ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಯನ್ನು (Congress Guarantee Scheme) ಜಾರಿ ಮಾಡಿದೆ. ಅಲ್ಲದೆ, ಇವುಗಳಲ್ಲಿ ಎರಡು ಯೋಜನೆಯಾದ ಗೃಹ ಲಕ್ಷ್ಮಿ (Gruha Lakshmi scheme) ಹಾಗೂ ಅನ್ನಭಾಗ್ಯಕ್ಕೆ (Annabhagya scheme) ಪಡಿತರ ಚೀಟಿ (ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ – APL Card and BPL Card) ನೇರ ಸಂಬಂಧವನ್ನು ಹೊಂದಿದೆ. ಇನ್ನು ಅನ್ನಭಾಗ್ಯ ಯೋಜನೆಯಡಿ ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡುತ್ತಾ ಬಂದಿದೆ. ಇವರಲ್ಲಿ ಬಹಳಷ್ಟು ಮಂದಿ ರೇಷನ್ ಕಾರ್ಡ್‌ನಲ್ಲಿ (Ration Card) ಸಮಸ್ಯೆ ಇದ್ದರಿಂದ ಹಣ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ತಿದ್ದುಪಡಿ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳಿದ್ದಾರೆ. ಇದರಿಂದ ಸರ್ಕಾರಕ್ಕೆ ಹೊರೆ ಮತ್ತಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಆರು ತಿಂಗಳಿನಿಂದ ಪಡಿತರವನ್ನು ಪಡೆಯದೇ ಇರುವವರ ಕಾರ್ಡ್ ರದ್ದತಿ ಪ್ರಕ್ರಿಯೆಗೂ ಮುಂದಾಗಿತ್ತು. ಈಗ ಪಡಿತರ ಕಾರ್ಡ್ ರದ್ದಾಗುವ ಭೀತಿಯನ್ನು ಎದುರಿಸುತ್ತಿರುವವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅಂಥವರ ಕಾರ್ಡ್ ರದ್ದಾಗುವುದಿಲ್ಲ, ಬದಲಾಗಿ ಅಮಾನತು ಸ್ಥಿತಿಯಲ್ಲಿರುತ್ತದೆ.
ಹೌದು. ಅಮಾನತು ಸ್ಥಿತಿಯಲ್ಲಿದ್ದರೆ ಆಹಾರ ಇಲಾಖೆಗೆ ಯಾವಾಗ ಬೇಕಾದರೂ ಹೋಗಿ ಸೂಕ್ತ ಕಾರಣ ನೀಡಿ ಕಾರ್ಡ್ ಅನ್ನು ಚಾಲ್ತಿಯಲ್ಲಿಟ್ಟುಕೊಳ್ಳಬಹುದಾಗಿದೆ. ಈಗಾಗಲೇ 2023ರ ಸೆ. 29 ರನ್ವಯ 2.96 ಲಕ್ಷ ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗೆ ಆದೇಶ ಮಾಡಲಾಗಿದೆ. ಹಾಗಾಗಿ ಈ ಆದೇಶದನ್ವಯ ಮಾರ್ಚ್ 2023ರ ವರೆಗೆ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಅರ್ಹ ಅರ್ಜಿಗಳಿಗೆ ಪಡಿತರ ಚೀಟಿ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜತೆ ಜತೆಯಲ್ಲಿ 6 ತಿಂಗಳಿನಿಂದ ಪಡಿತರ ಧಾನ್ಯ ಪಡೆಯದಂತ ಕಾರ್ಡ್ ದಾರರನ್ನು ಪತ್ತೆ ಮಾಡಲು ಮುಂದಾಗಲಾಗಿದೆ.
ಅಮಾನತಿನಲ್ಲಿಡಲು ಸೂಚನೆ
ಏಕ ಸದಸ್ಯ ಪಡಿತರ ಚೀಟಿಗಳನ್ನು ಹೊರತು ಪಡಿಸಿ 6 ತಿಂಗಳಿನಿಂದ ನಿರಂತರವಾಗಿ ಪಡಿತರ ಪಡೆಯದೇ ಇರುವ ಪಡಿತರ ಚೀಟಿದಾರರನ್ನು ಗುರುತಿಸಿ ಅವರ ಮನೆಯ ಸ್ಥಳ ತನಿಖೆ ಮಾಡಿ, ಸ್ಥಳ ತನಿಖಾ ಸಮಯದಲ್ಲಿ 6 ತಿಂಗಳಿನಿಂದ ನಿರಂತರವಾಗಿ ಪಡಿತರ ಪಡೆಯದೇ ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಂತಹ ಪಡಿತರ ಚೀಟಿಗಳನ್ನು ಅಮಾನತಿನಲ್ಲಿಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: FDA SDA Recruitment : ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಅರ್ಜಿ ಯಾವಾಗ? ಕಾಯುತ್ತಿರುವ ಲಕ್ಷಾಂತರ ಆಕಾಂಕ್ಷಿಗಳು!
ಮತ್ತೆ ಆ್ಯಕ್ಟಿವ್ ಮಾಡಲು ಹೀಗೆ ಮಾಡಿ
ಒಂದು ವೇಳೆ ನೀವು 6 ತಿಂಗಳವರೆಗೆ ರೇಷನ್ ಪಡೆಯದೇ ಇದ್ದರೆ ನಿಮ್ಮ ರೇಷ್ ಕಾರ್ಡ್ ಅಮಾನತು ಸ್ಥಿತಿಯಲ್ಲಿರುತ್ತದೆ. ಇ ವೇಳೆ ಆಹಾರ ಇಲಾಖೆ ಸಿಬ್ಬಂದಿ ಸರ್ವೇಗೆಂದು ನಿಮ್ಮ ಮನೆಗೆ ಬಂದರೆ ಅಲ್ಲಿ ಯಾಕಾಗಿ ಇಷ್ಟು ದಿನ ಪಡಿತರವನ್ನು ಪಡೆದಿಲ್ಲ ಎಂಬ ಸಕಾರಣ ನೀಡಿ, ಮುಂದೆ ಪಡಿತರ ಪಡೆಯುವುದಾಗಿ ಮನವರಿಕೆ ಮಾಡಬಹುದು. ಇಲ್ಲವೇ ರೇಷನ್ ಕಾರ್ಡ್ ಮಳಿಗೆಗಳಿಗೆ ತೆರಳಿ ನಿಮ್ಮ ಬಯೋಮೆಟ್ರಿಕ್ ನೀಡಿ ಆಹಾರವನ್ನು ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.