ಬೆಂಗಳೂರು : ಚಂದ್ರಯಾನ 3 (Chandrayaan 3) ಯಶಸ್ಸಿನಿಂದ ಖುಷಿಯಾಗಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಬೆಳಗ್ಗೆ ನೇರವಾಗಿ ಅಥೆನ್ಸ್ನಿಂದ ಬೆಂಗಳೂರಿಗೆ ಬಂದು ಇಸ್ರೊ ವಿಜ್ಞಾನಿಗಳನ್ನು (ISRO Scientists) ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಇಡೀ ದೇಶದ ಪ್ರತಿನಿಧಿಯಾಗಿ ಅವರು ವಿಜ್ಞಾನಿಗಳ ಬೆನ್ನು ತಟ್ಟಿದರು.
ಬೆಳಗ್ಗೆ 6.05ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಬೆಳಗ್ಗೆ 7.45ಕ್ಕೆ ಇಸ್ರೋ ತಲುಪಿದರು. ಅದರ ನಡುವೆ ಪ್ರಧಾನಿ ಮೋದಿ ಅವರು ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಸೇರಿದವರನ್ನು ಉದ್ದೇಶಿಸಿ ಮಾತನಾಡಿದರು. ಅವರು ಈ ವೇಳೆ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಇನ್ನಷ್ಟು ವಿಸ್ತರಿಸಿದರು. ಜೈ ವಿಜ್ಞಾನ್ ಜೈ ಅನುಸಂಧಾನ್ ಎಂದು ಘೋಷಣೆ ಕೂಗಿದರು.
ಹಾಗಿದ್ದರೆ ಈ ಜೈ ಅನುಸಂಧಾನ್ ಅಂದರೇನು?
ಅನುಸಂಧಾನ್ ಎಂದರೆ ಸಂಶೋಧನೆ ಎಂದರ್ಥ. ಅಂದರೆ ಜೈ ವಿಜ್ಞಾನ, ಜೈ ಸಂಶೋಧನೆ ಎಂದರ್ಥ. ಭಾರತ ಸಂಶೋಧನೆಯ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ಇದು ನಮ್ಮ ಹೆಮ್ಮೆ ಎನ್ನುವ ಉದ್ದೇಶದಿಂದ ಈ ಹೊಸ ಘೋಷಣೆಯ ವಿಸ್ತರಣೆಯಾಗಿದೆ.
ಸಂಶೋಧನೆ ಎನ್ನುವುದು ನಮ್ಮಲ್ಲಿ ಈಗ ಆರಂಭವಾಗಿದ್ದಲ್ಲ. ಎಲ್ಲರೂ ಭೂಮಿ ಚಪ್ಪಟೆಯಾಗಿದೆ ಎಂದು ಹೇಳುತ್ತಿದ್ದ ಕಾಲದಲ್ಲೇ ಭೂಮಿ ಗೋಲಾಕಾರವಾಗಿದೆ ಎಂದು ಆರ್ಯಭಟ ಹೇಳಿದ್ದ. ನಮ್ಮ ಪಂಚಾಂಗಗಳು ಹೇಳಿದ್ದವು.
ಚಂದ್ರಯಾನ 2 ಪತನವಾದ ಜಾಗ ತಿರಂಗಾ
ಈ ನಡುವೆ ಇಸ್ರೋದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಚಂದ್ರಯಾನ್ 2 ಇಳಿದು ತನ್ನ ಮುದ್ರೆಯನ್ನು ಒತ್ತಿದ ಜಾಗಕ್ಕೆ ಇನ್ನು ಮುಂದೆ ತಿರಂಗಾ ಪಾಯಿಂಟ್ ಎಂದು ಹೆಸರು. ಯಾವ ಜಾಗದಲ್ಲಿ ನಾವು ಸೋತಿದ್ದೇವೆಯೋ ಅಲ್ಲಿಂದಲೇ ನಮ್ಮ ಗೆಲುವಿನ ಆರಂಭವಾಗಬೇಕು ಎನ್ನುವ ಉದ್ದೇಶದಿಂದ ಈ ಹೆಸರು ಎಂದು ಘೋಷಿಸಿದರು.
ಚಂದ್ರಯಾನ 3 ಯಶಸ್ವಿಯಾದ ಜಾಗ ಶಿವಶಕ್ತಿ ಸ್ಥಳ್
ಚಂದ್ರ ಯಾನ 3ಯಲ್ಲಿ ಲ್ಯಾಂಡರ್ ಇಳಿದ ಜಾಗವನ್ನು ಇನ್ನು ಮುಂದೆ ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದರು ಮೋದಿ.