ಬೆಂಗಳೂರು: ಖ್ಯಾತ ಚಿತ್ರನಟಿ ಲೀಲಾವತಿ (Actress Leelavathi) ಅವರು ಇನ್ನಿಲ್ಲ. 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಭಾಗ್ಯದೇವತೆ ಎಂದೇ ಕರೆಸಿಕೊಂಡಿದ್ದ ಅವರು ನೆಲಮಂಗಲದ ತೋಟದ ಮನೆಯಲ್ಲಿ ಕೊನೆಯುಸಿರೆಳೆದರು (Leelavathi No more). ಲೀಲಾವತಿ ಅವರ ಹೋರಾಟದ ಬದುಕು, ಬಳಿಕದ ಜೀವನ, ಅನಾರೋಗ್ಯ, ಅವರ ಕನಸುಗಳು ಎಲ್ಲದಕ್ಕೂ ಹೆಗಲೆಣೆಯಾಗಿ ನಿಂತದ್ದು ಮಗ ವಿನೋದ್ ರಾಜ್ (Vinod raj). ತಾಯಿಯನ್ನು ಅತ್ಯಂತ ಪ್ರೀತಿಯಿಂದ, ತಮಗೂ ಇಂಥ ಒಬ್ಬ ಮಗ ಬೇಕು ಎಂಬಂತೆ ಅವರು ತಾಯಿಯನ್ನು ನೋಡಿಕೊಂಡಿದ್ದಾರೆ.
ಅಮ್ಮನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ, ಅವರಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ವಿನೋದ್ ರಾಜ್ ಸಿನಿಮಾಗಳಲ್ಲಿ ದೊಡ್ಡ ಹೆಸರು ಪಡೆದರೂ ಕೊನೆಗೆ ಅಮ್ಮನ ಖುಷಿಗಾಗಿ ತೋಟದ ಮನೆಯಲ್ಲೇ ತಾಯಿ ಸೇವೆಯಲ್ಲಿ ನಿರತರಾದರು. ಅಮ್ಮನ ಜತೆ ಸೇರಿ ತಾವೂ ಕೃಷಿ ಮಾಡಿದರು.
ಇಂಥ ವಿನೋದ್ ರಾಜ್ ಅವರು ಯಾರ ಮಗ ಎನ್ನುವ ವಿಚಾರದಲ್ಲಿ ಹಲವರು ಕಥೆಗಳನ್ನು ಕಟ್ಟುತ್ತಾ ಹಲವು ಕುಟುಂಬಗಳಿಗೆ ನೋವುಂಟು ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಅಚ್ಚರಿ ಎಂದರೆ ಲೀಲಾವತಿ ಅವರ ಕುಟುಂಬವೂ ಈ ವಿಚಾರವನ್ನು ಒಂದು ರಹಸ್ಯವಾಗಿಯೇ ಕಾಪಾಡಿಕೊಂಡಿದೆ.
ಈ ನಡುವೆ ಕಳೆದ ಏಪ್ರಿಲ್ ತಿಂಗಳಲ್ಲಿ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಎಂಬವರು ವಿನೋದ್ ಅವರ ತಂದೆ ಯಾರು ಎನ್ನುವ ವಿಚಾರದಲ್ಲಿ ತುಂಬ ಗೊಂದಲವೇನೂ ಇಲ್ಲ. ಲೀಲಾವತಿಯವರ ಗಂಡ ಪತಿ ಮಹಾಲಿಂಗ ಭಾಗವತರ್ ಎಂದು ಅವರು ಹೇಳಿದ್ದರು. ಅದಕ್ಕೆ ಪೂರಕವಾಗಿ ಲೀಲಾವತಿ ಅವರ ಚೆನ್ನೈ ಆಸ್ತಿಯ ಕುರಿತ ಪತ್ರದಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಎಂಬ ಉಲ್ಲೇಖವಿದೆ ಎಂದು ಹೇಳಿದ್ದರು.
ಲೀಲಾವತಿ ಅವರನ್ನು ನಾಟಕ ರಂಗಕ್ಕೆ ಕರೆತಂದವರೇ ಮಹಾಲಿಂಗ ಭಾಗವತರ್. ಅವರು ಒಬ್ಬ ಸಿನಿಮಾ ಸಹ ನಟನಾಗಿದ್ದರು. ಮತ್ತು ನಾಟಕ ಕಂಪನಿ ನಡೆಸುತ್ತಿದ್ದರು. ಅಂದರೆ ಲೀಲಾವತಿ ಅವರ ಕಲಾಪ್ರತಿಭೆಯನ್ನು ಮೊದಲ ಬಾರಿ ಗುರುತಿಸಿದ್ದು ಭಾಗವತರ್. ಮೈಸೂರನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿದ್ದ ಅವರ ನಾಟಕ ಕಂಪನಿ ಮುಚ್ಚಿದಾಗ ಇಬ್ಬರೂ ಸುಬ್ಬಯ್ಯ ನಾಯ್ಡು ಅವರ ನಾಟಕ ಮಂಡಳಿ ಸೇರಿದ್ದರು.
ಲೀಲಾವತಿ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸಬೇಕು ಎಂಬ ಉದ್ದೇಶದಿಂದ ಸಾಕಷ್ಟು ಓಡಾಡಿದ್ದ ಅವರು, ಆಗ ಕನ್ನಡ ಸಿನಿಮಾದ ಶಕ್ತಿ ಕೇಂದ್ರವಾಗಿದ್ದ ತಮಿಳುನಾಡಿಗೂ ಶಿಫ್ಟ್ ಆಗಿದ್ದರು. ಮುಂದೆ ಅಲ್ಲೇ ಆಸ್ತಿಪಾಸ್ತಿ ಮಾಡಿದ್ದರು. ಅದರಲ್ಲಿ ಲೀಲಾವತಿ ಅವರಿಗೂ ಒಂದು ಪಾಲು ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ. ಬೆನ್ನಿಗೆ ನಿಂತು ಸಹಕಾರ ನೀಡಿದ್ದ ಮಹಾಲಿಂಗ ಭಾಗವತರ್ ಅವರ ಜತೆಗಿನ ಲೀಲಾವತಿ ಅವರ ಸಂಬಂಧ ಹೇಗೆ ಅಂತ್ಯಗೊಂಡಿತು ಎನ್ನುವುದು ಸ್ಪಷ್ಟವಿಲ್ಲ.
ಹಾಗಿದ್ದರೆ ವಿನೋದ್ ಹೆಸರು ವಿನೋದ್ ರಾಜ್ ಆಗಿ ಪರಿವರ್ತನೆ ಆಗಿದ್ದು ಹೇಗೆ?
ನಿರ್ದೇಶಕ ಪ್ರಕಾಶ್ ಮೇಹುರಾಜ್ ಅವರು ಹೇಳುವ ಪ್ರಕಾರ, 1987ರವರೆಗೂ ಲೀಲಾವತಿ ಅವರ ಮಗ ಕೇವಲ ವಿನೋದ್ ಆಗಿದ್ದರು. ಖ್ಯಾತ ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ವಿನೋದ್ ಗಾಗಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿನಿಮಾವನ್ನು ನಿರ್ಮಿಸಿದಾಗ ವಿನೋದ್ ಎಂಬ ಹೆಸರನ್ನು ವಿನೋದ್ ರಾಜ್ ಆಗಿ ಮಾಡಿದರು.
ಆದರೆ, ಇದಕ್ಕೂ ಒಂದು ಕಾರಣವಿದೆ ಎನ್ನುವುದು ಪ್ರಕಾಶ್ ಮೇಹುರಾಜ್ ಅವರು ಹೇಳಿದ್ದರು.:
80ರ ದಶಕದಲ್ಲಿ ಶಿವರಾಜ್ಕುಮಾರ್ ಇಂಡಸ್ಟ್ರಿಗೆ ಬಂದು ‘ಆನಂದ್’ ಸಿನಿಮಾ ಹಿಟ್ ಆಗಿತ್ತು.. ದ್ವಾರಕೀಶ್ ಅವರು ಅಣ್ಣಾವ್ರ ಜತೆ ಮೇಯರ್ ಮುತ್ತಣ್ಣ ಮತ್ತು ಭಾಗ್ಯವಂತರು ಸಿನಿಮಾ ಮಾಡಿದರು. ಮುಂದೆ ಡಾ. ರಾಜ್ ಅವರ ಡೇಟ್ಸ್ ಸಿಕ್ಕಿರಲಿಲ್ಲ. ಆಗ ದ್ವಾರಕೀಶ್ ಅವರು ಲೀಲಾವತಿ ಅವರ ಪುತ್ರ ವಿನೋದ್ ನನ್ನು ನಾಯಕನಾಗಿ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದರು. ಲೀಲಾವತಿಯವರು ಒಪ್ಪಿಕೊಂಡಾಗ ಹುಟ್ಟಿದ್ದೇ ಡ್ಯಾನ್ಸ್ ರಾಜಾ ಡ್ಯಾನ್ಸ್.
ದ್ವಾರಕೀಶ್ ಅವರು ಈ ಸಿನಿಮಾಕ್ಕಾಗಿ ವಿನೋದ್ ಅವರ ಹೆಸರನ್ನು ವಿನೋದ್ ರಾಜ್ ಮಾಡಿದರು. ಅದೇನೂ ವಿಶೇಷವಾಗಿರಲಿಲ್ಲ. ಆಗಲೇ ಚರಣ್ ರಾಜ್, ಸುಂದರ್ ರಾಜ್ ಮೊದಲಾದ ಹೆಸರುಗಳು ಚಿತ್ರರಂಗದಲ್ಲಿ ಇದ್ದವು. ಆದರೆ, ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ವಿನೋದ್ ರಾಜ್ ಎಂಬ ಹೆಸರು ಹುಟ್ಟಲು ಒಂದು ಕಾರಣವಿದೆ ಎಂದಿದ್ದರು. ಅದೇ ವಿಚಾರ ಗಾಸಿಪ್ ಆಗಲು ಕಾರಣ ಎನ್ನುವುದು ಪ್ರಕಾಶ್ ಮೇಹುರಾಜ್ ವಿವರಣೆ. ಈ ಗಾಸಿಪ್ಗಳಿಗೆ ಎಲ್ಲೂ ಸ್ಪಷ್ಟತೆ ಸಿಗಲೇ ಇಲ್ಲ. ಮುಂದೆ ರವಿ ಬೆಳಗೆರೆ ಅವರು ರಾಜ್ ಲೀಲಾ ವಿನೋದ ಎಂಬ ಪುಸ್ತಕವನ್ನು ಬರೆದು ಗಾಸಿಪ್ಗಳಿಗೆ ಇನ್ನಷ್ಟು ಜೀವ ತುಂಬಿದರು.
ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ಇತ್ತೀಚೆಗೆ ಪತ್ರಿಕೆಯೊಂದರ ಯೂ ಟ್ಯೂಬ್ ವಾಹಿನಿ ವಿನೋದ್ ರಾಜ್ ಅವರನ್ನೇ ಪ್ರಶ್ನೆ ಮಾಡಿತ್ತು. ಆಗ ವಿನೋದ್ ರಾಜ್ ಮಾರ್ಮಿಕ ಉತ್ತರವನ್ನು ಕೊಟ್ಟಿದ್ದರು: ಈ ವಿಚಾರದಲ್ಲಿ ಯಾವ ಸಂಗತಿಯನ್ನೂ ಬಾಯಿಬಿಡಬಾರದು ಎಂದು ಅಮ್ಮನ ಬಳಿ ಅಪ್ಪ ಮಾತು ತೆಗೆದುಕೊಂಡಿದ್ದಾರೆ. ನಾನು ಅಮ್ಮನಿಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ಏನೂ ಹೇಳಲಾಗದು. ಏನನ್ನು ಹೇಳುವುದರಿಂದಲೂ ಈಗ ಏನೂ ಬದಲಾವಣೆ ಆಗುವುದಿಲ್ಲ ಎಂದಿದ್ದರು.
ವಿನೋದ್ ರಾಜ್ ಅವರ ಕುಟುಂಬ
ಅಮ್ಮನಿಗಾಗಿ ತನ್ನ ವೈಯಕ್ತಿಕ ಬದುಕನ್ನೂ ಒಂದು ಹಂತದಲ್ಲಿ ತ್ಯಾಗ ಮಾಡಿದಂತಿದ್ದ ವಿನೋದ್ ರಾಜ್ ಮುಂದೆ ಅಮ್ಮನಿಲ್ಲದೆ ಹೇಗಿರುತ್ತಾರೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಯಾಕೆಂದರೆ ಅವರು ಅಷ್ಟರ ಮಟ್ಟಿಗೆ ಅಮ್ಮನನ್ನು ಹಚ್ಚಿಕೊಂಡಿದ್ದರು. ವಿನೋದ್ ರಾಜ್ ಅವರಿಗೆ ಮದುವೆಯಾಗಿದ್ದು, ಮಗ ಯುವರಾಜ್ ಚೆನ್ನೈಯಲ್ಲಿ ಓದುತ್ತಿದ್ದಾನೆ. ಪತ್ನಿ ಕೂಡಾ ಅಲ್ಲೇ ವಾಸವಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಟುಂಬ ಪೂರ್ಣವಾಗಿ ನೆಲಮಂಗಲಕ್ಕೆ ಶಿಫ್ಟ್ ಆಗಬಹುದು.