Site icon Vistara News

Weather Report: ಚಾಮರಾಜ ನಗರದಲ್ಲಿ ಮಳೆಗೆ ಮನೆ ಚಾವಣಿ, ಗೋಡೆ ಕುಸಿತ; ಗುಂಡ್ಲುಪೇಟೆಯಲ್ಲಿ ಬೆಳೆ ನೀರುಪಾಲು

rain Effect

rain Effect

ಚಾಮರಾಜನಗರ: ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆ (Weather report) ಅಬ್ಬರಿಸುತ್ತಿದೆ. ಚಾಮರಾಜನಗರದ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಿರಂತರ ಮಳೆಯಾಗುತ್ತಿದ್ದು, (Cyclone Mocha) ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾತ್ರಿ ಸುರಿದ ಮಳೆಗೆ ಕುಸಿದ ಮನೆಯ ಚಾವಣಿ

ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದಲ್ಲಿ ಮನೆಯ ಚಾವಣಿ ಕುಸಿದಿದ್ದು, ಅದೃಷ್ಟವಶಾತ್‌ ಮನೆಯ‌ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುರಟ್ಟಿ ಹೊಸೂರು ಗ್ರಾಮದ ಪೊನ್ನಶೆಟ್ಟಿ ಎಂಬುವವರ ಮನೆಯ ಚಾವಣಿ ಏಕಾಏಕಿ ಕುಸಿದಿದೆ.

ರಾತ್ರಿ ಮಲಗಿದ್ದಾಗ ದಿಢೀರ್‌ ಸದ್ದು ಕೇಳಿದ್ದರಿಂದ ಮಲಗಿದ್ದವರು ಎದ್ದು ಹೊರಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಮನೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ಇದೀಗ ಮನೆ ಕಳೆದುಕೊಂಡು ಕುಟಂಬ ಬೀದಿಗೆ ಬಂದಿದೆ. ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆ ಕುಸಿದು ಚಾವಣಿ ಸಂಪೂರ್ಣ ಹಾನಿಯಾಗಿರುವುದರಿಂದ ಮನೆಯಲ್ಲಿದ್ದ ಬಟ್ಟೆ, ಆಹಾರ ಧಾನ್ಯಗಳು ಮಾತ್ರವಲ್ಲದೆ ಫಿಡ್ಜ್‌, ಟಿವಿ, ಮಂಚ ಎಲ್ಲವೂ ಜಖಂ ಆಗಿವೆ.

ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ

ತಡರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಹತ್ತಾರು ಎಕರೆ ಬಾಳೆ ಬೆಳೆ ನೆಲಕಚ್ಚಿದೆ. ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರವಿಚಂದ್ರ, ನವೀನ್, ಶರತ್, ಪರಮೇಶ್ವರಪ್ಪ, ನಾಗಮ್ಮ ಮೊದಲಾದ ರೈತರಿಗೆ ಸೇರಿದ ಬಾಳೆ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯವರು ಬೆಳಗೆ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ನೆಲಕಚ್ಚಿದ ಬಾಳೆ ಗಿಡಗಳು

ಮೈಸೂರಲ್ಲಿ ಬಾಳೆ ತೋಟ ನಾಶ

ಮೈಸೂರಿನಲ್ಲೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದ ರೈತ ಸೋಮಣ್ಣ ಎಂಬುವರಿಗೆ ಸೇರಿದ ಬಾಳೆ ತೋಟ ನೆಲಕಚ್ಚಿದೆ. 30 ರಿಂದ 35 ಲಕ್ಷ ರೂ. ಬೆಲೆ ಬಾಳುವ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ದಿಕ್ಕು ತೋಚದೆ ಕಂಗಲಾದ ರೈತ ಸೋಮಣ್ಣ,
ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಂಡ್ಯದಲ್ಲಿ ಮಳೆ ಅವಾಂತರ, ಸಿಡಿಲಿಗೆ ಇಬ್ಬರು ಬಲಿ

ಮಂಡ್ಯ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಹಲವೆಡೆ ಭಾರಿ ಮಳೆ ಗಾಳಿಯಿಂದ ಅವಾಂತರ ಸೃಷ್ಟಿಯಾಗಿದೆ. ಮದ್ದೂರು ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ. ಮಾದರಹಳ್ಳಿ ಬಳಿಯ ಹರಳಹಳ್ಳಿ ಕ್ರಾಸ್ ಬಳಿ ಮರದ ಕೆಳಗೆ ನಿಂತಿದ್ದ ವೇಳೆ ವೈದ್ಯನಾಥಪುರದ ಮಧು (34) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶಿವಪುರದ ಗೌರಮ್ಮ‌ (80) ಮನೆಯಲ್ಲಿದ್ದಾಗ ಸಿಡಿಲಿನ ಶಬ್ದಕ್ಕೆ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: Cyclone Mocha: ಮೋಚಾ ಚಂಡಮಾರುತ ಇಂದು ಉಗ್ರ, ಭಾರಿ ಮಳೆ ಸೂಚನೆ

ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಮೇಲ್ಚಾವಣಿ ಹಾರಿಹೋಗಿದೆ. ಬಿರುಗಾಳಿ ಮಳೆಗೆ ಹಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯಗೊಂಡಿದೆ. ಮದ್ದೂರು ಪಟ್ಟಣದ ಬಳಿ ಸರ್ವೀಸ್ ರಸ್ತೆಗೆ ಬೃಹತ್‌ ಮರ ಉರುಳಿ ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

Exit mobile version