ಬೆಂಗಳೂರು: ಕರ್ನಾಟಕದ ಕರಾವಳಿ (Coastal Districts) ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಹೀಗಾಗಿ ಮುಂದಿನ 5 ದಿನಗಳ ಕಾಲ ಕರಾವಳಿಗೆ ಆರೆಂಜ್ ಅಲರ್ಟ್ (Orange warning) ನೀಡಲಾಗಿದೆ. ಜತೆಗೆ ಮಲೆನಾಡು ಜಿಲ್ಲೆಗಳಲ್ಲೂ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಆದರೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 5 ದಿನಗಳು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ. ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ಯಿಂದ 55 ಕಿ.ಮೀ ವ್ಯಾಪ್ತಿಯ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗೆ ಇಳಿಯದಂತೆ ಸೂಚಿಸಲಾಗಿದೆ.
ಮಲೆನಾಡಿನಲ್ಲಿ ಜೋರು ಮಳೆ
ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದ್ದರೆ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿಯಲ್ಲಿ ಅಬ್ಬರದ ಮಳೆ
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಅಬ್ಬರದ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಾದ ಬೀದರ್, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ಬಾಗಲಕೋಟೆಯಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ಇರುವ ಸಾಧ್ಯತೆ ಇದೆ.
ರದ್ದುಗೊಂಡ ಮಳೆಯಾಟ
ದಕ್ಷಿಣ ಒಳನಾಡಿನಲ್ಲಿ ಸಂಪೂರ್ಣವಾಗಿ ಮುಂಗಾರು ಕೈ ಕೊಟ್ಟಿದೆ. ಮುಂದಿನ ಐದು ದಿನಗಳು ಬೆಂಗಳೂರು ಸೇರಿದಂತೆ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗಾಳಿ ಬೀಸಲಿದೆ. ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.
ಎಷ್ಟು ಪ್ರಮಾಣದಲ್ಲಿ ಮಳೆಯಾದರೆ ಅಲರ್ಟ್ ಘೋಷಣೆ
1)ರೆಡ್ ಅಲರ್ಟ್- ಆಲಿಕಲ್ಲು ಸಹಿತ ಅತಿ ಭಾರಿ ಮಳೆ (204.5 mm ಗೂ ಅಧಿಕ)
2)ಆರೆಂಜ್ ಅಲರ್ಟ್- ಗುಡುಗು, ಮಿಂಚು ಸಹಿತ ಭಾರಿ ಮಳೆ (115 mm ರಿಂದ 204 mm)
3)ಯೆಲ್ಲೋ ಅಲರ್ಟ್- ಗಾಳಿ, ಗುಡುಗು ಸಹಿತ ಭಾರಿ ಮಳೆ (64.5 mm ರಿಂದ 115.5 mm)
ನದಿಗಳ ಒಡಲೊ ಬರಿದು
ಮುಂಗಾರು ಮಳೆ ಕೊರತೆಯಿಂದಾಗಿ ವಿಜಯಪುರದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಹಿನ್ನೀರು ಖಾಲಿ ಆಗಿದೆ. ಜುಲೈ ತಿಂಗಳ ಪ್ರಾರಂಭದಲ್ಲಿಯೂ ನದಿಗೆ ಒಳಹರಿವಿಲ್ಲ. ಹಿನ್ನೀರು ಪ್ರದೇಶದಲ್ಲಿ ನೀರು ಖಾಲಿಯಾಗಿ ಕೃಷ್ಣಾ ನದಿ ಒಡಲು ಬಿರುಕು ಬಿಟ್ಟಿದೆ. ಬರಗಾಲದ ಭೀಕರತೆಗೆ ದೃಶ್ಯಗಳು ಸಾಕ್ಷಿಯಾಗಿದೆ. ಕೊಲ್ಹಾರ ಸೇತುವೆ ಬಳಿ ಹಿನ್ನೀರು ಸಂಪೂರ್ಣ ತಗ್ಗಿದೆ. ಕೊಲ್ಹಾರ ಸೇತುವೆ ಬಳಿಯ ಹಿನ್ನೀರಿನಿಂದ ಬಾಗಲಕೋಟೆ ವಿಜಯಪುರ ಅವಳಿ ಜಿಲ್ಲೆಗೆ ಕುಡಿಯಲು ಹಾಗೂ ಜಮೀನಿಗೆ ನೀರು ಬಳಸಲಾಗುತ್ತದೆ. ಸದ್ಯಕ್ಕೆ ಎಲ್ಲರ ಚಿತ್ತ ಮಹಾರಾಷ್ಟ್ರದ ಮಳೆಯತ್ತ ನೆಟ್ಟಿದೆ.
ವಿದ್ಯುತ್ ಉತ್ಪಾದನೆ ಸ್ಥಗಿತ
ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.60 Mtr ಇದ್ದು, ಸದ್ಯ ಜು.2ರ ಇಂದಿನ ನೀರಿನ ಮಟ್ಟ 507.43 Mtrನಷ್ಟು ಇದೆ. ಒಳಹರಿವು ಇಲ್ಲ, ನೀರಿನ ಮಟ್ಟ 19.408 TMC ನಷ್ಟಿದೆ. ಡೆಡ್ ಸ್ಟೋರೇಜ್ ಹೊರತುಪಡಿಸಿ ಲಭ್ಯವಿರುವ ನೀರಿನ ಮಟ್ಟ 1.788 TMC ಇದ್ದು, ಹೊರಹರಿವು 590 ಕ್ಯೂಸೆಕ್ ಇದೆ. ಇನ್ನೂ ಒಂದು ತಿಂಗಳು ಕುಡಿಯುವ ನೀರಿನ ಲಭ್ಯತೆಯಿದೆ. ಒಳಹರಿವು ಇಲ್ಲದಿರುವುದರಿಂದ ಪ್ರಸ್ತುತ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
ಜುಲೈ ಮೊದಲ ವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿವರೆಗೆ ತಾಲೂಕು ಹಾಗೂ ಜಿಲ್ಲೆಗಳ ಬರಪೀಡಿತ ಎಂದು ಘೋಷಿಸುವ ಮೊದಲು ಕಾಯಲು ನಿರ್ಧರಿಸಿದ್ದಾಗಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಜುಲೈನಲ್ಲಿ ಗರಿಷ್ಠ ಮಳೆ ಆಗುವ ಸಾಧ್ಯತೆ ಇದ್ದು, ಕೊರತೆ ನೀಗಿಸುವ ಆಶಾಭಾವ ಇದೆ. ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ 150 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ವರ್ಷ ಕೇವಲ 75 ಮಿ.ಮೀ ಮಳೆಯಾಗಿದೆ ಎನ್ನಲಾಗಿದೆ. ಅದು ಕೂಡ ಕಳೆದ ವಾರ ಸುರಿದ ಮಳೆಯ ಪಾಲು ಹೆಚ್ಚಿದೆ. ಈ ಮೂಲಕ ಜೂನ್‌ನಲ್ಲಿ ಶೇ. 50ರಷ್ಟು ಮಳೆ ಕೊರತೆಯಾಗಿದೆ.
ಇತ್ತ ಕೆಆರ್‌ಎಸ್ ಡ್ಯಾಂ (KRS Dam) ಡೆಡ್ ಸ್ಟೋರೇಜ್‌ನತ್ತ (Dead Storage) ಮುಖ ಮಾಡಿದೆ. ಕೇವಲ 80 ಅಡಿಗೆ ಜಲಾಶಯದ (Reservoir) ನೀರಿನ ಮಟ್ಟ ಕುಸಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರಿ ಜಲ ಸಂಕಷ್ಟ ಎದುರಾಗಲಿದೆ. ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಮುಂಗಾರು ಬೆಳೆ ನಾಟಿ ಮಾಡದಂತೆ ಮಂಡ್ಯ ಜಿಲ್ಲೆಯ ರೈತರಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಳೆ ನೋಡಿ ನಾಟಿ ಮಾಡಿ
ಮಳೆಬಾರದೇ ಇದ್ದರೆ ಬೆಳೆ ನಾಟಿ ಮಾಡಲೇಬೇಡಿ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಸಂಬಂಧ ಕೆಆರ್‌ಎಸ್ ಅಧೀಕ್ಷಕ ಇಂಜನೀಯರ್ ಆನಂದ್ ಮಾತನಾಡಿದ್ದು, ಮಳೆ ಬಾರದೆ ಹಿನ್ನಲೆಯಲ್ಲಿ ಬೆಳೆದು ನಿಂತ ಬೆಳೆಗೆ ನೀರಿನ ಸಮಸ್ಯೆಯಾಗಿತ್ತು. ಕಳೆದ ತಿಂಗಳು 13 ರಂದು ನಾಲೆಗೆ ನೀರು ಬಿಡಲಾಗಿತ್ತು. ಅದು ಬೆಳೆದು ನಿಂತ ಬೆಳೆಗೆ ಮಾತ್ರ ಬಳಸಲು ಎಂದು ಸೂಚಿಸಲಾಗಿತ್ತು.
ಈಗ ನಾಲೆಗೆ ನೀರು ನಿಲ್ಲಿಸಲಾಗಿದೆ. ಪ್ರತಿ ವರ್ಷ ಮೇ ತಿಂಗಳ ಕೊನೆವರೆಗೆ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರದಂತೆ ನೀರು ಬಿಡುವುದು ವಾಡಿಕೆ. ಆದರೆ ಈಗ ಮಳೆ ಇಲ್ಲದ ಕಾರಣಕ್ಕೆ ಹೊಸ ಬೆಳೆ ಬೆಳೆಯಲು ನೀರಿಲ್ಲ. ಕುಡಿಯುವ ನೀರಿಗೆ ಯೋಚನೆ ಮಾಡುವ ಸ್ಥಿತಿ ಎದುರಾಗಿರುವುದರಿಂದ ಬೆಳೆ ಬಗೆಗೆ ಯೋಚನೆ ಮಾಡುವ ಹಾಗೆ ಇಲ್ಲ. ದಯಮಾಡಿ ರೈತರು ಮಳೆ ನೋಡಿ ಬೆಳೆ ನಾಟಿ ಮಾಡುವಂತೆ ತಿಳಿಸಿದ್ದಾರೆ.
ಡ್ಯಾಂ ನಲ್ಲಿರುವ ನೀರಿನ ಪೈಕಿ 60 ಅಡಿಗಿಂತ ಕಡಿಮೆ ನೀರನ್ನು ಡೆಡ್ ಸ್ಟೋರೆಜ್ ಆಗಿರುತ್ತೆ. ಮುಂಗಾರು ಮಳೆ ಬಂದರಷ್ಟೇ ಜಿಲ್ಲೆಯ ರೈತರು ಮುಂಗಾರು ಬೆಳೆ ನಾಟಿ ಮಾಡಿ, ಇಲ್ಲದಿದ್ದರೆ ಬೆಳೆ ನಾಟಿ ಮಾಡುವುದು ಬೇಡವೇ ಬೇಡ ಎಂದು ಆನಂದ್ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ