Site icon Vistara News

Weather Report : ಬಿಸಿಲಿನಿಂದ ಬಸವಳಿದಿದ್ದೀರಾ? ಇಲ್ಲಿದೆ ಗುಡ್‌ ನ್ಯೂಸ್‌; ಇನ್ನು ಮೂರು ದಿನ ಮಳೆ ಸಾಧ್ಯತೆ

Rain

ಬೆಂಗಳೂರು: ರಾಜ್ಯಾದ್ಯಂತ ಬಿಸಿಲಿನ ಝಳ (Weather Report) ತೀವ್ರವಾಗಿದೆ. ಹಗಲು ಹೊತ್ತಿನಲ್ಲಿ ಜನರು ಮನೆಯಿಂದ ಹೊರಗೆ ಬರಲಾಗದಷ್ಟು ಸೆಕೆ ಇದ್ದರೆ ರಾತ್ರಿ ಫ್ಯಾನ್‌ ಹಾಕಿದರೂ ಬಿಸಿಗಾಳಿಯೇ ಬರುತ್ತಿದೆ. ಯಾವಾಗಲೂ ತಂಪಾಗಿರುವ ಚಿಕ್ಕಮಗಳೂರು, ಮಡಿಕೇರಿಯಂಥ ಭಾಗದಲ್ಲೂ ಈಗ ಇಂಥಹುದೇ ಸ್ಥಿತಿ ಇದೆ.

ಹೀಗೆ ಬೇಸಿಗೆಯ ಬಿಸಿಲಿನಿಂದ ಬಸವಳಿದ ಜನರಿಗೆ ಹವಾಮಾನ ಇಲಾಖೆಯಿಂದ ಒಂದು ಸಣ್ಣ ನಿರಾಳತೆಯ ಗುಡ್‌ ನ್ಯೂಸ್‌ ಇದೆ. ಅದೇನೆಂದರೆ, ಮುಂದಿನ ಮೂರು ದಿನಗಳ ಕಾಲ ರಾಜ್ಯದ ಕೆಲವೊಂದು ಭಾಗದಲ್ಲಾದರೂ ಮಳೆ ಬರುವ ಶುಭ ಸೂಚನೆ ಇದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಮಂಡ್ಯ, ಮೈಸೂರು, ಕೋಲಾರ, ಹಾಸನ, ಕೊಡಗು, ಚಾಮರಾಜನಗರ, ಸೇರಿದಂತೆ ಹಲವೆಡೆ ಮಳೆ ಸಾಧ್ಯತೆ ಇದೆ.

ಉತ್ತರ ಒಳನಾಡಿಗೂ ಗುಡ್‌ನ್ಯೂಸ್‌
ಹವಾಮಾನ ಇಲಾಖೆಯ ಪ್ರಕಾರ ಉತ್ತರ ಒಳನಾಡಿನಲ್ಲೂ ಶನಿವಾರ ಸಣ್ಣದಾಗಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರಿನ ಹವಾಮಾನವನ್ನು ಪ್ರತ್ಯೇಕವಾಗಿ ಗಮನಿಸುವುದಾದರೆ ಇಲ್ಲಿ ಸಣ್ಣ ಪ್ರಮಾಣದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಇರಲಿದೆ.

ಭಾನುವಾರ ಐಪಿಎಲ್‌ ಮ್ಯಾಚ್‌ಗೆ ಸಣ್ಣ ಮಳೆಯ ಸಿಂಚನ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬಯಿ ಇಂಡಿಯನ್ಸ್‌ ತಂಡಗಳ ನಡುವೆ ಭಾನುವಾರ ಸಂಜೆ 7.30ರಿಂದ ಪಂದ್ಯ ನಡೆಯಲಿದೆ. ಇದೇ ಹೊತ್ತಿನಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಯೂ ಇದೆ. ಆದರೆ, ಮಳೆ ದೊಡ್ಡ ಪ್ರಮಾಣದಲ್ಲಿ ಬಾರದೆ ತುಂತುರಿಗೆ ಸೀಮಿತವಾಗಿ ಮ್ಯಾಚ್‌ ಮುಂದುವರಿಯಬಹುದು ಎಂಬ ನಿರೀಕ್ಷೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳಿದ್ದಾರೆ. ಸಣ್ಣ ಮಳೆ ಬಂದರೂ ತಕ್ಷಣವೇ ನೀರನ್ನು ಹೊರಹಾಕಿ ಅಂಗಣವನ್ನು ಆಟಕ್ಕೆ ಸಿದ್ಧಗೊಳಿಸುವ ವ್ಯವಸ್ಥೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ.

ಇನ್ನೂ ಓದಿ :Karnataka Rain: ಐಪಿಎಲ್‌ ಮ್ಯಾಚ್‌ಗೆ ಮಳೆ ಅಡ್ಡಿ; ಮೈಸೂರು, ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

Exit mobile version