ಮಂಗಳೂರು: ಕೆಲವೇ ದಿನಗಳ ಅವಧಿಯಲ್ಲಿ ಮೂರು ಕೊಲೆಗಳು ನಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಸಮುದಾಯಗಳ ಪ್ರಮುಖ ಮುಖಂಡರು ಭಾಗವಹಿಸಿರಲಿಲ್ಲ. ಆದರೆ, ಭಾಗವಹಿಸಿದ ಪ್ರಮುಖರು ಹಲವು ಸಲಹೆಗಳನ್ನು ನೀಡಿದ್ದಾರೆ. ಶಾಂತಿ ಸ್ಥಾಪನೆಗಾಗಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕು ಎನ್ನುವುದು ಅವುಗಳಲ್ಲಿ ಪ್ರಮುಖವಾದ ಒಂದು ಸಲಹೆ.
ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಎಸ್ಪಿ ಋಷಿಕೇಶ್ ಸೋನಾವಾಣೆ, ಎಡಿಜಿಪಿ ಅಲೋಕ್ ಕುಮಾರ್ ಮತ್ತು ಇತರ ಅಧಿಕಾರಿಗಳು ಹಾಗೂ ಹಲವು ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ದ್ವೇಷಪೂರಿತ ಸಂದೇಶಗಳನ್ನು ರವಾನಿಸುವವರ ಮೇಲೆ ನಿಗಾ ಇಡಲಾಗುವುದು, ಪ್ರಚೋದನಾತ್ಮಕ ಹೇಳಿಕೆ ನೀಡದಂತೆ ರಾಜಕಾರಣಿಗೆ ಮನವಿ ಮಾಡಲು ಸಲಹೆ ಬಂತು ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕದಡಲಾಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಬಲವಾಗಿ ಕೇಳಿಬಂತು. ಹೀಗಾಗಿ ವಾರಾಂತ್ಯದಲ್ಲಿ ಇಂಟರ್ನೆಟ್ ಬಂದ್ ಮಾಡಲು ಸಲಹೆಯೂ ಬಂದಿತ್ತು. ಆದರೆ, ಆದರೆ ಹಾಗೆ ಮಾಡಿದರೆ ಎಲ್ಲರಿಗೂ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಅದಕ್ಕೆ ಒಲವು ತೋರುತ್ತಿಲ್ಲ ಎಂದು ಅಲೋಕ್ ಕುಮಾರ್ ಹೇಳಿದರು.
ಕೆಲವು ಪ್ರಮುಖ ಸಲಹೆಗಳು
1. ಶಾಂತಿ ಸಮಿತಿ ಸಭೆಗಳನ್ನು ಸುಳ್ಯ, ಪುತ್ತೂರು, ಬೆಳ್ಳಾರೆ ಮತ್ತು ಇತರ ಸ್ಥಳೀಯ ಸ್ಥಳಗಳಲ್ಲಿ ಮಾಡಬೇಕು.
2. ಎಲ್ಲಾ 3 ಕೊಲೆ ಪ್ರಕರಣ ಸಂತ್ರಸ್ತರ ಕುಟುಂಬವನ್ನು ಸಿಎಂ ಭೇಟಿ ಮಾಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತ.
3. ಮೃತ ಕುಟುಂಬಗಳಿಗೆ ಪ್ರತಿಯೊಂದೂ ಸಮಾನ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.
4. ಪ್ರಚೋದನಕಾರಿ ಹೇಳಿಕೆ ನೀಡುವವರು, ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲು
೫. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಂಘಟನೆಗಳು ಮತ್ತು ಮುಖಂಡರು ಭಾಗವಹಿಸಿಲ್ಲ, ಆದ್ದರಿಂದ ಪ್ರತಿಯೊಬ್ಬರನ್ನು ಒಳಗೊಂಡ ಮತ್ತೊಂದು ಸಭೆಯನ್ನು ಮತ್ತೆ ಏರ್ಪಡಿಸಬೇಕು.
೬. ಆರೋಪಿಗಳ ಹೊರತಾಗಿ ಪಿತೂರಿಯಲ್ಲಿ ತೊಡಗಿರುವ ಮತ್ತು ಆರೋಪಿಗಳಿಗೆ ವಿವಿಧ ವಿಧಾನಗಳಿಂದ ಬೆಂಬಲ ನೀಡುವವರನ್ನು ಸಹ ಕಾನೂನು ಶಿಕ್ಷಗೆ ತರಲಾಗುವುದು.
೭. ದಾರಿತಪ್ಪಿದ ಯುವಕರಲ್ಲಿ ಮದ್ಯ, ಮಾದಕ ದ್ರವ್ಯಗಳ ಚಟ ನಿಲ್ಲಿಸುವ ಪ್ರಯತ್ನ ಆಗಬೇಕು.
೮. ಆರೋಪಿಗಳಿಗೆ ಜೈಲುಗಳಲ್ಲಿ ಸಿಗುವ ಸೌಲಭ್ಯಗಳನ್ನು ಕಡಿತಗೊಳಿಸಬೇಕು.
ಇದನ್ನೂ ಓದಿ | ಶಾಂತಿ ಯಾರಿಗೂ ಬೇಡ! | ದ.ಕ. ಡಿಸಿ ಕರೆದ ಸಭೆಗೆ ಮುಸ್ಲಿಂ ಸಂಘಟನೆಗಳ ಬಹಿಷ್ಕಾರ, ಹಿಂದೂ ಮುಖಂಡರು ಗೈರು