Site icon Vistara News

ಪ್ರತಿಭಟನೆಗಳ ಬುಧವಾರ; ವಿವಿಧ ಕಾರಣಗಳಿಗಾಗಿ ರಾಜ್ಯದಾದ್ಯಂತ ದಿನವಿಡೀ ಹೋರಾಟ

ಹೋರಾಟ

ಬೆಂಗಳೂರು: ರಾಜ್ಯದಲ್ಲಿ ವಿವಿಧೆಡೆ ಹಲವು ಕಾರಣಗಳಿಗಾಗಿ ಬುಧವಾರ ಪ್ರತಿಭಟನೆಗಳು ನಡೆದವು. ಉದಯಪುರದ ಟೈಲರ್‌ ಹತ್ಯೆಯಿಂದ ಅಗ್ನಿಪಥ್‌ ವಿರೋಧದವರೆಗೆ ರಾಜ್ಯಾದ್ಯಂತ ಹೋರಾಟಗಳದ್ದೇ ಸದ್ದು.

ಹೋರಾಟದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗದಿದ್ದರೂ ಒಂದೇ ದಿನ ನಡೆದ ಈ ಪ್ರತಿಭಟನೆಗಳಿಗೆ ಭದ್ರತೆ ಕಲ್ಪಿಸುವಲ್ಲಿ, ಅಹಿತಕರ ಘಟನೆ ನಡೆಯದಂತೆ ತಡೆಯುವಷ್ಟರಲ್ಲಿ ಪೊಲೀಸ್‌ ವ್ಯವಸ್ಥೆ ಸುಸ್ತಾಗಿ ಹೋಯಿತು. ಇನ್ನೂ ಕೆಲವು ದಿನ ಪೊಲೀಸ್‌ ವ್ಯವಸ್ಥೆ ಈ ಸವಾಲನ್ನು ಎದುರಿಸುವ ಮುನ್ಸೂಚನೆಯಿದೆ.

ಹಿಂದೂ ಯುವಕನ ಕೊಲೆ ಮಾಡಿದ ದುಷ್ಕರ್ಮಿಗಳಿಗ ಕಠಿಣ ಶಿಕ್ಷೆಯಾಗಲಿ

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಹತ್ಯೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಹಾದಿಗಳು ಅಮಾಯಕ ಟೈಲರ್ ಹತ್ಯೆಮಾಡಿದ್ದಾರೆ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರತಿಭಟನಾಕಾರರು ಆಗ್ರಹಿಸಿದರು. ಮಾಜಿ ಸಚಿವ ಈಶ್ವರಪ್ಪ ಭಾಗವಹಿಸಿದ್ದರು.

ಚಿಕ್ಕಮಗಳೂರಿನ ಅಜಾದ್ ಪಾರ್ಕ್‌ನಲ್ಲಿ ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭೆಟನೆ ನಡೆಸಲಾಯಿತು.

ಶಿವಮೊಗ್ಗದ ಜಿಲ್ಲೆಯ ಸಾಗರದಲ್ಲಿ ನಗರ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಎಚ್.ಹಾಲಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬೆಂಗಳೂರು ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಉದಯಪುರ ಹತ್ಯೆ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ರಪಡಿಸಲಾಯಿತು.

ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರಿನ ಅಜಾದ್ ಪಾರ್ಕ್‌ನಲ್ಲಿ ಬಿಜೆಪಿಯಿಂದ ಮೌನಾಚರಣೆ ನಡೆಸಲಾಯಿತು. ಚಿತ್ರದುರ್ಗದ ಆನೆಬಾಗಿಲು ಬಳಿಯಿಂದ ಡಿಸಿ ಕಚೇರಿವರೆಗೆ ಬಜರಂಗದಳದಿಂದ ಪ್ರತಿಭಟನಾ‌ ಮೆರವಣಿಗೆ ನಡೆಸಿ ಕನ್ಹಯ್ಯಲಾಲ್ ಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ತಾಲಿಬಾನ್ ಸಂಸ್ಕೃತಿ ವಿರುದ್ಧ ಘೋಷಣೆ ಕೂಗಲಾಯಿತು.

ಇದನ್ನೂ ಓದಿ | ಉದಯಪುರದ ಹಿಂದೂ ಟೈಲರ್‌ ಶಿರಚ್ಛೇದ ಮಾಡಿದ ಹಂತಕರಿಗೆ ಐಸಿಸ್‌ ಲಿಂಕ್‌!

ಅಗ್ನಿಪಥ್‌ ಯೋಜನೆ ಹಿಂಪಡೆಯಲು ಪಟ್ಟು ; ಮಳವಳ್ಳಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಗ್ನಿಪಥ್‌ ಯೋಜನೆ, ಪರಿಷ್ಕೃತ ಪಠ್ಯ ಹಿಂಪಡೆಯಲು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯ: ಕೇಂದ್ರ ಸರ್ಕಾರದ ಅಗ್ನಿಪಥ್‌ ಯೋಜನೆ, ರಾಜ್ಯ ಸರ್ಕಾರದ ಪರಿಷ್ಕೃತ ಪಠ್ಯ ಹಿಂಪಡೆಯಲು ಒತ್ತಾಯಿಸಿ ಹಾಗೂ ಕೇಂದ್ರ ಸಿಬಿಐ ಮತ್ತು ಇಡಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಮಳವಳ್ಳಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಮಳವಳ್ಳಿ ಪೇಟೆ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಲಾಯಿತು. ಮದ್ದೂರು-ಕೊಳ್ಳೇಗಾಲ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಭರವಸೆ ನೀಡಿದ್ದಾರೆ ಎಂದು ಟೀಕಿಸಿದ ನರೇಂದ್ರಸ್ವಾಮಿ, ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ವಿರುದ್ಧ ಇಡಿ ಅಸ್ತ್ರ ಬಳಕೆ ಮಾಡಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಹೋರಾಟ ಹತ್ತಿಕ್ಕುವ ಬಿಜೆಪಿ ಸರ್ಕಾರದ ಪ್ರಯತ್ನ ಫಲಿಸುವುದಿಲ್ಲವೆಂದು ಕಿಡಿಕಾರಿದರು.

ಪಠ್ಯ ಪರಿಷ್ಕರಣೆ ಮೂಲಕ ಅಂಬೇಡ್ಕರ್, ಬಸವಣ್ಣ, ಕುವೆಂಪು ಸಹಿತ ಮಹನೀಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೇ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಿ, ಪಠ್ಯ ಪರಿಷ್ಕರಣೆ ಕೈಬಿಡಬೇಕು ಎಂದು ಆಗ್ರಹಿಸಿದರು.

ತೀಸ್ತಾ ಸೆಟಲ್ವಾಡ್ ಬಂಧನಕ್ಕೆ ಆಕ್ಷೇಪ ; ಉಡುಪಿಯಲ್ಲಿ ಸಹಬಾಳ್ವೆ ಸಂಘಟನೆ ಹೋರಾಟ

ಉಡುಪಿ: ತೀಸ್ತಾ ಸೆಟಲ್ವಾಡ್ ಮತ್ತು ಗುಜರಾತ್ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಸಹಬಾಳ್ವೆ ಸಂಘಟನೆಯ ವತಿಯಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರ ಫಣಿರಾಜ್ ಮಾತನಾಡಿ, ಗುಜರಾತ್‌ನ ಗೋಧ್ರಾ ಹತ್ಯಾಕಾಂಡ ಸಂತ್ರಸ್ಥರ ಪರ ನ್ಯಾಯಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ತೀಸ್ತಾ ಸೆಟಲ್ವಾಡ್ ಅವರಿಗೆ ಮೋದಿ ಸರ್ಕಾರ, ಗುಜರಾತ್ ಪೋಲಿಸರು ನಿರಂತವಾಗಿ ಒತ್ತಡವನ್ನು ಹೇರುತ್ತಾ ಬಂದಿದ್ದರು. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಹಬಾಳ್ವೆ ಸಂಘಟನೆಯ ಅಮೃತ್ ಶೆಣೈ, ವೆರೊನಿಕಾ ಕರ್ನೆಲಿಯೋ, ಕಾಂಗ್ರೆಸ್ ನಾಯಕ ರಮೇಶ್ ಕಾಂವನ್, ಸಿಪಿಐಎಂ ನ ಬಾಲಕೃಷ್ಣ ಶೆಟ್ಟಿ, ದಲಿತ ಸಂಘಟನೆಯ ಸುಂದರ್ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ತೀಸ್ತಾ ಸೆಟಲ್ವಾಡ್ ಮತ್ತು ಶ್ರೀ ಕುಮಾರ್ ಬಂಧನ ವಿರೋಧಿಸಿ ಸಹಬಾಳ್ವೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಗುತ್ತಿಗೆ ನೌಕರರನ್ನು ಕಾಯಂ ಮಾಡಲು ಒತ್ತಾಯ

ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಬೇಕು ಹಾಗೂ ಗುತ್ತಿಗೆ ನೌಕರರನ್ನು ಕಾಯಂ ನೌಕರರನ್ನಾಗಿ ಮಾಡಲು ಒತ್ತಾಯಿಸಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ನಗರದ ನಗರದ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಧಾರವಾಡದಲ್ಲಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ | ಗುಜರಾತ್‌ ಗಲಭೆ ಪ್ರಕರಣದ ತನಿಖೆಗೆ ಅಸಹಕಾರ, ತೀಸ್ತಾ ಸೆಟಲ್ವಾಡ್‌ ಜುಲೈ 1ರ ತನಕ ಪೊಲೀಸ್‌ ಕಸ್ಟಡಿಗೆ

Exit mobile version