Site icon Vistara News

KR Market Flyover : ಕೆ.ಆರ್‌. ಮಾರ್ಕೆಟ್‌ ಬಳಿ ದುಡ್ಡಿನ ಮಳೆಗರೆದ ಅರುಣ್‌ ಯಾರು?; ಇಲ್ಲಿದೆ ಅವನ ಫುಲ್‌ ಡಿಟೇಲ್ಸ್!

Anchor Arun

ಬೆಂಗಳೂರು: ಕೆ.ಆರ್‌. ಮಾರ್ಕೆಟ್‌ ಬಳಿ ಫ್ಲೈ ಓವರ್‌ನಲ್ಲಿ (KR Market Flyover) ನಿಂತು ಹಣದ ಸುರಿಮಳೆ ಸುರಿಸಿದ ಅರುಣ್‌ ಯಾರು ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲಿದೆ. ‌ ಸೋಮವಾರ ಬೆಳಗ್ಗೆ ಮಾರ್ಕೆಟ್‌ ಬಳಿಯ ಫ್ಲೈ ಓವರ್‌ನಲ್ಲಿ ನಿಂತು ಎರಡೂ ಕಡೆ ಹಣವನ್ನು ಆಕಾಶಕ್ಕೆ ಚಿಮ್ಮಿ ಜನ ಅದನ್ನು ಹಿಡಿಯಲು ಧಾವಿಸುತ್ತಿರುವುದನ್ನು, ಹೆಕ್ಕಲು ಪರದಾಡುತ್ತಿರುವುದನ್ನು ಕಂಡು ಸಂತೋಷಪಡುತ್ತಿದ್ದ ಅರುಣ್‌ ಎದೆಯ ಮೇಲೊಂದು ಗಡಿಯಾರವನ್ನೂ ನೇತಾಡಿಸಿಕೊಂಡಿದ್ದ.

ಒಂದು ಬ್ಯಾಗ್‌ನಲ್ಲಿ ೧೦, ೨೦ರ ನೋಟುಗಳನ್ನು ತಂದು ಆಕಾಶಕ್ಕೆ ಎಸೆದ ಆತನನ್ನು ಕೆಲವರು ಹಿಡಿದುಕೊಳ್ಳಲು ಪ್ರಯತ್ನಿಸಿದರಾದರೂ ಆತ ಸ್ಕೂಟರ್‌ ಏರಿ ತಪ್ಪಿಸಿಕೊಂಡಿದ್ದಾನೆ. ಆರಂಭದಲ್ಲಿ ಆತ ಯಾರೋ ಹುಚ್ಚನಿರಬಹುದು ಎಂಬ ಸಂಶಯವಿತ್ತು. ವಿಸ್ತಾರ ನ್ಯೂಸ್‌ ಆತನ ಮಾಹಿತಿಗಳನ್ನು ಬಗೆಯುತ್ತಿದ್ದಂತೆಯೇ ಆತ ಒಬ್ಬ ಆ್ಯಂಕರ್‌, ಇವೆಂಟ್‌ ಮ್ಯಾನೇಜರ್‌ ಎಂದು ತಿಳಿದುಬಂದಿದೆ.

ಯಾರಿವನು ಏನೇನು ಮಾಡ್ತಾನೆ?
ಅರುಣ್‌ ಮೂಲತಃ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಕ. ಆತ ವಿ ಡಾಟ್‌ ಇವೆಂಟ್ಸ್‌ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನು ನಡೆಸುತ್ತಿದ್ದಾನೆ. ಬೆಂಗಳೂರಿನಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ಆ್ಯಂಕರ್‌ ಆಗಿ ಗಮನ ಸೆಳೆದ ಈತ ಮಂಗಳೂರು ಸೇರಿದಂತೆ ಇತರ ಕಡೆಗಳಲ್ಲೂ ಭಾಗವಹಿಸಿದ್ದಾನೆ.

ಜಿಟಿ ಬಿಸಿನೆಸ್‌ ಸಂಸ್ಥೆಯ ಸ್ಥಾಪಕ
-ಬೆಂಗಳೂರಿನಲ್ಲಿ ಜಿಟಿ ಬಿಸಿನೆಸ್‌ ಎಂಬ ಸಂಸ್ಥೆಯನ್ನು ೨೦೧೫ರಲ್ಲಿ ಆರಂಭಿಸಿದ್ದ. ಅವನು ಅದರ ಸ್ಥಾಪಕ ಮತ್ತು ಸಿಇಒ! ಜಿಟಿ ಬಿಸಿನೆಸ್‌ ಕಂಪನಿಯು ಉದ್ಯಮಿಗಳಿಗೆ ತಮ್ಮ ಉದ್ಯಮವನ್ನು ಪ್ರಮೋಟ್‌ ಮಾಡಲು ಅವಕಾಶ ಮಾಡಿಕೊಡುತ್ತದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ತಮ್ಮ ಗುರಿ ಸಾಧನೆಗೆ ಸಹಕಾರ ಕೊಡಲಾಗುವುದು ಎಂದು ಉದ್ಯಮಿಗಳಿಗೆ ಅದು ಭರವಸೆ ನೀಡುತ್ತದೆ. ಉದ್ಯಮಗಳನ್ನು ಮುಂದಿನ ಹಂತಕ್ಕೆ ಏರಿಸಲು ಸಹಾಯ ನೀಡಲಾಗುತ್ತದೆ ಎಂದು ಆತನ ಲಿಂಕ್‌ಡ್‌ ಇನ್‌ನಲ್ಲಿ ಹೇಳಲಾಗಿದೆ.

ಇನ್ನೂ ಏನೇನು?
-ವಿಡಾಟ್೯ಇವೆಂಟ್ಸ್‌ ಡಾಟ್‌ಕಾಂ ಎಂಬ ಸಂಸ್ಥೆಯನ್ನು ೨೦೧೨ರಲ್ಲೇ ಆರಂಭಿಸಿದ್ದ.
– ತಾನು ಕನ್ನಡದ ಪ್ರೇರಣಾದಾಯಕ ಭಾಷಣಕಾರ ಎಂದು ಆತ ಹೇಳಿಕೊಂಡಿದ್ದಾನೆ. ಇದಕ್ಕೆ ಪೂರಕವಾಗಿ ಅವನು ಫೇಸ್‌ಬುಕ್‌ನಲ್ಲಿ ಕೆಲವು ವಿಡಿಯೊಗಳನ್ನು ಹಾಕಿದ್ದಾನೆ.
– ಅವನೊಬ್ಬ ಉದ್ಯಮಿಯಾಗಿದ್ದು, ಇವೆಂಟ್‌ ಮ್ಯಾನೇಜ್‌ಮೆಂಟ್‌ ಉದ್ಯಮ ನಡೆಸುತ್ತಿದ್ದಾನೆ. ನಾಗರಭಾವಿಯಲ್ಲಿ ಆತನ ಕಂಪನಿ ಇದೆ.


– ಅವನು ಬ್ಯುಸಿನೆಸ್‌ ಕೋಚ್‌: ಸಾಕಷ್ಟು ಕಡೆಗಳಲ್ಲಿ ಉದ್ಯಮದ ಸ್ಥಾಪನೆ ಮತ್ತು ಬೆಳವಣಿಗೆ ಬಗ್ಗೆ ಭಾಷಣ ಮಾಡಿದ್ದಾನೆ.
– ಮಾರ್ಕೆಟಿಂಗ್‌ ಮಾಸ್ಟರ್‌
– ಪರ್ಸನಲ್‌ ಬ್ರಾಂಡ್‌ ಕೋಚ್‌ ತಾನೆಂದು ಹೇಳಿಕೊಂಡಿದ್ದಾನೆ.

ಅರುಣ್‌ ಒಬ್ಬ ವ್ಲಾಗರ್‌ ಕೂಡಾ ಆಗಿದ್ದು, ಸಾಕಷ್ಟು ವಿಡಿಯೊಗಳನ್ನು ಕೂಡಾ ಮಾಡಿದ್ದಾನೆ.

ಇದನ್ನೂ ಓದಿ : KR Market Flyover: ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈಓವರ್‌ ಮೇಲಿಂದ ದುಡ್ಡಿನ ಸುರಿಮಳೆ; ಗರಿ ಗರಿ ನೋಟಿಗೆ ಮುಗಿಬಿದ್ದ ಜನ!

Exit mobile version