ಶಿವಮೊಗ್ಗ: ಶಿವಮೊಗ್ಗದಲ್ಲಿ ಫೆಬ್ರವರಿ 20ರಂದು ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಗೃಹ ಸಚಿವರ ಕಚೇರಿಗೆ ನ್ಯಾಯ ಕೇಳಲು ಹೋದರೆ ಅಲ್ಲಿ ಗೃಹ ಸಚಿವರು ನಿರ್ಲಕ್ಷ್ಯ ಮಾಡಿ ಬಾಯಿ ಮುಚ್ಚಿಸಿ ಕಳುಸಿದ್ದಾರೆ. ಸರ್ಕಾರದವರೇ ಹೀಗೆ ಮಾಡಿದರೆ ನಾವು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು? ನಮಗೆ ಎಲ್ಲಿಯೂ ನ್ಯಾಯ ಸಿಗಲ್ಲ ಎಂಬುದು ಇಂದು ನನಗೆ ತಿಳಿದಿದೆ. ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.
ಹರ್ಷನ ಕೊಲೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿತ್ತು. ಅಲ್ಲಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಬಗ್ಗೆ ಚಿತ್ರಗಳ ಸಹಿತ ವರದಿಗಳು ಪ್ರಸಾರ ಆಗಿದ್ದವು. ಈ ಬಗ್ಗೆ ಪ್ರಶ್ನಿಸಲೆಂದು ಹರ್ಷನ ಸಹೋದರಿ ಅಶ್ವಿನಿ ಗೃಹ ಸಚಿವರ ಕಚೇರಿಗೆ ಹೋದಾಗ ಆರಗ ಜ್ಞಾನೇಂದ್ರ ಅವರು, ಎಷ್ಟು ಮಾತಾಡ್ತೀಯಮ್ಮ ನೀನು ಎಂದು ಏರು ದನಿಯಲ್ಲಿ ಗದರಿಸಿದರು ಎನ್ನಲಾಗಿದೆ.
ಗೃಹ ಸಚಿವರು ನಮ್ಮ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜೋರು ಮಾಡಿ ವಾಪಸ್ ಕಳುಹಿಸಿದ್ದಾರೆ. ಗೃಹ ಸಚಿವರಾದವರೇ ಹೀಗೆ ಬೆದರಿಸಿ ಕಳುಹಿಸಿದರೆ ನಾವು ಯಾರ ಬಳಿ ನ್ಯಾಯ ಕೇಳಬೇಕು ಎಂದು ಹರ್ಷನ ಸಹೋದರಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ | ಇಡಿ ತನಿಖೆ ಇಲ್ಲವೆಂದ ಗೃಹ ಸಚಿವ