ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ (Karnataka Election Results) ಕಸರತ್ತು ನಡೆಸುತ್ತಿದೆ. ಮುಖ್ಯಮಂತ್ರಿಯ ಆಯ್ಕೆಗಾಗಿ ಬೆಂಗಳೂರಿನಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಇನ್ನು ಸಭೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಹೋಟೆಲ್ ಎದುರು ಘೋಷಣೆ ಕೂಗಿದ್ದು ಹೈಡ್ರಾಮಾಕ್ಕೆ ಕಾರಣವಾಗಿದೆ.
ನೂತನ ಮುಖ್ಯಮಂತ್ರಿ ಆಯ್ಕೆಯಾಗಿ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದ್ದಾರೆ. ಇನ್ನು, ಕಾಂಗ್ರೆಸ್‌ನ ಬಹುತೇಕ ಶಾಸಕರು ಸಭೆಗೆ ಆಗಮಿಸಿದ್ದು, ತಮ್ಮ ಬೆಂಬಲ ಯಾರಿಗೆ ಎಂಬುದನ್ನು ತಿಳಿಸಿದ್ದಾರೆ. ಇನ್ನು, ಇದರ ಮಧ್ಯೆಯೇ ಶಾಂಗ್ರಿಲಾ ಹೋಟೆಲ್ ಎದುರು ಸಿದ್ದರಾಮಯ್ಯ ಹಾಗೂ ಡಿಕೆಶಿ ಬೆಂಬಲಿಗರು ಜಮಾಯಿಸಿದ್ದು, ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಸಿದ್ದು ಬೆಂಬಲಿಗರು, ಡಿಕೆಶಿಯೇ ಸಿಎಂ ಆಗಬೇಕು ಎಂದು ಡಿಕೆಶಿ ಬೆಂಬಲಿಗರು ಘೋಷಣೆಗಳನ್ನು ಕೂಗಿದ್ದಾರೆ.
ಶಾಂಗ್ರಿಲಾ ಹೋಟೆಲ್ ಎದುರು ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರ ಭಾವಚಿತ್ರ ಹಿಡಿದು ಘೋಷಣೆ ಕೂಗುತ್ತಿದ್ದಾರೆ. ಇನ್ನು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್ ಸಿಂಧೆ, ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾ ಸೇರಿ ಹಲವು ನಾಯಕರು ಉಪಸ್ಥಿತರಿದ್ದು, ಶೀಘ್ರವೇ ಸಿಎಂ ಆಯ್ಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.