ಬೆಂಗಳೂರು/ಮಂಡ್ಯ: ನೀಲಾಕಾಶದಲ್ಲಿ ಸೂರ್ಯ ಮರೆಯಾಗಿದ್ದರೂ ವರುಣ (Rain News) ಮಾತ್ರ ತನ್ನ ಕೃಪೆ ತೋರುತ್ತಿಲ್ಲ. ಮುಂಗಾರು (Southwest monsoon) ಪ್ರವೇಶವಾದರೂ ಮಳೆರಾಯನ ಸದ್ದು ಗದ್ದಲವಿಲ್ಲ. ವಾರಂತ್ಯಕ್ಕೆ ಕೇವಲ 10 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಇತ್ತ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಮುಂಗಾರು ಬೆಳೆ ನಾಟಿ ಮಾಡದಂತೆ ಮಂಡ್ಯ ಜಿಲ್ಲೆಯ ರೈತರಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಳೆ ನೋಡಿ ನಾಟಿ ಮಾಡಿ
ಮಳೆಬಾರದೇ ಇದ್ದರೆ ಬೆಳೆ ನಾಟಿ ಮಾಡಲೇಬೇಡಿ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಸಂಬಂಧ ಕೆಆರ್‌ಎಸ್ ಅಧೀಕ್ಷಕ ಇಂಜನೀಯರ್ ಆನಂದ್ ಮಾತನಾಡಿದ್ದು, ಮಳೆ ಬಾರದೆ ಹಿನ್ನಲೆಯಲ್ಲಿ ಬೆಳೆದು ನಿಂತ ಬೆಳೆಗೆ ನೀರಿನ ಸಮಸ್ಯೆಯಾಗಿತ್ತು. ಕಳೆದ ತಿಂಗಳು 13 ರಂದು ನಾಲೆಗೆ ನೀರು ಬಿಡಲಾಗಿತ್ತು. ಅದು ಬೆಳೆದು ನಿಂತ ಬೆಳೆಗೆ ಮಾತ್ರ ಬಳಸಲು ಎಂದು ಸೂಚಿಸಲಾಗಿತ್ತು.
ಈಗ ನಾಲೆಗೆ ನೀರು ನಿಲ್ಲಿಸಲಾಗಿದೆ. ಪ್ರತಿ ವರ್ಷ ಮೇ ತಿಂಗಳ ಕೊನೆವರೆಗೆ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರದಂತೆ ನೀರು ಬಿಡುವುದು ವಾಡಿಕೆ. ಆದರೆ ಈಗ ಮಳೆ ಇಲ್ಲದ ಕಾರಣಕ್ಕೆ ಹೊಸ ಬೆಳೆ ಬೆಳೆಯಲು ನೀರಿಲ್ಲ. ಕುಡಿಯುವ ನೀರಿಗೆ ಯೋಚನೆ ಮಾಡುವ ಸ್ಥಿತಿ ಎದುರಾಗಿರುವುದರಿಂದ ಬೆಳೆ ಬಗೆಗೆ ಯೋಚನೆ ಮಾಡುವ ಹಾಗೆ ಇಲ್ಲ. ದಯಮಾಡಿ ರೈತರು ಮಳೆ ನೋಡಿ ಬೆಳೆ ನಾಟಿ ಮಾಡುವಂತೆ ತಿಳಿಸಿದ್ದಾರೆ.
ಡ್ಯಾಂ ನಲ್ಲಿರುವ ನೀರಿನ ಪೈಕಿ 60 ಅಡಿಗಿಂತ ಕಡಿಮೆ ನೀರನ್ನು ಡೆಡ್ ಸ್ಟೋರೆಜ್ ಆಗಿರುತ್ತೆ. ಮುಂಗಾರು ಮಳೆ ಬಂದರಷ್ಟೇ ಜಿಲ್ಲೆಯ ರೈತರು ಮುಂಗಾರು ಬೆಳೆ ನಾಟಿ ಮಾಡಿ, ಇಲ್ಲದಿದ್ದರೆ ಬೆಳೆ ನಾಟಿ ಮಾಡುವುದು ಬೇಡವೇ ಬೇಡ ಎಂದು ಆನಂದ್ ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲಿ ಅಷ್ಟೇ ಮಳೆಯಾರ್ಭಟ
ಜು.2ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಮನಗರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು, ಮಿಂಚಿನ ಸಹಿತ ಭಾರಿ ಮಳೆಯಾಗಲಿದೆ. ಉಳಿದಂತೆ ಮಲೆನಾಡಿನ ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾದರೆ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಡುಗು ಜತೆಗೆ ಧಾರಾಕಾರ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Monsoon Fashion: ಮಾನ್ಸೂನ್‌ನ ಉಲ್ಲಾಸ ಹೆಚ್ಚಿಸುವ ಬಣ್ಣ ಬಣ್ಣದ ಡಂಗ್ರೀಸ್
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 33 ಡಿ.ಸೆ – 24 ಡಿ.ಸೆ
ಗದಗ: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ
ಬೆಳಗಾವಿ: 27 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 25 ಡಿ.ಸೆ
ಮಂಗಳೂರು: 30 ಡಿ.ಸೆ – 25 ಡಿ.ಸೆ
ಹೊನ್ನಾವರ: 29 ಡಿ.ಸೆ- 24 ಡಿ.ಸೆ
ಬೆಂಗಳೂರು ನಗರ: 30 ಡಿ.ಸೆ – 20 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ