Site icon Vistara News

ಪ್ರಧಾನಿ ಮೋದಿ ಮಂಗಳೂರಿಗೆ ಬಂದು ಏನು ಸಾಧಿಸುತ್ತಾರೆ: ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

ಕುಮಾರಸ್ವಾಮಿ

ಬೆಂಗಳೂರು: ಒಂದು ಕಾಲದಲ್ಲಿ ದೇಶಕ್ಕೆ ಆರ್ಥಿಕ ಶಕ್ತಿ ಕೊಡುವ ನಗರ ನಮ್ಮ ಮಂಗಳೂರಾಗಿತ್ತು. ಆದರೆ ಈಗ ದೇಶಕ್ಕೆ ಮಾರಕ ಆಗುವಂತ ವಾತಾವರಣವನ್ನು ಅಲ್ಲಿ ಸೃಷ್ಟಿ ಮಾಡಿದ್ದಾರೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಸಂದೇಶ ಕೊಡಲು ಮಂಗಳೂರಿಗೆ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ‌ ಮಂಗಳವಾರ ಕೊಡಗು ಜಿಲ್ಲೆಯ ಜೆಡಿಎಸ್ ಮುಖಂಡರ ಜತೆ ಪಕ್ಷ ಸಂಘಟನೆ ಕುರಿತು ಚರ್ಚಿಸಿದ ನಂತರ ಅವರು ಮಾತನಾಡಿದ ಅವರು, ಮಂಗಳೂರನ್ನು ಶಾಂತಿಯುತ ನಗರವಾಗಿಸಿ, ಹೂಡಿಕೆದಾರರು ಬರುವ ರೀತಿ ಪ್ರಧಾನಿ ಸಂದೇಶ ಕೊಟ್ಟರೆ ಅವರು ಬಂದಿದ್ದಕ್ಕೂ ಸಾರ್ಥಕ ಆಗುತ್ತದೆ. ಮತ್ತೆ ಇದೇ ಸಂಘರ್ಷ ಮುಂದುವರಿದರೆ ಪ್ರಧಾನಿ ಬಂದರೂ ಏನು ಪ್ರಯೋಜನವಾಗದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರದೇ ಪಕ್ಷದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 40 ಪರ್ಸೆಂಟ್ ಸರ್ಕಾರ ಎಂದು ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಜನ ಮಾತನಾಡುತ್ತಾರೆ‌. ಇಲ್ಲೇ ಹೆಗ್ಗಣ ಸತ್ತು ಬಿದ್ದಿದೆ. ಪಿಎಸ್ಐ ನೇಮಕಾತಿ ಹಗರಣ, ಪ್ರಾಧ್ಯಾಪಕರ ನೇಮಕ ಹಗರಣ ಸೇರಿ ಅನೇಕ ಕರ್ಮಕಾಂಡಗಳು ಬೇಕಾದಷ್ಟಿವೆ ಎಂದರು.

ಇದನ್ನೂ ಓದಿ | ಭಾರತ್ ಜೋಡೋ ಪಾದಯಾತ್ರೆ ಉಸ್ತುವಾರಿ ಬಿಕೆಎಚ್‌ ಹೆಗಲಿಗೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರ ಬಗ್ಗೆ ಪ್ರತಿಕ್ರಿಯೆ ಇಲ್ಲ. ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮೇಲೆ ಅಬಕಾರಿ ನೀತಿ ವಿಚಾರದಲ್ಲಿ, ಕೇವಲ ಒಂದೆರಡು ಕೋಟಿ ರೂಪಾಯಿ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಲೂಟಿ ಆದರೂ ಕೇಳುವವರು ಇಲ್ಲ ಎಂದು ಕಿಡಿಕಾರಿದರು.

ಈ ರಾಜ್ಯಕ್ಕೆ ಉತ್ತಮ ಹೆಸರಿದೆ. ಬಂಡವಾಳ ಹೂಡಿಕೆದಾರರು ಯೋಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿ ಎಂದು ಬಿಜೆಪಿ ಸರ್ಕಾರಕ್ಕೆ ಸಲಹೆ ನೀಡಿದ ಎಚ್‌.ಡಿ.ಕೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡೂ ಪಕ್ಷದಿಂದಲೂ ಯಾವುದೇ ವಿಚಾರ ಇಲ್ಲ. ಒಬ್ಬರು ಸಾವರ್ಕರ್, ಮತ್ತೊಬ್ಬರು ಮಾಂಸ ತಿನ್ನುವ ವಿಚಾರ ಇಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ, ನಾವು ವಿಷಯಾಧಾರವಾಗಿ ಹೊರಟಿದ್ದೇವೆ. ಜನತೆ ಮುಂದೆ ನಾವು ಅಭಿವೃದ್ಧಿ ವಿಚಾರ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ಪಿಎಸ್‌ಐ ನೇಮಕದಲ್ಲಿ ಅಕ್ರಮ ನಡೆದಿದೆ. ಈಗ ಕೆಪಿಟಿಸಿಎಲ್‌ ಹುದ್ದೆಗಳ ನೇಮಕದಲ್ಲಿಯೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಚರ್ಚೆಯಾಗಬೇಕು. ಆದರೆ ಬೇರೆ ವಿಚಾರ ಚರ್ಚೆ ಆಗುತ್ತಿದೆ. ಬಿಜೆಪಿಯವರು ಸಾವರ್ಕರ್ ರಥ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಉಪಯೋಗವೇನು? ಎರಡೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಜನರಿಗೆ ಏನಾದರೂ ಮಾಡಿ ಆಗ ಸಾವರ್ಕರ್‌ಗೆ ಗೌರವ ತಂದಂತೆ ಎಂದು ಅವರು ವಾಗ್ದಾಳಿ ನಡೆಸಿದರು.

ಎಸಿಬಿ ರದ್ದು ಸಂಬಂಧ ಸುಪ್ರೀಂ ಕೋರ್ಟ್‌ಗೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು,
ಕುರಿ ಕಾಯಲು ತೋಳ ಬಿಟ್ಟಂಗೆ ಇದೆ. ತೋಳ ಇಟ್ಟುಕೊಂಡು ಕುರಿ ರಕ್ಷಣೆ ಆಗುತ್ತಾ? ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಹಾಲೆರೆದಿದ್ದಾರೆ. ಸರ್ಕಾರ ಸರಿಯಾಗಿ ನಿಗಾ ಇಟ್ಟು ಮಟ್ಟ ಹಾಕಬೇಕು ಎಂದು ಹೇಳಿದರು.

ಸಿದ್ದರಾಮೋತ್ಸವದಿಂದ ಉಪಯೋಗ ಏನು?
ಸಿದ್ದರಾಮೋತ್ಸವದಿಂದ ಜನರಿಗೆ ಏನು ಉಪಯೋಗವಾಯಿತು, ಉತ್ಸವದಿಂದ ಅವರ ವರ್ಚಸ್ಸು ಏನು ಹೆಚ್ಚಾಗಿದೆ. ಅಂತಹ ಎಷ್ಟೋ ಸಮಾವೇಶ ರಾಜ್ಯದಲ್ಲಿ ಆಗಿವೆ. ನಮ್ಮ ಜನತಾ ಜಲಧಾರೆ ಎಷ್ಟು ಜನ ಸೇರಿದ್ದರು. ನಮ್ಮ ಉತ್ಸವದಿಂದ 25 ವರ್ಷಗಳಿಂದ ತುಂಬದ ಕೆರೆಗಳಲ್ಲಿ ಮಳೆ ಬಂದು ನೀರು ತುಂಬಿವೆ. ಅವರ ಉತ್ಸವದಿಂದ ಏನು ಪ್ರಯೋಜನ ಆಗಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | ಸಾವರ್ಕರ್‌ ರಥಯಾತ್ರೆ: ಇಂದಿರಾ ಗಾಂಧಿ ಮಾತಿನ ಮೂಲಕವೇ ಸಿದ್ದರಾಮಯ್ಯಗೆ ತಿವಿದ ಯಡಿಯೂರಪ್ಪ

Exit mobile version