Site icon Vistara News

Weather report: ಬಿಪರ್‌ಜಾಯ್‌ ಎಫೆಕ್ಟ್‌; ಅಲೆಗಳ ಹೊಡೆತಕ್ಕೆ ತಡೆಗೋಡೆಗಳು ಸಮುದ್ರ ಪಾಲು, ಕರಾವಳಿಗೆ ರೈನ್‌ ಅಲರ್ಟ್‌

Rain news someshwara beach

ಬೆಂಗಳೂರು/ಮಂಗಳೂರು: ಕರಾವಳಿ ಸೇರಿ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಈಗಾಗಲೇ ರಾಜ್ಯ ಕರಾವಳಿಯಲ್ಲಿ ನಿನ್ನೆಗಿಂತಲೂ ಇಂದು ಕಡಲ ಅಬ್ಬರ ಹೆಚ್ಚಾಗಿದೆ.

ಕರಾವಳಿಯ ಕಡಲ ತೀರದಲ್ಲಿ ಅಲೆಗಳ ಅಬ್ಬರ

ಮಂಗಳೂರಿನ ಸೋಮೇಶ್ವರ ಕಡಲತೀರದಲ್ಲಿ ಕಡಲ್ಕೊರೆತ ಉಂಟಾಗಿದೆ. ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ. ಮಧ್ಯಾಹ್ನದ ವೇಳೆಗೆ ಕಡಲು ಇನ್ನಷ್ಟು ಪ್ರಕ್ಷುಬ್ಧಗೊಳ್ಳುವ ಆತಂಕ ನಿರ್ಮಾಣವಾಗಿದೆ. ಈಗಾಗಲೇ ಕಡಲ ತೀರದ ಭೂಮಿಯನ್ನು ಅಲೆಗಳು ಕಬಳಿಸಿದೆ. ಅಲೆಗಳ ಹೊಡೆತಕ್ಕೆ ತಡೆಗೋಡೆಗಳೂ ಸಹ ಸಮುದ್ರ ಪಾಲಾಗಿದೆ. ಬಿಸಿಲಿನ ವಾತವರಣವಿದ್ದರೂ ಸಮುದ್ರದ ಆರ್ಭಟ ಹೆಚ್ಚಾಗಿದೆ.

ಸಮುದ್ರ ಪಾಲಾದ ತಡೆಗೋಡೆಗಳು

ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಭಾಗಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ವರುಣ ಗುಡುಗಲಿದ್ದಾನೆ.

ಅಲೆಗಳ ಅಬ್ಬರ

ಕಡಲತೀರದಲ್ಲಿ ಕೆಂಪು ಬಾವುಟ ಅಳವಡಿಸಿದ ಜಿಲ್ಲಾಡಳಿತ

ಉತ್ತರ ಕನ್ನಡದ ಕಡಲತೀರದಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಜತೆಗೆ ಅಲೆಗಳ ಅಬ್ಬರವೂ ಕೊಂಚ ಕಡಿಮೆಯಾಗಿದೆ. ಆದರೆ ಗಾಳಿ ಹಿನ್ನೆಲೆ ತೀರದಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸುತ್ತಿದೆ. ಸೈಕ್ಲೋನ್ ಮುನ್ಸೂಚನೆ ಹಿನ್ನೆಲೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಕಡಲತೀರದಲ್ಲಿ ಕೆಂಪು ಬಾವುಟ ಅಳವಡಿಸಿ ನೀರಿಗಿಳಿಯದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆಗೂ ತೆರಳದಂತೆ ಹಾಗೂ ತೀರ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ರಾಮನಗರ ಮತ್ತು ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಬೆಳಗಾವಿ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಮಳೆಯ ಸಿಂಚನ ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರಲಿದೆ. ಇದರಿಂದಾಗಿ ಕೆಲವೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: ಆಪರೇಷನ್‌ ಮಾಡುವಾಗ ದೇಹದಲ್ಲೇ ಕತ್ತರಿ ಉಳಿಸಿದ ಡಾಕ್ಟರ್; ರೋಗಿಯ ಕತೆ ಏನಾಯ್ತು?

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಕಲಬುರಗಿ: 39 ಡಿ.ಸೆ – 24 ಡಿ.ಸೆ
ಗದಗ: 34 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 34 ಡಿ.ಸೆ – 23 ಡಿ.ಸೆ
ಬೆಳಗಾವಿ: 31 ಡಿ.ಸೆ – 21 ಡಿ.ಸೆ
ಕಾರವಾರ: 34 ಡಿ.ಸೆ – 25 ಡಿ.ಸೆ
ಮಂಗಳೂರು: 31 ಡಿ.ಸೆ – 24 ಡಿ.ಸೆ
ಹೊನ್ನಾವರ: 33 ಡಿ.ಸೆ- 25 ಡಿ.ಸೆ
ಬೆಂಗಳೂರು ನಗರ: 32 ಡಿ.ಸೆ – 22 ಡಿ.ಸೆ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version