ಗದಗ: ಈ ಮನುಷ್ಯನಿಗೆ ಏನೆನ್ನಬೇಕೋ ಏನೋ? ಗ್ರಹಚಾರದ ಜತೆ ಆಟ ಆಡುತ್ತೇನೆ ಎಂದು ಹೋದರೆ ಹೀಗೇ ಆಗುತ್ತದೆ. ಅದರಲ್ಲೂ ಕುಡಿದ ಅಮಲು ಮನುಷ್ಯನನ್ನು ಮತ್ತಷ್ಟು ತಿಕ್ಕಲುತನಕ್ಕೆ ದೂಡುತ್ತದೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ಇಲ್ಲೊಬ್ಬ ಕುಡುಕ ಮಹಾಶಯನು, ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಕೊನೆಗೆ ಸತ್ತೇ ಹೋದ ಎಂದು ಅಂದುಕೊಂಡಿದ್ದವರಿಗೆ ಇನ್ನೂ ಬದುಕಿದ್ದಾನೆ ಎಂಬ ಸುದ್ದಿ ಬಂದಿದೆ. ಆದರೆ, ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಈತ ಹಾವು ಹಿಡಿಯುವ ಹುಚ್ಚಾಟದ ವಿಡಿಯೊ ಈಗ ವೈರಲ್ (Video Viral) ಆಗಿದೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿ ಸಿದ್ದಪ್ಪ ಬಳಗಾನೂರು ಎಂಬಾತನೇ ಈ ದುಸ್ಸಾಹಸಕ್ಕೆ ಕೈಹಾಕಿದವನು. ಕುಡಿತದ ಮತ್ತಿನಲ್ಲಿ ರಸ್ತೆಯಲ್ಲೆಲ್ಲ ಅಡ್ಡಾದಿಡ್ಡಿ ಓಡಾಡುತ್ತಾ, ಅಗಲವನ್ನು ಅಳೆಯುವವನಂತೆ ಹೋಗುತ್ತಿದ್ದವನಿಗೆ ಎದುರಿಗೆ ಹಾವೊಂದು ಕಂಡಿದೆ. ಈ ಹಾವನ್ನು ಕಂಡು ಜನರು ಹೆದರಿ ಓಡಿದರೆ, ಈತ ಮಾತ್ರ ಭಯಂಕರ ಧೈರ್ಯವಂತನಂತೆ ಎದುರು ನಿಂತಿದ್ದಾನೆ.
ಇದನ್ನೂ ಓದಿ: Acid attack : ಆ್ಯಸಿಡ್ ದಾಳಿ ಸಂತ್ರಸ್ತೆಗೆ ಸಿಎಂ ಸಚಿವಾಲಯದಲ್ಲಿ ಉದ್ಯೋಗ ನೀಡಿದ ಸಿದ್ದರಾಮಯ್ಯ
“ಅಯ್ಯೋ.. ಇದೂ ಒಂದು ಹಾವಾ? ಇಂಥ ಹಾವನ್ನು ನಾನು ಎಷ್ಟು ನೋಡಿಲ್ಲ? ನನ್ನ ಕಿರು ಬೆರಳಿನಲ್ಲಿ ಇದನ್ನು ಆಟವಾಡಿಸಿ ಬಿಡುತ್ತೇನೆ. ಯಾಕೆ ಗೊತ್ತಾ? ನನ್ನ ಕೈಯಲ್ಲಿ ಗರುಡ ರೇಖೆ ಇದೆ. ಯಾವ ಹಾವೂ ನನ್ನನ್ನು ಏನೂ ಮಾಡುವುದಿಲ್ಲ. ಗರುಡ ರೇಖೆಯನ್ನು ನೋಡಿದರೆ ಎಂಥ ಹಾವಾದರೂ ಸುಮ್ಮನಾಗಲೇ ಬೇಕು. ಇನ್ನು ಈ ಹಾವು ಯಾವ ಲೆಕ್ಕಾ? ಇದೋ ನೋಡಿ ಹಿಡಿಯುತ್ತೇನೆ” ಎಂದು ರಸ್ತೆಯಲ್ಲಿ ಬರುತ್ತಿದ್ದ ಹಾವನ್ನು ಹಿಡಿದುಕೊಂಡಿದ್ದಾನೆ.
ಹಾಗೇ ಎರಡೂ ಕೈಯಲ್ಲಿ ಹಾವನ್ನು ಹಿಡಿದು ಮಾತನಾಡುತ್ತಲೇ ಮತ್ತೆ ಆ ಹಾವನ್ನು ದೊಪ್ಪೆಂದು ನೆಲಕ್ಕೆ ಒಗೆದಿದ್ದಾನೆ. ಮತ್ತೆ ಅದನ್ನು ಹಿಡಿಯಲು ಮುಂದಾಗಿದ್ದಾನೆ. ಆಗ ಅಲ್ಲಿದ್ದ ಜನರು, “ಏಯ್, ಹೋಗಲಿ ಬಿಡು. ಅದನ್ನು ಮುಟ್ಟಬೇಡ, ಕಚ್ಚಿದರೆ ಕಷ್ಟ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ವಿಷ ಇದೆಯೋ ಮಾರಾಯಾ, ಬೇಡ್ವೋ” ಎಂದು ಕೂಗಿಕೊಂಡಿದ್ದಾರೆ. ಆದರೆ, ಕುಡಿದ ಮತ್ತಿನಲ್ಲಿದ್ದ ಈತನಿಗೆ ಅದ್ಯಾವುದೂ ಕಿವಿಗೆ ಬೀಳಲೇ ಇಲ್ಲ.
ಇತ್ತ ಗಾಬರಿಗೊಂಡಿದ್ದ ಹಾವು ಸಹ ಸರಸರನೆ ಸುರಕ್ಷಿತ ಪ್ರದೇಶಕ್ಕೆ ಹೋಗುವ ತವಕದಲ್ಲಿತ್ತು. ಆದರೂ ಬಿಡದ ಸಿದ್ದಪ್ಪ ಆ ಹಾವನ್ನು ಮತ್ತೆ ಹಿಡಿದುಕೊಂಡು ಬಂದಿದ್ದಾನೆ. ಈ ವೇಳೆ ಜನರೆಲ್ಲರೂ, “ಬೇಡ ಬೇಡ” ಎಂದು ಕೂಗಿಕೊಂಡಿದ್ದಾರೆ. ಅದಕ್ಕೆ ಸಿದ್ದಪ್ಪ, “ಕೂಗಬೇಡ್ರೋ, ಏನೂ ಆಗಲ್ಲ.. ನೋಡು ಹಿಡಿಯುತ್ತೇನೆ” ಎಂದು ಮತ್ತೆ ಹಿಡಿದುಕೊಂಡಿದ್ದಾನೆ. ಹಿಡಿದು ರಸ್ತೆಯಲ್ಲಿ ನಿಂತು ಏನನ್ನೋ ಸಾಧಿಸಿದೆ ಎಂದು ಪೋಸ್ ಕೊಟ್ಟಿದ್ದಾನೆ. ಕೊನೆಗೆ ಬಿಡಬೇಕಾದರೆ ಮತ್ತೆ ಹಾವು ಕಚ್ಚಿದೆ ಎನ್ನಲಾಗಿದೆ. ಒಟ್ಟು ನಾಲ್ಕು ಬಾರಿ ಹಾವು ಕಚ್ಚಿದ್ದರಿಂದ ವಿಷವೇರಿದೆ.
ಕುಡಿದ ಅಮಲಿನಲ್ಲಿ ಹಾವು ಹಿಡಿಯುತ್ತಿರುವ ವಿಡಿಯೊ
ಇದನ್ನೂ ಓದಿ: Weather report : ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಯ್ತು ಮುಂಗಾರು ಮಳೆಯಾಟ!
ಅಂತ್ಯಕ್ರಿಯೆಗೆ ಸಿದ್ಧತೆ
ಕೂಡಲೇ ಸಿದ್ದಪ್ಪನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಷ್ಟರಲ್ಲಿ ಆತ ವಿಷವೇರಿ ಮೃತಪಟ್ಟಿದ್ದಾನೆ ಎಂದು ಗ್ರಾಮದಲ್ಲಿ ಸುದ್ದಿ ಹರಡಿತ್ತು. ಹೀಗಾಗಿ ಗ್ರಾಮದಲ್ಲಿ ಅಂತ್ಯಕ್ರಿಯೆಗೂ ಸಿದ್ಧತೆಯನ್ನು ನಡೆಸಲಾಗಿತ್ತು. ಇನ್ನೇನು ಸತ್ತೇ ಹೋದ ಎನ್ನುವಷ್ಟರಲ್ಲಿ ಆಸ್ಪತ್ರೆಯಲ್ಲಿ ಎದ್ದು ಕುಳಿತಿದ್ದಾನೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವಿನ ದವಡೆಯಿಂದ ಸಿದ್ದಪ್ಪ ಪಾರಾಗಿದ್ದಾನೆ. ಯಾವುದೇ ಸುರಕ್ಷಿತ ಪರಿಕರಗಳು ಇಲ್ಲದೆ ಹಾವು ಹಿಡಿಯಲು ಹೋಗಿದ್ದರಿಂದ ಈ ಎಡವಟ್ಟಾಗಿದೆ.