Site icon Vistara News

ವಿಸ್ತಾರ ಗ್ರಾಮ ದನಿ: ಅಡಿಕೆ ವಿಚಾರ ಬಂದಾಗ ಜನಪ್ರತಿನಿಧಿಗಳು ಕೈಕಟ್ಟಿಕೊಂಡು ಮೌನವಾಗುವುದೇಕೆ?

Areca Nut

| ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳಪೆ ಅಡಿಕೆಯ ಕಳ್ಳ ಆಮದು ವಿರುದ್ಧ ಇತ್ತೀಚೆಗೆ ಕ್ಯಾಂಪ್ಕೋ, ಮ್ಯಾಮ್‌ಕೋಸ್ ಸಹಾಕಾರಿ ಸಂಸ್ಥೆಗಳವರೆಲ್ಲ ಒಟ್ಟಿಗೆ ದಿಲ್ಲಿಗೆ ಹೋಗಿ ಮನವಿ ಸಲ್ಲಿಸಿ ಭರವಸೆ ಪಡೆದು ಬಂದರು.
“ಇರಿ, ನಾವು ಬರ್ತೀವಿ. ಒಟ್ಟಿಗೆ ಹೋಗೋಣ” ಅಂತ ಎಲ್ಲ 17 ಅಡಿಕೆ ಜಿಲ್ಲೆಗಳ ಸಂಸದರು ಜೊತೆಗೂಡಬಹುದಿತ್ತು. “ತಡಿರಿ, ನಾವೂ ಬರ್ತೀವಿ ‘ನಮ್ಮ ಅಡಿಕೆ ನಮ್ಮ ಹಕ್ಕು'” ಅಂತ ಹೇಳಿ ಅದೇ 17 ಅಡಿಕೆ ಬೆಳೆಯುವ ಜಿಲ್ಲೆಯ ಎಲ್ಲ ಶಾಸಕರೂ ಕೈ ಸೇರಿಸಬಹುದಿತ್ತು.
ಉಹೂಂ, ಅದ್ಯಾವದನ್ನೂ ಮಾಡುವ ಮನಸ್ಸನ್ನು ಶಾಸಕರು, ಸಂಸದರು, ಮಂತ್ರಿಗಳು ಮಾಡುತ್ತಿಲ್ಲ. ಅನೇಕ ತಿಂಗಳುಗಳಿಂದ ಈ ಅಡಿಕೆ ಕಳ್ಳ ಆಮದು (Areca Nuts Smuggling) ಆಗುತ್ತಿರುವ ಸುದ್ದಿ ಪ್ರಕಟವಾಗುತ್ತಿದೆ. ಯಾಕೆ ಅಡಿಕೆ ಸಮಸ್ಯೆಗಳ ವಿಚಾರದಲ್ಲಿ ಎಲ್ಲಾ ಜನಪ್ರತಿನಿಧಿಗಳು ನಿಷ್ಕ್ರಿಯರಾಗುತ್ತಿದ್ದಾರೆ? ನಿರ್ಲಕ್ಷ್ಯ ತೋರಿಸುತ್ತಿದ್ದಾರೆ? ಬೇರೆ ವಿಚಾರಗಳಲ್ಲಿ ಗಂಟಲು ಹರಿಯುವಷ್ಟು ಕೂಗಾಡುವ, ಕಿರುಚಾಡುವ ಅನೇಕ ಜನ ಪ್ರತಿನಿಧಿಗಳು ಅಡಿಕೆ ಸಮಸ್ಯೆ ವಿಚಾರ ಬಂದಾಗ ಸತ್ತವರ ಮನೆಯಲ್ಲಿ ಕೈಕಟ್ಟಿಕೊಂಡು ನಿಂತವರ ರೀತಿ ಮೌನವಾಗುವುದೇಕೆ!!?

ಒಂದೋ ಎರಡೋ ಪ್ರಕರಣ ಅಲ್ಲ

ಕಳ್ಳ ದಾರಿಯಲ್ಲಿ ಅಡಿಕೆ ಆಮದು ಆಗಿದ್ದು ಒಂದೋ ಎರಡೋ ಪ್ರಕರಣ ಅಲ್ಲ. ಕೆಲವು ತಿಂಗಳುಗಳಿಂದ ಅನೇಕ ಪ್ರಕರಣಗಳು ಸುದ್ದಿ ಆಗುತ್ತಲೇ ಇದೆ. ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಡಿಕೆ ಭಾರತದ ಒಳಗೆ ಬರ್ತಾ ಇದೆ ಎಂದು ಸುದ್ದಿಗಳು ಆಗುತ್ತಿವೆ. ನೇರ ಬಂದರಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ ಅಂತಲೂ ವರ್ತಮಾನ ಪ್ರಕಟವಾಗುತ್ತ ಇದೆ. ಆಮದು ಆದ ಅಡಿಕೆ ಸೀಜ್ ಆಗುತ್ತೆ. ಅದನ್ನು ಕಡಿಮೆ ಬೆಲೆಯಲ್ಲಿ ಹರಾಜು ಹಾಕಲಾಗುತ್ತಂತೆ!! ಇಲ್ಲಿಯ ವರ್ತಕರು ಅದನ್ನು ಕಡಿಮೆ ಬೆಲೆಗೆ ಹರಾಜು ಹಿಡಿಯುತ್ತಾರಂತೆ. ಇದಲ್ಲದೆ ಈಶಾನ್ಯ ರಾಜ್ಯಗಳ ಗಡಿಯಿಂದಲೂ ರಾಜಾರೋಷವಾಗಿ ಅಡಿಕೆ ಕಳ್ಳಸಾಗಾಣಿಯಾಗಿ ಬರುತ್ತಿದೆ ಅಂತ ಅಲ್ಲಿನ ಮುಖ್ಯ ಮಂತ್ರಿಗಳೇ ಕೇಂದ್ರಕ್ಕೆ ಮಾಹಿತಿ ಕೊಡುತ್ತಿದ್ದಾರೆ.

ಇದನ್ನೂ ಓದಿ | Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

ಜನಪ್ರತಿನಿಧಿಗಳ ಮೌನ ಏಕೆ?

ಇಷ್ಟೆಲ್ಲ ಆಗುತ್ತಿದ್ದರೂ ಅಡಿಕೆ ಬೆಳೆಯುವ ಕರ್ನಾಟಕದ 17 ಜಿಲ್ಲೆಗಳ ಶಾಸಕರು, ಸಂಸದರು ಘನ ಮೌನವಹಿಸುವುದೇಕೆ!!? ಸ್ಪರ್ಧಾತ್ಮಕವಾಗಿ ಅಥವಾ ಎಲೆಕ್ಷನ್ ಸಮಯವಾದ ದಿನ ಮನದಲ್ಲಿ ರಾಜಕೀಯವಾಗಿ ಪಕ್ಷಗಳ ಗೆಲುವಿನ ಹಿತಾಸಕ್ತಿ ಇಟ್ಕೊಂಡಾದರೂ ಸರಿ, ಎಲ್ಲ 17 ಅಡಿಕೆ ಜಿಲ್ಲೆಗಳ ಕೇಂದ್ರ ಸಂಸದರು, ರಾಜ್ಯ ಶಾಸಕರು ಒಟ್ಟಾಗಿ ಧ್ವನಿ ಎತ್ತಬಾರದಾ?

ಮಾಧ್ಯಮಗಳೇ ದನಿ ಎತ್ತಬೇಕಾ?

ಹೋಟೆಲ್‌ನಲ್ಲಿ ಬಾಂಬ್‌ ಚೀಲ ಇಟ್ಟು ಹೋಗುವ ರೀತಿಯಲ್ಲಿ ದೇಶದ ಪೋರ್ಟ್‌ಗೆ ಅಕ್ರಮ ಅಡಿಕೆ ಮೂಟೆಗಳು ಬಂದು ಬೀಳುತ್ತಿವೆ ಅಂತಾದರೆ, ಅದಕ್ಕೂ ಮೀಡಿಯಾದವರೇ ಡಿಬೇಟ್ ಮಾಡಬೇಕಾ? ಪತ್ರಿಕೆಗಳೇ ದಪ್ಪಕ್ಷರದ ಸುದ್ದಿ ಮಾಡಿ ಸರಕಾರಗಳ ಗಮನ ಸೆಳೆಯಬೇಕಾ? ಇಂಪೋರ್ಟ್ ವ್ಯವಸ್ಥೆಯಲ್ಲಿ ಸಿಸಿ ಕ್ಯಾಮೆರಾ, ಫುಟೇಜು, FSL, ಎಕ್ಸಿಮ್ ಪಾಲಿಸಿ, ಕಾನೂನುಗಳು ಇರೋದಿಲ್ವಾ? ಜನಪ್ರತಿನಿಧಿಗಳಿಗೆ, ಶಾಸಕ ಸಚಿವರುಗಳಿಗೆ ಅವುಗಳ ಬಗ್ಗೆ ಗಮನವಿರುವುದಿಲ್ವಾ? ಅರಿವಿರುವುದಿಲ್ಲವಾ? ಇರಬೇಕಾಗಿಲ್ವಾ!!?

ಕ್ರಿಯಾ ಯೋಜನೆಯನ್ನು ರೂಪಿಸಬಾರದಾ?

ಅನೇಕ ಕಳ್ಳ ಮಾರ್ಗದಲ್ಲಿ ಅಡಿಕೆ ದೇಶದೊಳಗೆ ನುಗ್ಗಿ ಇಲ್ಲಿ ಬೆಳೆದ ರೈತರಿಗೆ ಸಮಸ್ಯೆ ಆಗುತ್ತಿದ್ದರೂ, ಆ ವಿಚಾರಗಳು ಮೀಡಿಯಾದಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದರೂ, ಅಡಿಕೆ ಸಹಕಾರಿ ಸಂಘಗಳು ನೇರ ಸಂಬಂಧಿತ ಮಂತ್ರಿಗಳಿಗೆ ಅಡಿಕೆ ಕಳ್ಳ ಆಮದನ್ನು ತಡೆಯುವಂತೆ ಮನವಿ ಕೊಡುತ್ತಿದ್ದರೂ… ಅದೇ ಅಡಿಕೆ ಬೆಳೆಯುವ 17 ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತುಟಿ ಪಿಟಿಕ್ ಅನ್ನುವುದಿಲ್ಲ ಏಕೆ? ಕಳ್ಳ ದಾರಿಯಲ್ಲಿನ ಅಡಿಕೆ ಆಮದನ್ನು ತಡೆಯುವ ಒಂದು ಕ್ರಿಯಾ ಯೋಜನೆಯನ್ನು ರೂಪಿಸಬಾರದಾ? ಪಕ್ಷಾತೀತವಾಗಿ ಅಡಿಕೆ ಬೆಳೆಯುವ 17 ಜಿಲ್ಲೆಗಳ ಸಂಸದರು, ಶಾಸಕರು, ಮಂತ್ರಿಗಳು ಒಟ್ಟಾಗಿ ಅಕ್ರಮ ಅಡಿಕೆ ಆಮದನ್ನು ತಡೆಯುವುದಕ್ಕೆ ಏನಾದರು ಮಾಡಬಾರದಾ?

ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ವಾ? ಆಸಕ್ತಿ ಇಲ್ವಾ? ತಡೆಯುವ ಅಧಿಕಾರ ಇಲ್ವಾ? ರೈತರ ಸಮಸ್ಯೆ ಅರ್ಥವೇ ಆಗ್ತಾ ಇಲ್ವಾ? ಅಥವಾ ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಸುಳ್ಳು ಹೇಳುತ್ತಿವೆ ಅಂತ ಜನ ಪ್ರತಿನಿಧಿಗಳು ಭಾವಿಸಿದ್ದಾರಾ? ಇಲ್ಲಾ, “ಮೀಡಿಯಾಗಳು, ಜಾಲತಾಣಗಳು, ಅಡಿಕೆ ಸಹಕಾರಿ ಸಂಘಗಳು ಮತ್ತು ಅಡಿಕೆ ಬೆಳೆಗಾರರೇ ಹೋರಾಟ ಮಾಡಿ ಸರಿ ಮಾಡಿಕೊಳ್ಳುತ್ತಾರೆ, ನಮಗ್ಯಾಕೆ?” ಅಂತ ಅಡಿಕೆ ನಾಡಿನ ಜನಪ್ರತಿನಿಧಿಗಳ ಅಂತರಂಗದ ಭಾವನೆಯಾ? ಇದು ಅಡಿಕೆ ಕಳ್ಳ ಆಮದಿನ ವಿಷಯದಲ್ಲಿ ಮಾತ್ರ ಅಲ್ಲ, ಅಡಿಕೆಯ ಎಲ್ಲ ಸಮಸ್ಯೆಗಳ ವಿಚಾರದಲ್ಲೂ ರಾಜಕಾರಣಿಗಳ ಮನಸ್ಥಿತಿ ಹೀಗೆ ಇದೆ ಎಂಬಂತೆ ಕಾಣಿಸುತ್ತಿದೆ!

ಜನಪ್ರತಿನಿಧಿಗಳೇ ಕೇಳಿ

ಆತ್ಮೀಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳೇ, ಅಡಿಕೆ ಬೆಳೆಗಾರರು ಹೆದರುತ್ತಲೇ (ಅಡಿಕೆ ಸಮಸ್ಯೆಗಳಿಂದ ಜರ್ಜರಿತರಾಗಿ ಹೆದರಿ) ಕೇಳುವ ಇದೊಂದು ಧೈರ್ಯದ ಪ್ರಶ್ನೆಗೆ ನಾಡಿದ್ದು ಪ್ರಿಂಟೆಡ್ ಪ್ರಣಾಳಿಕೆ ಹಿಡ್ಕೊಂಡು, ಕೈ ಮುಗಿದು, ಗುಂಪುಗೂಡಿಕೊಂಡು ಬರುವಾಗ ಈ ಅಡಿಕೆ ಸಮಸ್ಯೆಗಳಿಗೆ ಪರಿಹಾರದ ಉತ್ತರಗಳನ್ನು ಅದೇ ಪ್ರಣಾಳಿಕೆಯ ಜೊತೆ ಸೇರಿಸಿ ತನ್ನಿ. ಅದನ್ನು ಮನೆಯಲ್ಲಿ ಕೊಟ್ಟಿರಿ. ಮನೆಯಲ್ಲಿ ಯಾರೂ ಇಲ್ಲದಿದ್ದರೆ… ಬಾಗಿಲು ಚಿಲಕದಲ್ಲಿ ಸಿಕ್ಕಿಸಿಡಿ!
ಬಹುತೇಕ ರೈತರು ಆ ಸಮಯದಲ್ಲಿ ಮನೆಯಲ್ಲಿ ಇಲ್ಲದಿರಬಹುದು! ಗುಮ್ಮೆಯ ತಳದಲ್ಲಿರುವ ಚೊಂಬು ನೀರನ್ನು ನಾಲ್ಕು ಅಡಿಕೆ ಮರಕ್ಕೆ ಹಂಚಿ ಹಾಕಲು ತೋಟಕ್ಕೆ ಹೋಗಿರಬಹುದು! ಅಥವಾ ಫ್ರೂಟ್ ಐಡಿ, ಬೆಳೆಸರ್ವೆ, ಆಧಾರ್-ಪಹಣಿ ಸೀಡಿಂಗ್, NPCI, KYC ಅಪ್‌ಡೇಷನ್, HSRP, ಪದೇಪದೆ ತಿರುಗಬೇಕಾದ ಪೋಡಿ, ಕಾಂಪ್ಲಿಕೇಟೆಡ್ ವಂಶವೃಕ್ಷ, ಇದ್ದಕ್ಕಿದ್ದಂತೆ ಪಹಣಿಯಲ್ಲಿ ಬೆಳೆ ಕಾಲಮ್‌‌ನಲ್ಲಿದ್ದ ಮಾಯವಾದ ಅಡಿಕೆ, ಸಿಗದ ಇಂಟರ್‌ನೆಟ್, ಸತಾಯಿಸುವ ನೆಟ್ವರ್ಕ್….. ನಂತಹ ನಿತ್ಯ ಜಂಜಾಟ ಹಿಡ್ಕೊಂಡು ಪ್ಯಾಟಿಗೆ ಹೋಗಿರಬಹುದು!

ಒಂದಿಷ್ಟು ಪರಿಹಾರಗಳನ್ನು ತನ್ನಿ

ಮತಭಿಕ್ಷೆಗೆ ಬರುವಾಗ, ರೈತರ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರಗಳನ್ನು ತನ್ನಿ. ತೀರ ಬಿಸಿಲು ಹೊತ್ತಲ್ಲಿ ಬರಬೇಡಿ!! ಅನೇಕ ರೈತರ ಮನೆಗಳಲ್ಲಿ ತೋಟಕ್ಕೆ ಬಿಡಿ, ಕುಡಿಯೋದಕ್ಕೂ ನೀರಿನ ಅಭಾವ ಅನ್ನುವ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ. ನೀವು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಹೊತ್ತು ತುಂಬ ಜನ ಒಟ್ಟಿಗೆ ಬಂದಾಗ ಬಾಯಾರಿದ ನಿಮಗೆ ನೀರು ಕೊಡೋದಕ್ಕೂ ಆಗ್ತಾ ಇಲ್ವಲ್ಲ ಅನ್ನುವ ಭಾವ ರೈತರಿಗೆ ಬರೋದು ಬೇಡ! ಇನ್ಮುಂದೆ ಭರವಸೆ, ಗ್ಯಾರಂಟಿ, ಆಶ್ವಾಸನೆ, ಕುಕ್ಕರ್, ನೋಟು, ಪ್ಯಾಕೇಟು ಯಾವುದೂ ಬೇಡ.

ಇದನ್ನೂ ಓದಿ | Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

ಅಡಿಕೆ ಎಲೆ ಚುಕ್ಕಿ ರೋಗ, ಅಡಿಕೆ YLD, ಅಡಿಕೆ ಕಳ್ಳ ಆಮದು, ಅಡಿಕೆ ಹಾನಿಕಾರಕ, ಅಡಿಕೆ ದರ ಇಳಿತ, ಅಡಿಕೆಗೆ ಮಂಗನ ಕಾಟ, ಅಡಿಕೆ ಮರ ಕಡಿಯುವ ಕಾಡುಕೋಣ, ಅಡಿಕೆ ಮೋಟರ್‌ಗೆ ಕರೆಂಟು, ಸಬ್ಸಿಡಿ ಮೋಸ, ಅಡಿಕೆ ತೋಟಕ್ಕೆ ಬಂದ ಬರ… ಇತ್ಯಾದಿಗಳ ಭೀಕರತೆಯ ಸಮಸ್ಯೆಗಳಿಗೆ ನೀವು ಅಧಿಕೃತ ಪರಿಹಾರದ ಉತ್ತರದೊಂದಿಗೆ ಬರ್ತೀರಿ ಎಂಬ ನಂಬಿಕೆಯ ಮನಸ್ಥಿತಿ ಈಗಲೂ ರೈತರಲ್ಲಿ ಸಾಸಿವೆ ಕಾಳಷ್ಟಾದರೂ ಇದೆ!!

ಅಡಿಕೆ ಅಕ್ರಮ ಆಮದು ತಡೆಯಲು ಕೇಂದ್ರ ಸಚಿವರಿಗೆ ಮನವಿ

ಭಾರತಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದರಿಂದ ಅಡಿಕೆ ಬೆಲೆ ಮತ್ತು ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ನವದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವರಾದ ನಿತ್ಯಾನಂದ ರೈ ಅವರನ್ನು ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದಲ್ಲಿ ಭೇಟಿ ಮಾಡಿ ಅಕ್ರಮ ಆಮದನ್ನು ತಡೆಗಟ್ಟಲು ವಿನಂತಿಸಲಾಯಿತು. ನಿಯೋಗದಲ್ಲಿ ಎಚ್.ಎಸ್.ಮಂಜಪ್ಪ, ಹೊಸಬಾಳೆ, ಅಧ್ಯಕ್ಷರು ಕ್ರ್ಯಾಮ್, ಸುಬ್ರಹ್ಮಣ್ಯ ಯಡಗೆರೆ, ನಿರ್ದೇಶಕರು, ಮಾಮ್ ಕೋಸ್/ಅಧ್ಯಕ್ಷರು, ಮಹಾಮಂಡಲ, ಇಂಧೂದರಗೌಡ, ಅಧ್ಯಕ್ಷರು, ಆಪ್ಕೋಸ್, ಸಾಗರ, ಶ್ರೀಕಾಂತ್ ಬರುವೆ, ವ್ಯವಸ್ಥಾಪಕ ನಿರ್ದೇಶಕರು, ಮಾಮ್ ಕೋಸ್, ವಿಜಯಾನಂದ ಭಟ್, ಪ್ರಧಾನ ವ್ಯವಸ್ಥಾಪಕರು , ಟಿಎಸ್ಎಸ್, ಶಿರಸಿ ಇವರು ಉಪಸ್ಥಿತರಿದ್ದರು.

Exit mobile version