Site icon Vistara News

Reservation | ಮೀಸಲಾತಿ ಘೋಷಣೆ ಕುರಿತು ಸಮುದಾಯದವರು ʼವಿಸ್ತಾರʼಕ್ಕೆ ಹೇಳಿದ್ದೇನು? ಕಾನೂನು ತಜ್ಞರ ಅಭಿಪ್ರಾಯವೇನು?

Karnataka Reservation

ಬೆಂಗಳೂರು: ರಾಜ್ಯದ ಪ್ರಬಲ ಸಮುದಾಯಗಳಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (Reservation) ಬದಲಿಗೆ ಹೊಸದಾಗಿ 2ಡಿ ವರ್ಗವನ್ನು ಸೃಜಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೆ 2ಸಿ ವರ್ಗಕ್ಕೆ ಸೇರ್ಪಡೆ ಮಾಡುವ ತೀರ್ಮಾನ ತೆಗೆದುಕೊಳ್ಳುವ ಮೂಲಕ ಚುನಾವಣೆಗೂ ಮುನ್ನ ಪ್ರಬಲ ಸಮುದಾಯಗಳ ಮತಗಳನ್ನು ಕ್ರೋಡೀಕರಿಸಲು ಬಿಜೆಪಿ ನೇತೃತ್ವದ ಸರ್ಕಾರ ಮುಂದಡಿ ಇಟ್ಟಿದೆ.

ಆದರೆ, ಮೀಸಲಾತಿ ತೀರ್ಮಾನದ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿವೆ. ಇದರಿಂದ ಸಮುದಾಯಗಳಿಗೆ ಯಾವ ಅನುಕೂಲ ಸಿಗುತ್ತದೆ? ಮೀಸಲಾತಿ ಪ್ರಮಾಣ ಎಷ್ಟು? ಸರ್ಕಾರದ ತೀರ್ಮಾನ ಎಷ್ಟರಮಟ್ಟಿಗೆ ಸಮಂಜಸವಾಗಿದೆ ಎಂಬುದರ ಚರ್ಚೆಯಾಗುತ್ತಿದೆ. ಇದರ ದಿಸೆಯಲ್ಲಿಯೇ, ಸಮುದಾಯಗಳ ರಾಜಕಾರಣಿ, ಸ್ವಾಮೀಜಿ ಹಾಗೂ ಕಾನೂನು ತಜ್ಞರು ‘ವಿಸ್ತಾರ ನ್ಯೂಸ್‌’ಗೆ ಅಭಿಪ್ರಾಯಪಟ್ಟಿದ್ದಾರೆ. ಅವರ ಅಭಿಪ್ರಾಯ ಇಲ್ಲಿದೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರು

“ನಾವು ಮೊದಲು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕು ಎಂದು ಕೇಳಿದ್ದೆವು. ಆದರೆ, ಸರ್ಕಾರದ ಹೊಸ ತೀರ್ಮಾನದ ಪ್ರಕಾರ ನಮಗೆ ಎಷ್ಟು ಪ್ರಮಾಣ ಮೀಸಲಾತಿ ಎಷ್ಟಿದೆ ಎಂಬುದು ಗೊತ್ತಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ (ಇಡಬ್ಲ್ಯೂಎಸ್‌) ಶೇ.10ರಷ್ಟು ಮೀಸಲಾತಿಯಲ್ಲಿ ನಮಗೆ ಶೇ.4ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದರೂ ಅದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ, ಸರ್ಕಾರದ ಆದೇಶದ ಪ್ರತಿ ಬಂದ ಬಳಿಕ, ನಮ್ಮ ಪಾಲು ಏನಿದೆ? ನಮ್ಮ ಸಮುದಾಯದವರಿಗೆ ಏನು ಸಿಗಲಿದೆ ಎಂಬುದನ್ನು ಚರ್ಚಿಸಿ ಮುಂದಿನ ನಡೆಯ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ಗೊಂದಲದ ಪರಿಹಾರಕ್ಕಾಗಿ ಸರ್ಕಾರದ ಪ್ರತಿ ಸಿಗಲು ಎರಡು ಮೂರು ದಿನ ಕಾಯಬೇಕಾಗಿದೆ. ಪ್ರತಿ ಸಿಕ್ಕ ನಂತರ ಹೋರಾಟ ಸೇರಿ ಮುಂದಿನ ನಡೆಗಳ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

“ಬಿಜೆಪಿ ಸರ್ಕಾರವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.. ಈ ರೀತಿಯ ಗೊಂದಲದ ಮೀಸಲಾತಿ ನೀಡಲು ಯಾರು ಕೇಳಿದ್ದರು? ಶೇ.12ರಷ್ಟು ಮೀಸಲಾತಿ ನೀಡಬೇಕು ಎಂಬುದು ಒಕ್ಕಲಿಗರ ಬೇಡಿಕೆಯಾಗಿತ್ತು. ಆದರೆ, ಇದನ್ನು ಈಡೇರಿಸುವ ಬದಲು ಸಾರ್ವಜನಿಕರನ್ನು ಸರ್ಕಾರ ಮೋಸ ಮಾಡುತ್ತಿದೆ” ಎಂದು ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. “ಪಂಚಮಸಾಲಿ ಹಾಗೂ ಒಕ್ಕಲಿಗರಿಗೂ ಇದರಿಂದ ಮೋಸವಾಗಿದೆ. ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರಿಗೂ ಸರ್ಕಾರ ಇಂತಹ ಮೋಸ ಮಾಡುತ್ತಿದೆ. ಇಷ್ಟು ದಿನದಲ್ಲಿ ಆಗದೆ ಇರುವುದು ಇನ್ನು ಮೂರು ತಿಂಗಳಲ್ಲಿ ಆಗುತ್ತದೆಯೇ? ನಾವು ಕೂಡ ಇದರ ಕುರಿತು ಇನ್ನಷ್ಟು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದುವರೆಗೆ ಇದು ಸಮುದಾಯದ ಹೋರಾಟವಾಗಿತ್ತು. ಆದರೆ, ಇನ್ನುಮುಂದೆ ರಾಜಕೀಯದ ಹೋರಾಟ ನಡೆಯುತ್ತದೆ. ಬೇರೆಯವರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಡ” ಎಂದು ಹೇಳಿದರು.

ಅಶೋಕ್‌ ಹಾರನಹಳ್ಳಿ, ಖ್ಯಾತ ನ್ಯಾಯವಾದಿ

“ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಯಾವುದೇ ರಾಜ್ಯಗಳ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಜಾಸ್ತಿ ಆಗುವಂತಿಲ್ಲ. ಈಗ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಘೋಷಿಸಿದ ಕಾರಣ ರಾಜ್ಯದ ಮೀಸಲಾತಿ ಪ್ರಮಾಣ ಶೇ.56ರಷ್ಟಾಗಿದೆ. ಯಾರಿಗೆ ಮೀಸಲಾತಿ ಇರುವುದಿಲ್ಲವೋ ಅವರಿಗೆ ಇಡಬ್ಲ್ಯೂಎಸ್‌ ಮೀಸಲಾತಿ ನೀಡಲಾಗುತ್ತದೆ. ಆದರೆ, ಇಡಬ್ಲ್ಯೂಎಸ್‌ ಮೀಸಲಾತಿ ಅಡಿಯಲ್ಲಿ ಮೀಸಲಾತಿಯ ಮರುವಿಂಗಡಣೆ ಮಾಡಲು ಸಾಧ್ಯವಿಲ್ಲ. ಇದರ ಶೇ.10ರಷ್ಟು ಮೀಸಲಾತಿಯನ್ನು ಸಮುದಾಯವಾರು ಹಂಚಿಕೆ ಮಾಡಲು ಆಗುವುದಿಲ್ಲ” ಎಂದು ಅಶೋಕ್‌ ಹಾರನಹಳ್ಳಿ ತಿಳಿಸಿದರು. “ಪ್ರವರ್ಗಗಳನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸಮಂಜಸ ಎನಿಸುತ್ತಿಲ್ಲ. ಈ ಪ್ರವರ್ಗ ಮಾಡಿರುವ ರೀತಿ ಸರಿಯಿಲ್ಲ. ಪ್ರವರ್ಗದ ಬದಲಾವಣೆಯಿಂದ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೂ, ಮೀಸಲಾತಿ ಪ್ರಮಾಣವು ಜಾಸ್ತಿಯಾಗುತ್ತದೆ. ಆದರೆ, ಸರ್ಕಾರದ ಬಳಿ ಸ್ಪಷ್ಟತೆ ಇಲ್ಲ. ಇದರಿಂದ ಹಿಂದುಳಿದ ವರ್ಗಗಳು ಹಾಗೂ ಜನರಲ್‌ ಕೆಟಗರಿಗೂ ಅನ್ಯಾಯವಾಗುತ್ತದೆ. ಹಾಗಾಗಿ, ನಾವು ಕೂಡ ಇದನ್ನು ವಿರೋಧಿಸುತ್ತೇವೆ” ಎಂದರು.

ಇದನ್ನೂ ಓದಿ | Reservation | ಪಂಚಮಸಾಲಿ-ಒಕ್ಕಲಿಗರಿಗೆ 2D ವರ್ಗ ಸೃಜನೆ: 2A ಮೀಸಲಾತಿ ಕುರಿತು ಸರ್ಕಾರದ ಮಹತ್ವದ ನಿರ್ಧಾರ

Exit mobile version