Site icon Vistara News

Next CM: ಮುಂದಿನ ಸಿಎಂ ನಾನೇ ಎಂದು ಬೊಮ್ಮಾಯಿ ಹೇಳಿದ್ದರಲ್ಲಿ ತಪ್ಪೇನಿದೆ: ಬಿ.ಎಸ್‌. ಯಡಿಯೂರಪ್ಪ ಹೀಗೆ ಹೇಳಿದ್ದು ಯಾಕೆ?

bjp karnataka preperatory meeting cancelled in delhi

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದರ ನಡುವೆ ಎಲ್ಲ ಪಕ್ಷಗಳಲ್ಲೂ ನಾನೇ ಮುಂದಿನ ಸಿಎಂ (Next CM) ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಈ ನಡುವೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮತ್ತೆ ತಾವೇ ಮುಂದಿನ ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿಕೆ ನೀಡಿದ್ದರು. ಇದಕ್ಕೆ ಈ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸಹ, ಬೊಮ್ಮಾಯಿ ಅವರೇ ಮುಂದಿನ ಸಿಎಂ ಎಂದು ಹೇಳಿಕೆ ನೀಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಬಿ.ಎಸ್.‌ ಯಡಿಯೂರಪ್ಪ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ? ಬೊಮ್ಮಾಯಿ ಒಳ್ಳೇ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಬೊಮ್ಮಾಯಿ‌ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Cow protection : ವಯಸ್ಸಾದ ಗೋವುಗಳ ರಕ್ಷಣೆ ಸರ್ಕಾರ, ಸಮಾಜದ ಜವಾಬ್ದಾರಿ ಎಂದ ಸಿಎಂ ಬೊಮ್ಮಾಯಿ

ಸಚಿವ ನಾರಾಯಣ ಗೌಡ, ಶಾಸಕಿ ಪೂರ್ಣಿಮಾ ಪಕ್ಷ ಬಿಡಲ್ಲ

ಈಗಾಗಲೇ ಪಕ್ಷದಲ್ಲಿ ಅಸಮಧಾನಗೊಂಡ ಶಾಸಕರು, ಸಚಿವರ ಜತೆ ಯಡಿಯೂರಪ್ಪ ಸಂಧಾನ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ನಾರಾಯಣ ಗೌಡರ ಜತೆಗೂ ಮಾತನಾಡಿದ್ದೇನೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಜತೆಗೂ ಮಾತನಾಡಿದ್ದೇನೆ. ಈಗಿರುವ ಪ್ರಕಾರ ಯಾರೂ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ಸಂತೋಷವಾಗಿ ಬಿಜೆಪಿಯಲ್ಲೇ ಇದ್ದು ಕೆಲಸ ಮಾಡುವುದಾಗಿ ಹೇಳಿದ್ದಾರೆಂದು ಪ್ರತಿಕ್ರಿಯೆ ನೀಡಿದರು.

ಪ್ರಚಾರಕ್ಕಾಗಿ ಸಿದ್ದರಾಮಯ್ಯ ನಾಟಕ

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅವರಿಗೆ ಗೊಂದಲ ಆಗಿಲ್ಲ. ಕೇವಲ ಈ ಥರ ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಸುಮ್ಮನೆ ಜನರ ಮಧ್ಯೆ ನಾನು ಅಲ್ಲಿ ನಿಲ್ಲುತ್ತೇನೆ, ಇಲ್ಲಿ ನಿಲ್ಲುತ್ತೇನೆ, ಎಲ್ಲಿ ಬೇಕಾದರೂ ನಿಂತು ಗೆಲ್ಲುತ್ತೇನೆ ಎಂದು ಹೇಳಿ ವಾತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ. ಇದರಿಂದ ಏನು ಪ್ರಯೋಜನ ಅಂತ ನಮಗೇನೂ ಅರ್ಥ ಆಗಲ್ವಾ.? ಇದಕ್ಕೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಕಾಂಗ್ರೆಸ್ ಪಕ್ಷ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಮತ್ತೆ ಬೊಮ್ಮಾಯಿ ಸಿಎಂ ಆಗುತ್ತಾರೆ: ತೇಜಸ್ವಿ ಸೂರ್ಯ

ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗುತ್ತಾರೆ. ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಯಾದಗಿರಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Urigowda Nanjegowda : ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ; ಉರಿ ಗೌಡ, ನಂಜೇಗೌಡ ಚರ್ಚೆ ತಡೆದ ಚುಂಚಶ್ರೀಗಳ ವಿರುದ್ಧ ಸಿಡಿದ ಅಡ್ಡಂಡ

ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಬೊಮ್ಮಾಯಿ ಅವರು ಹೇಳಿಕೆಯೂ ನೂರಕ್ಕೆ ನೂರು ಸರಿ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ. ಹೀಗಾಗಿ ನಿಚ್ಚಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

Exit mobile version