Site icon Vistara News

Blast in Bengaluru: ಇನ್ನು ಆರೇ ದಿನಕ್ಕೆ ವೈಟ್‌ಫೀಲ್ಡ್‌ ರಾಮೇಶ್ವರಂ ಕೆಫೆ ರೀ ಓಪನ್

Raghavendra rao

ಬೆಂಗಳೂರು: ಬಾಂಬ್‌ ಸ್ಫೋಟದಿಂದ ಹಾನಿಯಾದ ವೈಲ್‌ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಇನ್ನು ಆರೇ ದಿನಗಳಲ್ಲಿ ಮರು ಆರಂಭವಾಗಲಿದೆ. ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ (The Rameshwaram Cafe) ಪುನರ್ಜನ್ಮ ಪಡೆಯುತ್ತದೆ. ನಮ್ಮ ಹೊಟೇಲ್ ಮತ್ತೆ ಆರಂಭವಾಗುತ್ತದೆ ಎಂದು ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ‌ ಪರವಾಗಿ ನಿಂತಿದ್ದಕ್ಕೆ ಜನರಿಗೆ ಧನ್ಯವಾದ ಹೇಳುತ್ತೇನೆ. 2012ರಲ್ಲಿ ರಾಮೇಶ್ವರಂ ಕೆಫೆ ಆರಂಭವಾಗಿತ್ತು. ನಾನು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬಡ ಕುಟುಂಬದಿಂದ ಬಂದವನು. ಕುಮಾರಪಾರ್ಕ್ ಬಳಿ ಫುಟ್‌ಪಾತ್‌ನಲ್ಲಿ ನಮ್ಮ ಸಂಸ್ಥೆ ಶುರು ಮಾಡಿದ್ದೆವು. ಆಗಿನಿಂದ ಒಂದಲ್ಲ ಒಂದು ಕಷ್ಟ ಬರುತ್ತಿದೆ. ಪ್ರತಿ ಕಷ್ಟವನ್ನು ಎದುರಿಸಿ ಮೇಲೆ ಬಂದಿದ್ದೇವೆ. ನಮ್ಮಲ್ಲಿ ಸುಮಾರು ಎರಡು ಸಾವಿರ ಜನ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಭಾರತೀಯರಿಗೆ ಇದು ಹೊಸದಲ್ಲ, ನಮ್ಮನ್ನ ತುಳಿಯೋದಕ್ಕೆ ಬರುವವರು ಜಾಸ್ತಿ, ನಾವು ಸಮಸ್ಯೆಗಳನ್ನು ಎದುರಿಸಿ ಮೇಲೆ ಬರಬೇಕು. ನಾವು ಎಪಿಜೆ ಅಬ್ದುಲ್ ಕಲಾಂ ಅವರನ್ನು ಪ್ರೇರಣೆಯಾಗಿ ತೆಗೆದುಕೊಂಡ್ ಕೆಫೆ ಶರು ಮಾಡಿದ್ದೇವೆ. ಎಲ್ಲರಿನ್ನೂ ನಮ್ಮ ಹೊಟೇಲ್ ಸ್ವಾಗತಿಸಿ ಆಶ್ರಯ ನೀಡಿದೆ. ನಾನು ಹೊಟೇಲ್ ಶುರು ಮಾಡೋ ಮುನ್ನ ಬೇರೆ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದೇನೆ. ನನಗೆ ಊಟ ಹಾಕಿದ ಹೊಟೇಲ್, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ತಿಳಿಸಿದರು.

ಈ ಘಟನೆ ಸರಿಯಾದದ್ದು ಅಲ್ಲಾ, ನಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು. ಬರೋ ಶುಕ್ರವಾರ ನಮ್ಮ ಹೊಟೇಲ್ ಮತ್ತೆ ಪುರ್ನಜನ್ಮ ತಾಳುತ್ತದೆ. ಪ್ರತಿಯೊಂದು ಹಂತದಲ್ಲೂ ಹೊಡೆತ ಬಿದ್ದಿದೆ, ಅದನ್ನೆ ಮೆಟ್ಟಿಲುಗಳೆಂದು ಭಾವಿಸಿ ಮೇಲೆ ಬಂದಿದ್ದೇವೆ. ನಿನ್ನೆ ನಡೆದ ಘಟನೆ ಯಾರು ಮಾಡಿದ್ದಾರೋ ಗೊತ್ತಿಲ್ಲ. ಯಾರು ಬರುತ್ತಾರೋ ಬರಲಿ, ನಾವು ಫೇಸ್ ಮಾಡುತ್ತೇವೆ. ಬರೋ ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ಪುನರ್ಜನ್ಮ ಪಡೆಯುತ್ತೆ, ಶಿವರಾತ್ರಿಯಂದೇ ಈ ಹೊಟೇಲ್ ಆರಂಭವಾಗುತ್ತದೆ. ಪೊಲೀಸ್ ಸಿಬ್ಬಂದಿ, ಜನರು ನಮ್ಮ ಜೊತೆಯಲ್ಲಿದ್ದಾರೆ ಎಂದು ಹೇಳಿದರು.

ಈ ಹಿಂದೆ ರಾಜಾಜಿನಗರ ಬ್ರಾಂಚ್‌ನಲ್ಕಿ ಬ್ಯಾಗ್ ಸಿಕ್ಕಿತ್ತು. ಅದರಲ್ಲಿ ಮಡಿಕೆ ಇತ್ತು, ಅದರ ಬಗ್ಗೆ ಸುಬ್ರಹ್ಮಣ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ನಾವು ಆಹಾರದಲ್ಲಿ ಗುಣಮಟ್ಟ ಕಾಪಾಡುತ್ತಿದ್ದೇವೆ. ಆರಂಭದಲ್ಲಿ ಹೇಗೆ ಇತ್ತೋ, ಈಗಲೂ ಅದೇ ರೀತಿ ಇದೆ ಎಂದರು.

ಇದನ್ನೂ ಓದಿ | Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌; ಟೆಕ್ನಾಲಜಿ ಬಳಸಿ ವಿದ್ರೋಹಿಗಳ ಹಿಡಿಯಲು ಸಿಎಂ ಖಡಕ್‌ ಸೂಚನೆ

ಎಲ್ಲಾ ರಾಜ್ಯಗಳಲ್ಲಿ ಹೋಟೆಲ್‌ ತೆರೆಯುತ್ತೇವೆ

ಮೆಟಲ್ ಡಿಟೆಕ್ಟರ್ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಕೆಫೆಯನ್ನು ಸರಿಪಡಿಸಿಕೊಳ್ಳುತ್ತೇವೆ. ತುಂಬಾ ನಷ್ಟವಾಗಿದೆ, ಅದನ್ನ ತಡೆದುಕೊಳ್ಳುತ್ತೇವೆ. ಎಲ್ಲಾ ರಾಜ್ಯದಲ್ಲೂ ನಮ್ಮ ಹೊಟೇಲ್ ಆರಂಭಿಸಬೇಕು ಎಂದುಕೊಂಡಿದ್ದೇವೆ. ಹಸಿದವರಿಗೆ ಊಟ ನೀಡುವ ಸಂಸ್ಕೃತಿ ನಮ್ಮದು. ಸಿಬ್ಬಂದಿ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ. ನಾವು ಅವರ ಕುಟುಂಬದೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದ ಪೊಲೀಸ್‌ ಕಮಿಷನರ್‌

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ (rameshwaram cafe blast) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿದೆ. ಹೀಗಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

ರಾಮೇಶ್ವರಂ ಬ್ರಾಂಚ್‌ಗಳ ಪರಿಶೀಲನೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾಮೇಶ್ವರಂ ಮತ್ತೊಂದು ಬ್ರಾಂಚ್‌ಗಳಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ಇಂದಿರಾನಗರದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತರ ಚಲನವಲನ ಇದೇಯಾ ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಸಂಶಯ ಬಂದರೆ ಇಲ್ಲಿಗೆ ಕಾಲ್‌ ಮಾಡಿ

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ (Blast In Bengaluru) ಬ್ಲಾಸ್ಟ್‌ ಪ್ರಕರಣದ ಬಳಿಕ ಬೆಂಗಳೂರಲ್ಲಿ ಹೈ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ (rameshwaram cafe blast) ನೀಡಿದ್ದಾರೆ. ಜತೆಗೆ ಜನರು ಇಂತಹ ಸಮಯದಲ್ಲಿ ಆತಂಕಕ್ಕೆ ಒಳಗಾಗದೇ, ಅನುಮಾನಾಸ್ಪದ ವ್ಯಕ್ತಿಯನ್ನು ಕಂಡರೆ, ಯಾವುದಾರೂ ವಸ್ತು ಅಥವಾ ಬ್ಯಾಗ್‌ ಇರುವುದು ಕಂಡರೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಯಾರ ಮೇಲಾದರೂ ಸಂಶಯ ಬಂದರೆ ಕೂಡಲೇ 122ಗೆ ಸಂಖ್ಯೆಗೆ ಕರೆ ಮಾಡಿ, ಪೊಲೀಸರಿಗೆ ವಿಚಾರವನ್ನು ಮುಟ್ಟಿಸಿ. ನಾವು ನಿಮ್ಮನ್ನು ತ್ವರಿತವಾಗಿ ತಲುಪುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್‌ನ ಎಕ್ಸ್‌ ಖಾತೆಯಿಂದ ಮಾಹಿತಿ ನೀಡಿದ್ದಾರೆ.

ದಿ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಬಾಂಬ್‌ ಅನ್ನು ಸ್ಫೋಟಿಸಿರುವುದು ಹಲವು ಅನುಮಾನವನ್ನು ಮೂಡಿಸಿದೆ. ಪಕ್ಕಾ ನುರಿತ ಟೆರರಿಸ್ಟ್‌ಗಳಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ. ನಗರ ಪೊಲೀಸರ ಗಮನವನ್ನು ಒಂದೇ ಕಡೆ ಕೇಂದ್ರಿಕೃತವಾಗುವಂತೆ ಈ ರೀತಿ ಹುನ್ನಾರ ಮಾಡಿದ್ದರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version