ಬೆಂಗಳೂರು: ಜೂನ್ ತಿಂಗಳು ಎಂದರೆ ಅದು ಕೃಷಿ ಚಟುವಟಿಕೆಯ ಕಾಲ. ಇಲ್ಲಿ ಮುಂಗಾರು ಪ್ರವೇಶವು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ, ಈ ಬಾರಿ ಒಂದು ವಾರ ಮುಂಗಾರು ವಿಳಂಬವಾಗಲಿದ್ದು, ಜೂನ್ 2ನೇ ವಾರ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಆದರೆ, ವಾಡಿಕೆಯಂತೆ ಮಳೆಯಾಗಲಿದೆ ಎಂಬುದು ಕೃಷಿಕರಿಗೆ ಸಂತಸ ಕೊಡುವ ಸಂಗತಿಯಾಗಿದೆ. ಆದರೆ, ಇನ್ನು 10ರಿಂದ 14 ದಿನಗಳ ಕಾಲ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ (Weather Report) ಹೇಳಿದೆ.
ಈ ಬಾರಿ ಮುಂಗಾರು ಪ್ರವೇಶವು ಅಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಜೂನ್ 1ರ ವೇಳೆಗೆ ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ, ಈ ಸಾರಿ ಜೂನ್ 4ರಂದು ಕೇರಳಕ್ಕೆ ಪ್ರವೇಶ ಪಡೆಯಲಿದೆ. ಹಾಗಾಗಿ ಕರ್ನಾಟಕದಲ್ಲಿ ಜೂನ್ 2ನೇ ವಾರದ ಹೊತ್ತಿಗೆ ಮುಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ನಾವು ಕಳೆದ ವರ್ಷದ ಅಂಕಿ-ಅಂಶವನ್ನು ತೆಗೆದುಕೊಳ್ಳುವುದಾದರೆ 2022ರ ಮೇ 29ಕ್ಕೆ ಮುಂಗಾರು ಪ್ರವೇಶವಾಗಿತ್ತು. 2021ರಲ್ಲಿ ಜೂನ್ 3, 2020ರಲ್ಲಿ ಜೂ. 1ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸಿತ್ತು. ಅದೇ 2019ರಲ್ಲಿ ಜೂನ್ 8ರಂದು ಮತ್ತು 2018ರಲ್ಲಿ ಮೇ 29ಕ್ಕೆ ಕೇರಳಕ್ಕೆ ಮುಂಗಾರು ಆಗಮನವಾಗಿತ್ತು.
ಇದನ್ನೂ ಓದಿ: Karnataka Election : ಕಾಂಗ್ರೆಸ್- ಜೆಡಿಎಸ್ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ: ಡಾ. ಸುಧಾಕರ್ ಸ್ಫೋಟಕ ಹೇಳಿಕೆ
ಆದರೆ, ಈ ವರ್ಷ ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮನವಾಗಲಿದೆ. ತರುವಾಯ ಕರ್ನಾಟಕವನ್ನು ಪ್ರವೇಶ ಮಾಡಲಿದೆ ಎಂದು ಐಎಂಡಿ ತನ್ನ ವರದಿಯಲ್ಲಿ ಹೇಳಿದೆ. ಹೀಗಾಗಿ ಕರ್ನಾಟಕಕ್ಕೆ ಜೂನ್ ಎರಡನೇ ವಾರದಂದು ಆಗಮಿಸಲಿದೆ ಎಂದು ಅಂದಾಜಿಸಲಾಗಿದೆ.
ವಾಡಿಕೆಯಂತೆ ಆಗಲಿದೆ ಮಳೆ!
ಈ ವರ್ಷ ವಾಡಿಕೆಯಂತೆ ಮಳೆ ಆಗಲಿದೆ ಎಂದು ಐಎಂಡಿ ಹೇಳಿರುವುದು ಸ್ವಲ್ಪ ಸಮಾಧಾನಕರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಂದಾಜಿಸಲಾಗುತ್ತಿದೆ. ಇನ್ನು ಎಲ್ ನಿನೋ ಎಫೆಕ್ಟ್ ಅಷ್ಟಾಗಿ ಬಾಧಿಸದು ಎಂದು ಅಂದಾಜಿಸಲಾಗಿದೆ.
ಏರಿಕೆಯಾಗಲಿದೆ ಉಷ್ಣಾಂಶ
ಇನ್ನು 12- 14 ದಿನಗಳ ವರೆಗೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಈಗಿರುವ ತಾಪಮಾನಕ್ಕಿಂತ 1.6ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Karnataka CM: ಇಂದೇ ಮುಖ್ಯಮಂತ್ರಿ ಘೋಷಣೆ, ಜತೆಗೆ ನಾಲ್ಕು ಡಿಸಿಎಂ; ಯಾರಾಗಲಿದ್ದಾರೆ ಸಚಿವರು?
ಇನ್ನು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳು ಸೇರಿದಂತೆ ಕರಾವಳಿಯ ಕೆಲವು ಕಡೆಗಳಲ್ಲಿ ಉಷ್ಣಾಂಶದಲ್ಲಿ ಏರಿಳಿತವಾಗುವ ಸಂಭವ ಹೆಚ್ಚಿದೆ ಎನ್ನಲಾಗಿದೆ. ಇಲ್ಲಿ ಈಗಿರುವ ಉಷ್ಣಾಂಶಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲೂಬಹುದು ಅಥವಾ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯೂ ಆಗಬಹುದು ಎಂದು ಹೇಳಲಾಗಿದೆ.
ಬೆಂಗಳೂರಲ್ಲೂ ಇದೆ ಬಿಸಿಲಿನ ತಾಪ
ಬೆಂಗಳೂರಿನಲ್ಲಿ ಬುಧವಾರ (ಮೇ 17) 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿದ್ದರೆ, ಗುರುವಾರ ಮತ್ತು ಶುಕ್ರವಾರ ತಲಾ 34 ಡಿಗ್ರಿ ಸೆಲ್ಸಿಯಸ್ ಹಾಗೂ ಮೇ 20ರಿಂದ ಮೇ 23ರವರೆಗೆ 33 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಕಲಬುರಗಿಯಲ್ಲಿ ಬುಧವಾರ (ಮೇ 17) ದಿಂದ ಶುಕ್ರವಾರದವರೆಗೆ 41 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿದ್ದರೆ, ಶನಿವಾರ (ಮೇ 20) ದಿಂದ ಮೇ 23ರ ಮಂಗಳವಾರದವರೆಗೆ 42 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿರಲಿದೆ ಎಂದು ಅಂದಾಜಿಸಲಾಗಿದೆ.
ಕರಾವಳಿ ಸ್ಥಿತಿ ಏನು?
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಧವಾರ (ಮೇ 17) 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿದ್ದರೆ, ಮೇ 18ರಿಂದ 23ರವರೆಗೆ 37 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮೇ 17ರಿಂದ ಮೇ 23ರವರೆಗೆ 34 ಡಿಗ್ರಿ ಸೆಲ್ಸಿಯಸ್‌ನಿಂದ 34 ಡಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಲು ಇರಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: YSV Datta : ರಾಜಕೀಯ ನಿವೃತ್ತಿ ಇಲ್ಲ, ಜೂನ್ 24ರಿಂದ ಪ್ರಾಯಶ್ಚಿತ್ತ ಯಾತ್ರೆ ಎಂದ ವೈಎಸ್‌ವಿ ದತ್ತ
ಕಲಬುರಗಿಯಲ್ಲಿ ಮಂಗಳವಾರ (ಮೇ 16) 40.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ರಾಜ್ಯದಲ್ಲಿಯೇ ಅತಿ ಹೆಚ್ಚಾಗಿದೆ.