ಕಲಬುರಗಿ: ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದ ಉದಯನಿಧಿ ಸ್ಟಾಲಿನ್‌ಗೆ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್ ಅವರು, ಮತ್ತೊಮ್ಮೆ ತಮಿಳುನಾಡು ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಮ್ಮ-ಅಪ್ಪನಿಗೆ ಹುಟ್ಟಿದ್ದೇನೆ ಎಂದು ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಕಾಶ್ ರಾಜ್ (Prakash Raj) ಪ್ರಶ್ನಿಸಿದ್ದಾರೆ.
ಪ್ರಕಾಶ್ ರಾಜ್ ಹಿಂದು ವಿರೋಧಿ ಎಂಬ ಆರೋಪದ ಬಗ್ಗೆ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ? ಅಸ್ಪೃಶ್ಯತೆ ಹೋಗಬೇಕೋ ಬೇಡವೋ? ಅವರ ಹೇಳಿಕೆಯನ್ನು ತಿರುಚಲಾಗಿದೆ. ಜಾತಿ ವಿವಾದ ಹುಟ್ಟು ಹಾಕುತ್ತಿರುವವರಿಗೆ ಕೆಲಸ ಇಲ್ಲವಲ್ಲ, ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸನಾತನ ಧರ್ಮದ ಬಗ್ಗೆ ದಾರಿ ತಪ್ಪಿಸುತ್ತಿದ್ದಾರೆ
ಸನಾತನ ಧರ್ಮ ಎಂದರೆ ಏನು? ನಾನು ಬದಲಾಗುವುದಿಲ್ಲ ಎನ್ನುವುದು ಪ್ರಕೃತಿಗೆ ವಿರುದ್ಧ, ಕೆಲವರು ನಾನೇ ಶ್ರೇಷ್ಠ ಎನ್ನುತ್ತಾರೆ. ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದುಗಳಲ್ಲಾ, ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಮಾವಾಸ್ಯೆ ಎಂದರೆ ಚೆನ್ನಾಗಿಲ್ವಂತೆ, ಆದರೆ ಚಂದ್ರಯಾನ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ | JDS Politics: ಇಂಡಿಯಾ ಮೈತ್ರಿಕೂಟದ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಡಿದ್ದಾರೆ ಎಂದ ಎಚ್‌ಡಿಕೆ
ಎಲ್ಲಾ ಧರ್ಮಗಳು ವಿಕಾರ ಇದೆ. ಧರ್ಮಯುದ್ಧ ಯಾವಾಗ ಮುಗಿಯುತ್ತೆ ಎನ್ನುವುದು ಗೊತ್ತಾಗಲ್ಲ. ಧರ್ಮ ಯುದ್ಧ ಕಾಳ್ಗಿಚ್ಚು ಇದ್ದಂತೆ. ಮೂಲವೂ ಗೊತ್ತಾಗಲ್ಲಾ ಅಂತ್ಯವೂ ಗೊತ್ತಾಗಲ್ಲಾ. ಹಿಂದೆ ರಾಜರಕಾಲದಲ್ಲಿ ರಾಜರ ಜತೆ ಕೆಲಸ ಮಾಡುವವರಿಗೆ ಕೆಲವೊಮ್ಮೆ ಸಂಬಳ ಕೊಡಲು ಆಗುತ್ತಿರಲಿಲ್ಲ. ಆಗ ಆ ಸೈನಿಕರು ಲೂಟಿ, ಅತ್ಯಾಚಾರ, ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇಂತಹವರನ್ನೇ ರಾಜಕಿಯದಲ್ಲೂ ಬಳಸಿಕೊಳ್ಳುತ್ತಿದ್ದಾರೆ. ರೌಡಿಗಳನ್ನು ರಾಜಕೀಯಕ್ಕೆ ಯಾಕೆ ಸೇರಿಸಿಕೊಳ್ಳುತ್ತೀರಾ? ಅಂತವರನ್ಮೇ ಎಂಪಿ ಮಾಡ್ತೀರಿ ಎಂದು ಪ್ರಶ್ನಿಸಿದರು.
ಚಡ್ಡಿ ಹಾಕಿಕೊಂಡಿರುವವರಿಗೆ ದೇಶ ಕಾಣಿಸಲ್ಲ
ಕೆಲ ವಿಚಾರಗಳಿಗೆ ಪ್ರಕಾಶ್ ರಾಜ್ ಹೊರತುಪಡಿಸಿ ಉಳಿದ ನಟರು ಯಾಕೆ ಮಾತನಾಡಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚಡ್ಡಿ ಹಾಕಿಕೊಂಡಿರುವವರಿಗೆ ದೇಶ ಕಾಣಿಸಲ್ಲ ಎಂದು ಆರ್‌ಎಸ್‌ಎಸ್‌ನವರ ವಿರುದ್ಧ ಪರೋಕ್ಷವಾಗಿ ಚಾಟಿ ಬಿಸಿದರು.
ನಾನು ನನ್ನ ಪ್ರತಿಭೆಯಿಂದ ಬೆಳೆದಿಲ್ಲ, ಜನರ ಪ್ರೀತಿಯಿಂದ ಬೆಳೆದಿದ್ದೇನೆ. ಹೀಗಾಗಿ ಜನರಿಗಾಗಿ ನಾನು ಧ್ವನಿ ಎತ್ತಲೇಬೇಕಲ್ಲವೇ ಎಂದಿರುವ ಅವರು, ನಾನು ಯಾವುದೇ ಧರ್ಮದ ವಿರುದ್ಧ ಅಲ್ಲ. ನಾವು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ. ರಾಜಕಾರಣಿ ಏನೂ ಧರ್ಮ ಗುತ್ತಿಗೆ ಪಡೆದಿದ್ದಾರಾ? ನಾನು ಜನರನ್ನು ಪ್ರೀತಿಸುವ ಮನುಷ್ಯ, ರೋಗ ನನಗಲ್ಲ ಅವರಿಗೇ ಎಂದು ಟೀಕಿಸುವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | India vs Bharat: ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಎಂದವರೇ ಈಗ ಇಂಡಿಯಾ ಹೆಸರಿಗೆ ಬೆಚ್ಚಿ ಬಿದ್ದಿದ್ದಾರೆ: ಸಿದ್ದರಾಮಯ್ಯ
ನಾನು ಜನಪರ, ನಾನು ರಾಜಕೀಯ ವ್ಯಕ್ತಿ ಅಲ್ಲ. ಜೈ ಶ್ರೀರಾಮ್ ಅಂತ ಮೆರವಣಿಗೆಯಲ್ಲಿ ಯುವಕರು ಕೈಯಲ್ಲಿ ಕತ್ತಿ ಹಿಡಿದುಕೊಂಡು ಓಡಾಡುತ್ತಾರೆ ಎಂದರೆ ಏನರ್ಥ. ಅವರವರ ಧರ್ಮ, ಅವರವರ ನಂಬಿಕೆ ಅವರಿಗೆ ಬಿಟ್ಟಿದೆ, ಆದರೆ ಎಲ್ಲರೂ ಚೆನ್ನಾಗಿರಬೇಕು. ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದು ಭಾಷಣಕ್ಕಾಗಿ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಲು ಎಂದು ತಿಳಿಸಿದರು.
ಕೋಮು ಗಲಭೆಯಿಂದ ಹಾನಿ ಆಗುತ್ತಿರುವುದು ಯಾರಿಗೆ? ಹೆಣ್ಣು ಮಕ್ಕಳಿಗೆ, ನಾವೇ ಸಮಸ್ಯೆ ಅನುಭವಿಸಬೇಕು. ಅವರು ವಿಶ್ವಗುರು ಆಗಲಿ, ನಾವು ವಿಶ್ವ ಮಾನವರಾಗೋಣ ಎಂದರು.