ಬೆಂಗಳೂರು: ಆಫೀಸ್‌ಗೆ ಹೋಗುವಾಗ, ಮನೆಗೆ ತೆರಳುವಾಗ ಮಳೆ ಕಾಟ ಇನ್ನೆರಡು ದಿನ (Weather Report) ಇರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರದಲ್ಲಿ ಭಾರಿ ಮಳೆಯಾಗುವ (Rain Updates) ಸಾಧ್ಯತೆ ಇದೆ.
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಕಾರಣದಿಂದಾಗಿ ಮಳೆಯ ಅಬ್ಬರ ಜೋರಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಮರದ ಕೆಳಗೆ ನಿಲ್ಲದಂತೆ ಸೂಚನೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲೂ ಮಳೆಯ ಅಬ್ಬರ ಇರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ವ್ಯಾಪಕ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಹಲವೆಡೆ ಮಳೆ ಅಬ್ಬರಿಸುತ್ತಿದ್ದರೆ, ಕಾರವಾರ ಮತ್ತು ವಿಜಯಪುರದಲ್ಲಿ 36.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮಂಗಳವಾರ ದಾಖಲಾಗಿದೆ. ತುಮಕೂರಲ್ಲಿ 11 ಸೆಂ.ಮೀ, ಪಾವಗಡ 9, ಚನ್ನಪಟ್ಟಣದಲ್ಲಿ 7 ಸೆಂ.ಮೀ ಮಳೆಯಾಗಲಿದೆ.
ಬುಧವಾರವೂ ಅಬ್ಬರಿಸಿದ ಮಳೆ
ಬುಧವಾರ ಬೆಳಗ್ಗೆ ಹಾಗೂ ಸಂಜೆ ಬೆಂಗಳೂರಲ್ಲಿ ಹಲವೆಡೆ ಮಳೆಯಾಗಿದೆ. ಟೌನ್ ಹಾಲ್, ಮೆಜೆಸ್ಟಿಕ್, ಮೈಸೂರು ಬ್ಯಾಂಕ್, ಜೆ.ಸಿ ರಸ್ತೆ, ಲಾಲ್ ಬಾಗ್ ಸೇರಿದಂತೆ ವಿಧಾನಸೌಧ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ತಗ್ಗು ಪ್ರದೇಶ ಹಾಗೂ ರಸ್ತೆ ಮಧ್ಯೆ ನೀರು ನಿಂತಿತ್ತು. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡಬೇಕಾಯಿತು.
ಇದನ್ನೂ ಓದಿ: Bangalore University: ಯೂನಿವರ್ಸಿಟಿ ಜಾಗ ಇನ್ಮುಂದೆ ಯಾರಿಗೂ ಕೊಡಲ್ಲ!
ಅಭ್ಯರ್ಥಿಗಳ ಪ್ರಚಾರಕ್ಕೆ ಮಳೆ ಕಿರಿಕ್
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಹಲವರಿಗೆ ಮಳೆಯು ಅಡ್ಡಿಯಾಗಿದೆ. ಕಾಂಗ್ರೆಸ್ ಪಕ್ಷದ ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ರ‍್ಯಾಲಿಗೆ ಮಳೆಯು ಅಡ್ಡಿ ಆಯಿತು. ಕನ್ನಯ್ಯ ಕುಮಾರ್ ನೇತೃತ್ವದಲ್ಲಿ ಶಿವಾಜಿನಗರ ಸರ್ಕಸ್ ಬಳಿ ರ‍್ಯಾಲಿಗೆ ತಯಾರಿ ನಡೆಯುವಾಗಲೇ ಮಳೆ ಶುರುವಾಯಿತು. ಇದರಿಂದಾಗಿ ಕಾರ್ಯಕರ್ತರೆಲ್ಲರೂ ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆಯಬೇಕಾಯಿತು.