ಚಾಮರಾಜನಗರ: ಮುರಿದ ರಥ ಹಾಗೂ ದೇವಸ್ಥಾನ ಜೀರ್ಣೋದ್ಧಾರದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಗೋ ಬ್ಯಾಕ್ ಸೋಮಣ್ಣ ಅಭಿಯಾನ ಕೈಗೊಂಡಿದ್ದ ಜಿಲ್ಲೆಯ (Chamarajanagar News) ಚನ್ನಪ್ಪನಪುರ, ಅಮಚವಾಡಿ ಗ್ರಾಮಸ್ಥರ ಜತೆ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭಾನುವಾರ ಸಭೆ ನಡೆಸಿದರು. ಈ ವೇಳೆ ತಮ್ಮ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗುತ್ತಿದೆ, ನನ್ನನ್ನು ಸುಳ್ಳುಗಾರ ಎಂದು ಕರೆಯುವುದು ಎಷ್ಟು ಸರಿ? ನಾನು ಏನು ತಪ್ಪು ಮಾಡಿದ್ದೇನೆ ಎಂದು ಪ್ರಶ್ನಿಸುತ್ತಾ ಸೋಮಣ್ಣ ಭಾವುಕರಾಗಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಚನ್ನಪ್ಪನಪುರ ಅಮಚವಾಡಿ ಗ್ರಾಮಸ್ಥರ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಸಚಿವ ಸೋಮಣ್ಣ ಮಾತನಾಡಿ, ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದೀರಿ. ಬೆಂಗಳೂರಿನಿಂದ ಬೋರ್ಡ್ ತಂದು ಹಾಕಿ ತೇಜೋವಧೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಯಾರೋ ಸೃಷ್ಟಿ ಮಾಡಿ ಕಳಿಸುತ್ತಾರೆ, ಯಾರದ್ದೋ ಮಾತು ಕೇಳಿ ನೀವು ಕೆಟ್ಟದಾಗಿ ನಡೆದುಕೊಂಡರೆ ಹೇಗೆ. ಇನ್ನೊಬ್ಬರ ಮುಲಾಜಿಗೋಸ್ಕರ, ಇನ್ನೊಬ್ಬನನ್ನು ತೃಪ್ತಿಪಡಿಸಲು ನನ್ನನ್ನು ಕೆಟ್ಟದಾಗಿ ಬಿಂಬಿಸಿ ಹರಾಜು ಹಾಕಿದ್ದೀರಿ ಎಂದು ತಮ್ಮ ತೇಜೋವಧೆ ಹಿಂದೆ ರಾಜಕೀಯ ಕೈವಾಡ ಇರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ | Pancharatna: ನಮ್ಮ ದುಡಿಮೆಯನ್ನು ನಂಬಿ ಸೇವೆಗೆ ಅವಕಾಶ ನೀಡಿ: ಪಂಚರತ್ನ ಸಮಾರೋಪದಲ್ಲಿ ದೇವೇಗೌಡರ ಭಾವನಾತ್ಮಕ ನುಡಿ
ದೇವರ ಹತ್ತಿರ ಪಾಲಿಟಿಕ್ಸ್, ಚಿಲ್ಲರೆ ಕೆಲಸ ಮಾಡಬಾರದು ಕಳೆದು ಹೋಗುತ್ತೀರಿ ಎಂದು ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದ ಸೋಮಣ್ಣ, ದೇವಸ್ಥಾನ ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂಬುವುದೇ ತಪ್ಪ? ತಪ್ಪಾಗಿದ್ರೆ ಕ್ಷಮಿಸಿ. ನನ್ನನ್ನು ತೇಜೋವಧೆ ಮಾಡಿದ್ದಕ್ಕೆ ದೇವಸ್ಥಾನ ಹೇಗೆ ಅಭಿವೃದ್ಧಿ ಮಾಡುತ್ತೇನೆ ನೋಡುತ್ತಿರಿ ಎಂದು ಹೇಳಿ, ರಥ ನಿರ್ಮಾಣ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಶೀಘ್ರ ಕ್ರಮ ವಹಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನ
ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರದಲ್ಲಿ ವೀರಭದ್ರಸ್ವಾಮಿ ರಥ ನಿರ್ಮಿಸಿಕೊಡುವುದಾಗಿ ಹೇಳಿ ಸಚಿವ ಸೋಮಣ್ಣ ಮಾತು ತಪ್ಪಿದ್ದಾರೆ ಎಂದು ಗ್ರಾಮಸ್ಥರು ಗೋ ಬ್ಯಾಕ್ ಸೋಮಣ್ಣ ಎಂಬ ಅಭಿಯಾನ ಶುರುಮಾಡಿದ್ದರು. ಹೀಗಾಗಿ ಗ್ರಾಮಸ್ಥರ ಮನವೊಲಿಸಲು 24 ಕೋಮಿನ ಮುಖಂಡರ ಜತೆ ಸಚಿವ ಸೋಮಣ್ಣ ಅವರು ಸಭೆ ಕರೆದಿದ್ದರು. ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಸೋಮಣ್ಣ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಗ್ರಾಮಸ್ಥರ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | Karnataka Election: ಸಿಎಂ ಕುರ್ಚಿಗೆ ಕಚ್ಚಾಡುವವರನ್ನು ತಿರಸ್ಕರಿಸಿ ದೇಶಭಕ್ತರನ್ನು ಆಯ್ಕೆಮಾಡಿ ಎಂದು ಕರೆ ನೀಡಿದ ಅಮಿತ್ ಶಾ
ಜಿಲ್ಲಾಧಿಕಾರಿ ಕಚೇರಿಯಲ್ಲೇ ಬಿಜೆಪಿ ಶಕ್ತಿ ಕೇಂದ್ರದ ಸಭೆ
ಚನ್ನಪ್ಪನಪುರ ಗ್ರಾಮಸ್ಥರ ಸಭೆ ಬಳಿಕ ಬಿಜೆಪಿ ಶಕ್ತಿ ಕೇಂದ್ರದ ಮುಖಂಡರ ಜತೆ ಸಚಿವ ಸೋಮಣ್ಣ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲೆ ಸಭೆ ನಡೆಸಿದರು. ಬಳಿಕ ಮಾಧ್ಯಮದವರು ಇರುವುದನ್ನು ತಿಳಿದು ಅಲ್ಪ ಸಮಯದಲ್ಲಿ ಸಭೆ ಮುಗಿಸಿ, ಬೆಂಗಳೂರಿಗೆ ಹೊರಟರು.