆ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಯಾವುದೇ ಕಾರಣಕ್ಕೂ ನೀರಿಗಿಳಿಯಬಾರದು, ಅನಗತ್ಯವಾಗಿ ತೀರದಲ್ಲಿ ಓಡಾಡಬಾರದು ಎಂದು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಬೀಳಲಿದೆ?
ರಾಜ್ಯದಲ್ಲಿ ಜೂನ್ 15ರ ಮುಂಜಾನೆ 8.30ರವರೆಗಿನ ಹವಾಮಾನ ಮುನ್ಸೂಚನೆ ಪ್ರಕಾರ, ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮತ್ತು ಉತ್ತರ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಣ್ಣಗೆ ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ ಒಣಹವೆ
ಉತ್ತರ ಒಳನಾಡಿನ ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಣ್ಣಗೆ ಮಳೆಯಾಗಲಿದೆ.
ಬೆಂಗಳೂರಿನ ಬಿಬಿಎಂಪಿ ಪ್ರದೇಶ ವ್ಯಾಪ್ತಿಯಲ್ಲಿ ಜೂನ್ 15ರ ಮುಂಜಾನೆವರೆಗೆ ಅಲ್ಲಲ್ಲಿ ಸಣ್ಣಗೆ ಮಳೆಯಾಗುವ ನಿರೀಕ್ಷೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆ ಇದೆ.
ಇದನ್ನೂ ಓದಿ: Murdeshwara Beach : ಮುರ್ಡೇಶ್ವರಕ್ಕೆ ಹೋಗುತ್ತಿದ್ದೀರಾ? ಇಲ್ಲಿ ಈಗ ಬೀಚ್ ಪ್ರವೇಶಿಸುವಂತಿಲ್ಲ!