Site icon Vistara News

Weather Report : ಬೆಂಗಳೂರು ಸೇರಿ ಕರಾವಳಿ, ಮಲೆನಾಡಲ್ಲಿ ನಾಳೆ ಚಿಟಪಟ ಮಳೆ

Rain Image

ಬೆಂಗಳೂರು: ರಾಜ್ಯಾದ್ಯಂತ ಮಳೆ (Rain News) ಅಬ್ಬರ ತಗ್ಗಿದೆ. ನೈರುತ್ಯ ಮುಂಗಾರು (Southwest monsoon) ಕರಾವಳಿಯಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲಗೊಂಡಿದೆ. ಜು. 30ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನಲ್ಲಿ ಜಿಟಿಜಿಟಿ (weather report) ಮಳೆಯಾಗಲಿದೆ.

ಮಲೆನಾಡಿನ ಶಿವಮೊಗ್ಗದಲ್ಲಿ ಚದುರಿದ ಮಳೆಯಾಗಲಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇನ್ನು ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೆ, ದಕ್ಷಿಣ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿಯಲ್ಲಿ ತುಂತುರ ಮಳೆಯಾದರೆ, ಉಳಿದ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ಜಿಟಿ ಜಿಟಿ ಮಳೆಯಾಗಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಒಂದೆರಡು ಸಲ ಉದುರು ಉದುರಾಗಿ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮೀನುಗಾರರಿಗೆ ಎಚ್ಚರಿಕೆ

ಮಳೆ ತಗ್ಗಿದ್ದರೂ ರಾಜ್ಯಾದ್ಯಂತ ಬಿರುಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಕರ್ನಾಟಕ ಕರಾವಳಿಯಲ್ಲಿ ಭಾರಿ ಮಳೆಯೊಂದಿಗೆ ಬಿರುಗಾಳಿ ವೇಗವು 55 ಕಿ.ಮೀ ವ್ಯಾಪ್ತಿಯಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಗೋಡೆ ಕುಸಿದು ವ್ಯಕ್ತಿ ಸಾವು

ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ತಡರಾತ್ರಿ ಮನೆಗೋಡೆ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಜೀವ ಬಿಟ್ಟಿದ್ದಾರೆ. ಮನೆಯಲ್ಲಿದ್ದ ಜೈನಾಬಿ ಮಸ್ತಾನ್ ಎಂಬಾತ ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲೂಕಿನ ಗೌಸಿಯ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ

ಕಲಬುರಗಿಯಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಿಂಚೋಳಿ ತಾಲೂಕಿನ ಅಲ್ಲಾಪುರ ಗ್ರಾಮದ ಬಳಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಶಾಲಾ ಮಕ್ಕಳು ಅಪಾಯಕಾರಿ ಹಳ್ಳದಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾರೆ.

ಹರಿಯುತ್ತಿರುವ ನೀರಲ್ಲೇ ಹಳ್ಳ ದಾಟುತ್ತಿರುವ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು

ಅಲ್ಲಾಪೂರ ಗ್ರಾಮದಿಂದ ಕೋಡ್ಲಿ ಗ್ರಾಮಕ್ಕೆ ಶಾಲೆಗೆ ಹೋಗುವ ಮಕ್ಕಳು ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕೈ ಕೈ ಹಿಡಿದು ಹಳ್ಳ ದಾಟುತ್ತಿದ್ದಾರೆ. ಕೊಂಚ ಯಾಮಾರಿದರೂ ಹಳ್ಳದಲ್ಲಿ ಮಕ್ಕಳು ಕೊಚ್ಚಿಕೊಂಡು ಹೋಗುವ ಭೀತಿ ಇದೆ. ಪ್ರತಿ ಬಾರಿ ಮಳೆಗೆ ಹಳ್ಳ ತುಂಬಿದಾಗ ಗ್ರಾಮಸ್ಥರು ಹಾಗೂ ಶಾಲಾ‌ ಮಕ್ಕಳ ಓಡಾಟ ಇದೇ ರೀತಿಯಲ್ಲೇ ಇರಲಿದೆ.

ಮಳೆ ಅವಾಂತರ

ಮಳೆಗೆ ಮನೆಗಳು ನೆಲಸಮ

ವಿಜಯನಗರ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಗೆ ನೂರಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಸೂರು ಕಳೆದುಕೊಂಡವರು ಕಣ್ಣೀರಿಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹೂವಿನಹಡಗಲಿ, ಹೊಳಲು, ಮೈಲಾರ, ಕೊಟ್ಟೂರು, ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಹೆಚ್ಚು ಮನೆಗಳು ಕುಸಿದಿವೆ. ನದಿ ಪಾತ್ರದಲ್ಲಿರುವ 22 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version