ಬೆಂಗಳೂರು: ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶರಣರನ್ನು ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
ನಿಯಮದ ಪ್ರಕಾರ ಪೊಲೀಸರು ಮುರುಘಾಶ್ರೀಗಳ ಡಿ ಎನ್ ಎ ಸ್ಯಾಂಪಲ್ ಪಡೆಯಬೇಕಾಗುತ್ತದೆ. ಘಟನಾ ಸ್ಥಳಕ್ಕೆ ಹೋಗಿ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರ್ ನಡೆಯಲಿದೆ. ಮಹಜರ್ ನಡೆಸುವ ವೇಳೆ ಬಟ್ಟೆ, ಕೂದಲು, ರಕ್ತ ಮತ್ತು ಮೂತ್ರದ ಮಾದರಿ ಪಡೆಯಲಾಗುತ್ತದೆ. ಹೀಗೆ ಪಡೆದ ಎಲ್ಲಾ ಸ್ಯಾಂಪಲ್ ಗಳನ್ನು ಎಫ್ ಎಸ್ ಎಲ್ ಗೆ ಕಳಿಸಬೇಕಾಗುತ್ತದೆ.
ಮಠದ ಆವರಣದ ಸಿಸಿ ಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಯಲಿದೆ. ಹಾಸ್ಟೆಲ್ ಸಿಬ್ಬಂದಿಯ ವಿಚಾರಣೆಯೂ ನಡೆಯಲಿದೆ. ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆ ಹಾಕಬೇಕಾಗುತ್ತದೆ.
ಬಂಧನ ಬೆನ್ನಲ್ಲೆ ಕೋರ್ಟ್ ಗೆ ಅಥವಾ ನ್ಯಾಯಾಧೀಶರ ಮನೆಗೆ ಶ್ರೀಗಳನ್ನು ಹಾಜರುಪಡಿಸುತ್ತಾರೆ. ಬಳಿಕ ಶ್ರೀಗಳನ್ನು ಹೆಚ್ಚಿನ ವಿಚಾರಣೆ ನಡೆಸಲು ಮನವಿ ಮಾಡುತ್ತಾರೆ. ಕೋರ್ಟ್ ಗೆ ರಿಮ್ಯಾಂಡ್ ಅಪ್ಲಿಕೇಷನ್ ಹಾಕುವ ಮೂಲಕ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯಲು ಮನವಿ ಮಾಡುತ್ತಾರೆ. ಹೀಗೆ ರಿಮ್ಯಾಂಡ್ ಅಪ್ಲಿಕೇಷನ್ ಹಾಕುವಾಗ ಈಗ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸುತ್ತಾರೆ. ಸಂತ್ರಸ್ಥೆಯರ ಹೇಳಿಕೆ ಹಾಗೂ ಅವರ ವೈದ್ಯಕೀಯ ವರದಿಗಳನ್ನೂ ಉಲ್ಲೇಖಿಸುತ್ತಾರೆ. ಬಂಧಿತ ಎರಡನೇ ಆರೋಪಿತೆ ತಪ್ಪೊಪ್ಪಿಗೆ ಹೇಳಿಕೆ ನೀಡಿದರೆ ಅದನ್ನೂ ರಿಮ್ಯಾಂಡ್ ಅಪ್ಲಿಕೇಷನ್ ನಲ್ಲಿ ಉಲ್ಲೇಖ ಮಾಡಲಾಗುತ್ತದೆ