ಬೆಂಗಳೂರು: ಕರ್ನಾಟಕಕ್ಕೆ ನೈರುತ್ಯ ಮುಂಗಾರು (Southwest Monsoon) ಕಾಲಿಟ್ಟಿದ್ದು, ಕಾರವಾರ ಮತ್ತು ಮಡಿಕೇರಿಯನ್ನು ಪ್ರವೇಶಿಸಿದೆ. ಇನ್ನೆರಡು ದಿನಗಳಲ್ಲಿ ಕೆಲವು ಭಾಗಗಳಲ್ಲಿ ಆವರಿಸಲಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain news) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ.
ಈ ವರ್ಷ ನೈರುತ್ಯ ಮುಂಗಾರು ವಾಡಿಕೆಯ ಮಳೆಯಾಗುವ ನಿರೀಕ್ಷೆ ಇದೆ. ಜೂನ್ ಮೊದಲೆರಡು ವಾರದೊಳಗೆ ಪ್ರವೇಶಿಸುವ ಮುಂಗಾರು ಮಳೆಯು ಜುಲೈ ಹಾಗೂ ಆಗಸ್ಟ್, ಸೆಪ್ಟೆಂಬರ್‌ವರೆಗೆ ಇರಲಿದೆ. ಸಾಮಾನ್ಯವಾಗಿ ವಾಡಿಕೆಯ ಪ್ರಕಾರ ಈ ನಾಲ್ಕು ತಿಂಗಳಲ್ಲಿ ರಾಜ್ಯಕ್ಕೆ 83 ಸೆಂ.ಮೀ ನಷ್ಟು, ಬೆಂಗಳೂರಲ್ಲಿ ನಾಲ್ಕು ತಿಂಗಳಲ್ಲಿ 60 ಸೆಂ.ಮೀ ಮಳೆಯಾಗಬೇಕೆಂದು ತಜ್ಞರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಭರ್ಜರಿ ಮಳೆ
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳು ಗಾಳಿಯ ವೇಗವು ಗಂಟೆಗೆ 40-50ಕಿ.ಮೀ ತಲುಪುವ ಸಾಧ್ಯತೆ ಇದೆ. ಈ ವೇಳೆ ಅಲೆಗಳ ಅಬ್ಬರ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಜತೆಗೆ ಪ್ರವಾಸಿಗರು, ಸಮುದ್ರ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಂದು ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಿರುಗಾಳಿಯು ಬೀಸಲಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮರದಡಿ ನಿಲ್ಲದಂತೆ ಎಚ್ಚರಿಸಲಾಗಿದೆ.
ಇದನ್ನೂ ಓದಿ: Viral news: ಮಳೆ ಬರದ ಊರಿನಲ್ಲಿ ಒಲ್ಲದ ವಧು- ವರನಿಗೆ ಕಂಕಣಯೋಗ!
ಧಾರವಾಡ, ಮಂಡ್ಯ, ಶಿವಮೊಗ್ಗ, ವಿಜಯನಗರ ಸೇರಿದಂತೆ ಬಾಗಲಕೋಟೆ, ಬಳ್ಳಾರಿ, ಬೆಳಗಾವಿಯಲ್ಲಿ ವ್ಯಾಪಕ ಮಳೆಯಾಗಲಿದೆ. ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳದಲ್ಲೂ ಮಳೆಯ ಅಬ್ಬರ ಇರಲಿದೆ. ತುಮಕೂರು, ಮೈಸೂರು, ರಾಯಚೂರು, ಕಲಬುರಗಿಗೂ ಮಳೆ ಅಲರ್ಟ್ ನೀಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ