ಬೆಂಗಳೂರು: ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಭಾಗಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ವರುಣ ಗುಡುಗಲಿದ್ದಾನೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ರಾಮನಗರ ಮತ್ತು ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಬೆಳಗಾವಿ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಮಳೆಯ ಸಿಂಚನ ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರಲಿದೆ. ಇದರಿಂದಾಗಿ ಕೆಲವೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬಿರುಗಾಳಿಯೊಂದಿಗೆ ಗುಡುಗುವ ವರುಣ
ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಒಳನಾಡಿನಲ್ಲಿ ಗಂಟೆಗೆ 40-50ಕಿ.ಮೀ ಹಾಗೂ ಕರಾವಳಿಯಲ್ಲಿ ಗಂಟೆಗೆ 30-40ಕಿ.ಮೀ ತಲುಪುವ ಸಾಧ್ಯತೆ ಇದೆ. ಕೆಲವೊಮ್ಮೆ 55ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮಳೆ ನಡುವೆಯೂ ಕೆಲವು ಭಾಗದಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ. ಸಾಮಾನ್ಯಕ್ಕಿಂತ 3-4ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ನಿರ್ಬಂಧದ ನಡುವೆಯೂ ಕಡಲಿಗಿಳಿದ ಮೀನುಗಾರರು
ಬಿಪರ್‌ಜಾಯ್ ಸೈಕ್ಲೋನ್ ಮುನ್ನೆಚ್ಚರಿಕೆ ಕ್ರಮವಾಗಿ ಕಡಲಿನಲ್ಲಿ ಮೀನುಗಾರಿಯನ್ನು ನಿರ್ಬಂಧಿಸಲಾಗಿದೆ. ಆದರೂ ಜೂ.15ರ ಗುರುವಾರದಂದು ಮಂಗಳೂರಿನ ಹೊರವಲಯದ ಸೂರತ್ಕಲ್‌ನಲ್ಲಿ ಮೀನುಗಾರರು ಕಡಲಿಗಿಳಿದಿರುವುದು ಕಂಡು ಬಂದಿದೆ. ಮೀನುಗಾರರು ಬಿಪರ್‌ಜಾಯ್ ಚಂಡಮಾರುತದ ವಿರುದ್ಧವೇ ಸೆಣೆದಾಟಕ್ಕಿಳಿದಿದ್ದಾರೆ. ಅದರ ವಿಡಿಯೊ ಇಲ್ಲಿದೆ.
ಇದನ್ನೂ ಓದಿ: ಪಿಯು ವಿದ್ಯಾರ್ಥಿನಿ ಜತೆ ಉಪನ್ಯಾಸಕನ ಪ್ರೀತಿ-ಪ್ರೇಮ; ತಿರುಗಿ ಬಿದ್ದ ವಿದ್ಯಾರ್ಥಿ ಸಮೂಹ
ಜೂ.14ರ ಬುಧವಾರದಂದು ಉತ್ತರ ಕನ್ನಡದ ಕುಮಟಾ, ಮಡಿಕೇರಿ ಎಡಬ್ಲ್ಯೂಡಸ್, ಭಾಗಮಂಡಲದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಮಾಣಿ, ಷಣಂಬೂರು, ಸುಬ್ರಹ್ಮಣ್ಯ, ಮುಲ್ಕಿ ಹಾಗೂ ಮಂಗಳೂರು, ಬೆಳ್ತಂಗಡಿ ಸೇರಿದಂತೆ ಕಾರ್ಕಳ, ಕುಂದಾಪುರ, ಕೋಟ, ಸಿದ್ದಾಪುರ, ಮಂಕಿ ಹಾಗೂ ಅಂಕೋಲಾ, ಗೇರುಸೊಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಗರಿಷ್ಠ ತಾಪಮಾನ 39ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ