Site icon Vistara News

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

Mohammed Shafi Nashipudi (1)

ಬೆಂಗಳೂರು: ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದ್ದು, ಸದ್ಯ ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಈ ನಡುವೆ ಪ್ರಮುಖ ಆರೋಪಿ ಮೊಹಮ್ಮದ್‌ ಶಫಿ ನಾಶಿಪುಡಿಯ ಹಿನ್ನೆಲೆ ಚರ್ಚೆಗೆ ಗ್ರಾಸವಾಗಿದೆ. ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ, ಈಗ ದೇಶದ್ರೋಹದ ಪ್ರಕರಣದಲ್ಲಿ (Sedition Case) ಬಂಧಿತನಾಗಿದ್ದು, ಈತ ಬಳ್ಳಾರಿ ಮೂಲದ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರ ಸಂಬಂಧಿ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈತ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿಯನ್ನೂ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಬ್ಯಾಡಗಿಯಲ್ಲಿ ಮೆಣಸಿನಕಾಯಿ ವ್ಯಾಪಾರ

ಶಫಿ ನಾಶಿಪುಡಿ ಮೂಲತಃ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಈತನ ಕುಟುಂಬ ಕಳೆದ 50-60 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಾ ಬಂದಿದೆ. ಬ್ಯಾಡಗಿಯ ಮೋಟೆಬೆನ್ನೂರಿನಿಂದಲೇ ಎಲ್ಲ ವ್ಯವಹಾರಗಳನ್ನು ನಾಶಿಪುಡಿ ನಡೆಸುತ್ತಾ ಬಂದಿದ್ದು, ಮೋಟೆಬೆನ್ನೂರಿನಲ್ಲಿ ಕೋಲ್ಡ್‌ ಸ್ಟೋರೇಜ್‌, ಮೆಣಸಿನಕಾಯಿ ಕ್ವಾಲಿಟಿ ಖಾರದ ಪುಡಿ ಯಂತ್ರ ಸೇರಿ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದ. ಬಳ್ಳಾರಿ ಮೂಲದ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಅವರ ಸಂಬಂಧಿ ಎಂದು ಕೂಡ ಹೇಳಲಾಗಿದೆ.

ಇದನ್ನೂ ಓದಿ | Sedition Case: ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಿದ್ದೇವೆ; ಮಂಡ್ಯ ಘೋಷಣೆಯನ್ನೂ ತನಿಖೆ ಮಾಡ್ತೇವೆ: ಡಿಕೆಶಿ

ವಿಧಾನಸಭಾ ಚುನಾವಣೆಗೆ ತಯಾರಿ!

ಮೊಹಮದ್‌ ಶಫಿ ನಾಶಿಪುಡಿ ಪ್ರಭಾವಿ ಮುಸ್ಲಿಂ ಮುಖಂಡನಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಈಗಿನಿಂದಲೇ ತಯಾರಿ ನಡೆಸಿದ್ದ ಎನ್ನಲಾಗಿದೆ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರ ಈತ ಜತೆ ಉತ್ತಮ ಸಂಪರ್ಕ ಹೊಂದಿರುವ ಹಿನ್ನೆಲೆ ಬ್ಯಾಡಗಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಶಿಪುಡಿ ಸಿದ್ಧತೆ ನಡೆಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಇತ್ತೀಚೆಗೆ ನಡೆದ ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಬಂದಿದ್ದ 11 ಜನ ಸದಸ್ಯರಲ್ಲಿ ಮೊಹಮ್ಮದ್‌ ಶಫಿ ಕೂಡ ಒಬ್ಬರಾಗಿದ್ದಾರೆ

ಕ್ರಿಮಿನಲ್‌ ಹಿನ್ನೆಲೆ ಇದೆಯೇ?

ಮೊಹಮದ್‌ ಶಫಿ ನಾಶಿಪುಡಿ ಈ ಹಿಂದೆ ಬ್ಯಾಡಗಿಯಲ್ಲಿ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ತಬ್ಲೀಕ್‌ ಮತ್ತು ಸುನ್ನಿ ವಿವಾದದಲ್ಲಿ ಸಿಲುಕಿದ್ದ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಇತ್ತೀಚೆಗೆ ಎರಡು ಸಮುದಾಯಗಳ ಮುಖಂಡರು ರಾಜಿ ಮೂಲಕ ಪ್ರಕರಣ ಇತ್ಯರ್ಥವಾಗಿತ್ತು. ಈ ಪ್ರಕರಣ ಬಿಟ್ಟರೆ ಮೊಹಮದ್‌ ಶಫಿ ನಾಶಿಪುಡಿ ವಿರುದ್ಧ ಬೇರೆ ಕ್ರಿಮಿನಲ್‌ ಪ್ರಕರಣಗಳಿಲ್ಲ.

ಇದನ್ನೂ ಓದಿ | Sedition Case: ಪಾಕ್‌ ಪರ ಘೋಷಣೆ ಕೂಗಿದವರಿಗೆ 3 ದಿನ ಪೊಲೀಸ್‌ ಕಸ್ಟಡಿ: ಕೋರ್ಟ್‌ ಆದೇಶ

ಕೋಟ್ಯಂತರ ರೂಪಾಯಿ ಆಸ್ತಿ

ಮೊಹಮದ್‌ ಶಫಿ ನಾಶಿಪುಡಿ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬ್ಯಾಡಗಿಯಲ್ಲಿ ಬಹು ಅಂತಸ್ತಿನ ಮನೆ ಹೊಂದಿದ್ದು, ಬ್ಯಾಡಗಿ ಸಮೀಪದ ಮೋಟೆಬೆನ್ನೂರಿನಲ್ಲಿ ಎಸ್‌ಎಎನ್‌ ಎಂಬ ಮೆಣಸಿನಕಾಯಿ ಕೋಲ್ಡ್‌ ಸ್ಟೋರೇಜ್‌ ಘಟಕವನ್ನು ಹೊಂದಿದ್ದು, ಮೆಣಸಿನಕಾಯಿ ಪುಡಿ ಮಾಡುವ ಘಟಕ ಕೂಡ ಹೊಂದಿದ್ದಾರೆ. ಇನ್ನು, ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದಲ್ಲಿಯೂ ಕೂಡ ಉತ್ತಮ ಹೆಸರು ಹೊಂದಿದ್ದು, ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಾರೆ ಎನ್ನಲಾಗಿದೆ. ಅದಲ್ಲದೇ ಪೊಲೀಸರ ವಿಚಾರಣೆ ವೇಳೆ ನಾನು ನೂರಾರು ಕೋಟಿಗೆ ಬಾಳ್ತೀನಿ ಸರ್..‌ ನಾನ್ಯಾಕೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಲಿ ಎಂದಿದ್ದರು.

Exit mobile version