Site icon Vistara News

Weather report: ಮಳೆ ಕೊರತೆ, ಕರ್ನಾಟಕ ಇನ್ನಷ್ಟು ಬಿಸಿ

hot weather

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆ (Rain deficit) ತೀವ್ರವಾಗಿದ್ದು, ಈ ಸಲದ ಆಗಸ್ಟ್‌ ಮಾಸ (hottest august) ಹೆಚ್ಚಿನ ತಾಪಮಾನವನ್ನು ಕಂಡಿದೆ. ರಾಜಧಾನಿ ಬೆಂಗಳೂರು 5ನೇ ಅತಿ ಹೆಚ್ಚು ತಾಪಮಾನದ ಆಗಸ್ಟ್ ದಿನವನ್ನು ಬುಧವಾರ (ಆ.16) ದಾಖಲಿಸಿದೆ ಎಂದು ಹವಾಮಾನ ಇಲಾಖೆ (Weather report) ತಿಳಿಸಿದೆ.

ಬುಧವಾರ ಬೆಂಗಳೂರು ನಗರ ಈ ಮಾಸದ ಗರಿಷ್ಠ ತಾಪಮಾನ 31.8 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ಸಾಮಾನ್ಯ ಸರಾರಿಗಿಂತ 3.7 ಡಿಗ್ರಿ ಹೆಚ್ಚು. ಇದು ಇತಿಹಾಸದ ಐದನೇ ಗರಿಷ್ಠ ತಾಪಮಾನದ ಆಗಸ್ಟ್‌ ದಿನ ಕೂಡ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ (weather alert). ಬೆಂಗಳೂರಿನಲ್ಲಿ ಈ ಹಿಂದೆ 1899ರಲ್ಲಿ ಅತಿ ಗರಿಷ್ಠ ತಾಪಮಾನ (33.3 ಡಿಗ್ರಿ ಸೆಲ್ಸಿಯಸ್) ದಾಖಲಾಗಿತ್ತು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ರಾಜ್ಯಾದ್ಯಂತದ ಸರಾಸರಿ ಗರಿಷ್ಠ ತಾಪಮಾನ ಯಾದಗಿರಿ ಜಿಲ್ಲೆಯಲ್ಲಿ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಿಳಿಸಿದೆ. ರಾಜ್ಯದ ಭೌಗೋಳಿಕ ಪ್ರದೇಶದ ಸುಮಾರು 85%ರಷ್ಟು ಗರಿಷ್ಠ ತಾಪಮಾನವು 30ರಿಂದ 36 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ. ಕಲಬುರಗಿ, ಕೋಲಾರ, ಬೆಳಗಾವಿ, ಕೊಪ್ಪಳ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಕೆಲವೆಡೆ 35ರಿಂದ 37 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಕೆಎಸ್‌ಎನ್‌ಡಿಎಂಸಿ ಜೂನ್ 1ರಿಂದ ಆಗಸ್ಟ್ 16ರವರೆಗಿನ ಅಂಕಿಅಂಶಗಳನ್ನು ವಿಶ್ಲೇಷಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಶೇ.20ರಿಂದ 44ರಷ್ಟು ಮಳೆ ಕೊರತೆಯಾಗಿದೆ. ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ರಾಮನಗರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಕೊರತೆಯಾಗಿದೆ. ಆಗಸ್ಟ್ 1ರಿಂದ ಆಗಸ್ಟ್ 16ರವರೆಗೆ ಒಟ್ಟು 31 ಜಿಲ್ಲೆಗಳಲ್ಲಿ 27 ಜಿಲ್ಲೆಗಳು ಮಳೆಯ ದೊಡ್ಡ ಕೊರತೆ ಅನುಭವಿಸುತ್ತಿವೆ. ಮೂರು ಜಿಲ್ಲೆಗಳು ಕೊರತೆ ಕಾಣುತ್ತಿವೆ ಮತ್ತು ಒಂದು ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ ಎಂದು ಕೇಂದ್ರ ತಿಳಿಸಿದೆ.

ಕರಾವಳಿ ಜಿಲ್ಲೆಗಳು ಪ್ರತ್ಯೇಕವಾಗಿ ಮಳೆಗೆ ಸಾಕ್ಷಿಯಾಗುತ್ತಲೇ ಇವೆಯಾದರೂ ರಾಜ್ಯದಾದ್ಯಂತ ಮಳೆಯ ತೀವ್ರತೆ ಈ ತಿಂಗಳು ಕಡಿಮೆಯಾಗಿದೆ. ರಾಜ್ಯದಾದ್ಯಂತ ಮಾನ್ಸೂನ್ ಚಟುವಟಿಕೆ ದುರ್ಬಲಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾದ ಮೂರು ಸ್ಥಳಗಳೆಂದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡ್ಲೆ (43 ಮಿ.ಮೀ), ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸಾಸ್ವಿಹಳ್ಳಿ (37 ಮಿ.ಮೀ), ಮತ್ತು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೋಡು ಅಣೆಕಟ್ಟು (34.5. ಮಿಮೀ).

ಇದನ್ನೂ ಓದಿ: Weather Report : ದುರ್ಬಲಗೊಂಡ ಮುಂಗಾರು; ಈ ಜಿಲ್ಲೆಗಷ್ಟೇ Rain Alert

Exit mobile version