ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ತವಕದಲ್ಲಿರುವ ಕಾಂಗ್ರೆಸ್ಸಿಗೆ ಇದೀಗ ಬಂಡಾಯದ ಬಿಸಿ ನುಂಗಲಾರದ ತುಪ್ಪವಾಗಿದೆ. ಇನ್ನು ಹ್ಯಾಟ್ರಿಕ್ ಗೆಲುವಿನ ತವಕದಲ್ಲಿರುವ ಅರುಣ್ ಶಹಾಪುರಗೆ ವಿರೋಧಿ ಅಲೆಯೇ ದೊಡ್ಡ ತಲೆ ನೋವಾಗಿದೆ. ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿಯ ಅರುಣ್ ಶಹಾಪುರ ಈ ಇಬ್ಬರಲ್ಲಿ ಯಾರ ಕೊರಳಿಗೆ ಗೆಲುವಿನ ಮಾಲೆ ಎಂಬುವುದೇ ಸದ್ಯದ ಕುತೂಹಲ.
ವಾಯವ್ಯ ಶಿಕ್ಷಕರ ಕ್ಷೇತ್ರದ ಕಣದಲ್ಲಿರುವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಬ್ಬರೂ ರಾಜಕೀಯ ಅನುಭವ ಹೊಂದಿದ್ದಾರೆ. ಪ್ರಕಾಶ ಹುಕ್ಕೇರಿ ಐದು ಸಲ ಶಾಸಕರಾಗಿ, ಒಂದು ಸಲ ಎಂಎಲ್ಸಿ ಆಗಿ, ಈ ಅವಧಿಯಲ್ಲಿ ಎರಡು ಸಲ ಸಚಿವರೂ ಆಗಿದ್ದರು. ಅಲ್ಲದೇ ಒಮ್ಮೆ ಲೋಕಸಭೆ ಸದಸ್ಯರು ಆಗಿದ್ದಾರೆ. ಹೀಗಾಗಿ ವಾಯವ್ಯ ಕ್ಷೇತ್ರ ವ್ಯಾಪ್ತಿ ಹೊಂದಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಪ್ರಕಾಶ ಹುಕ್ಕೇರಿ ಹಿಡಿತ ಹೊಂದಿದ್ದಾರೆ. ಇನ್ನು ಎಬಿವಿಪಿ ಮೂಲಕ ರಾಜಕೀಯ ಪ್ರವೇಶ ಪಡೆದಿರುವ ಅರುಣ್ ಶಹಾಪುರ ಕೂಡ ಎರಡು ಸಲ ಎಂಎಲ್ಸಿ ಆಗಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದರೆ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗುತ್ತದೆ. ಆರ್ಎಸ್ಎಸ್ ಬೆಂಬಲವೂ ಇವರಿಗಿದ್ದು, ಸಂಘದ ಕಾರ್ಯಕರ್ತರು ಈಗಾಗಲೇ ಅಖಾಡಕ್ಕೆ ಇಳಿದಿದ್ದಾರೆ.
ಶಹಾಪುರಗೆ ವಿರೋಧಿ ಅಲೆ
ಕ್ಷೇತ್ರದಲ್ಲಿ 36 ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಮೂರು ಜಿಲ್ಲೆಗಳಲ್ಲಿ ಅರುಣ್ ಶಹಾಪುರ ಬಗ್ಗೆ ವಿರೋಧಿ ಅಲೆ ಇದೆ. ಎಲ್ಲೇ ಪ್ರಚಾರಕ್ಕೆ ಹೋದರೂ ಅರುಣ್ ಶಹಾಪುರ ಮುಜುಗರಕ್ಕೆ ಒಳಗಾಗುವಂತ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ಚುನಾವಣೆ ಸಮಯದಲ್ಲಿ ಮಾತ್ರ ಶಿಕ್ಷಕರ ಬಳಿ ಬರುವ ಇವರು, ನಂತರ ಶಿಕ್ಷಕರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂಬ ಆರೋಪಗಳಿವೆ. ಕೋವಿಡ್ನಿಂದ ಮೃತಪಟ್ಟ ಶಿಕ್ಷಕ ಕುಟುಂಬಗಳಿಗೆ ತಮ್ಮದೇ ಸರ್ಕಾರ ಇದ್ದರೂ ಪರಿಹಾರ ಕೊಡಿಸಲು ಅರುಣ್ ಶಹಾಪುರಗೆ ಸಾಧ್ಯವಾಗಿಲ್ಲ. ಇನ್ನು ಹಲವು ಕ್ಷೇತ್ರಗಳಲ್ಲಿ ಮೃತ ಶಿಕ್ಷಕರ ಕುಟುಂಬಗಳ ಮನೆಗೆ ಹೋಗಿ ಇವರು ಸಾಂತ್ವನ ಹೇಳಿಲ್ಲ. ಹೀಗಾಗಿ ಇಡೀ ಶಿಕ್ಷಕ ವಲಯವೇ ಇದೀಗ ಶಹಾಪುರ ವಿರುದ್ಧ ತಿರುಗಿ ಬಿದ್ದಿದೆ. ಶಹಾಪುರಗೆ ವಿರೋಧಿ ಅಲೆ ಇರುವುದು ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಳಗಾವಿಗೆ ಆಗಮಿಸಿ ಮುಖಂಡರ ಸಭೆ ನಡೆಸಿದರು. ಶಹಾಪುರ ಗೆಲುವಿಗೆ ತಂತ್ರ ರೂಪಿಸಿದರು. ಇನ್ನು ಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದು, ಶಿಕ್ಷಕ ಸಂಘದ ಪದಾಧಿಕಾರಿಗಳ ಜತೆಗೆ ನಿರಂತರ ಸಭೆ ನಡೆಸುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಡ್ಯಾಮೇಜ್ ಕಂಟ್ರೋಲ್ಗೆ ಪ್ರಯತ್ನಿಸುತ್ತಿದ್ದು, ಫಲ ಸಿಗುತ್ತಾ? ಕಾದು ನೋಡಬೇಕಿದೆ.
ಹುಕ್ಕೇರಿಗೆ ಬಂಡಾಯದ ಬಿಸಿ
ಅರುಣ್ ಶಹಾಪುರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲೆಂದೇ ಕಾಂಗ್ರೆಸ್ ಹೈಕಮಾಂಡ್ ರಾಜಕೀಯ ಅನುಭವಿ ಪ್ರಕಾಶ ಹುಕ್ಕೇರಿಗೆ ಟಿಕೆಟ್ ಘೋಷಣೆ ಮಾಡಿದೆ. ಪ್ರಕಾಶ ಹುಕ್ಕೇರಿ ಮೂಲತಃ ಶಿಕ್ಷಕರಲ್ಲ. ಶಿಕ್ಷಕ ಪದವಿಯನ್ನೂ ಪಡೆದಿಲ್ಲ. ಆದರೆ ಮೂರು ಜಿಲ್ಲೆಗಳಲ್ಲಿ ಹಿಡಿತ ಹೊಂದಿದ್ದಾರೆ. ಜೊತೆಗೆ ಪ್ರಭಾವಿ ಪಂಚಮಸಾಲಿ ಸಮುದಾಯದ ನಾಯಕರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಆದರೆ ಕೈ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಇದೀಗ ಬಂಡಾಯದ ಬಿಸಿ ತಟ್ಟಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಎನ್.ಬಿ. ಬನ್ನೂರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ್ದಾರೆ. ಎನ್.ಬಿ ಬನ್ನೂರ ಜೊತೆಗೆ ಮಾತುಕತೆ ನಡೆಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದರು. ಆದರೆ ಈವರೆಗೆ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಬೆಳಗಾವಿಗೆ ಬರುತ್ತಿದ್ದು, ಎನ್.ಬಿ. ಬನ್ನೂರ ಮನವೊಲಿಸುವ ಸಾಧ್ಯತೆ ಇದೆ. ಎನ್.ಬಿ. ಬನ್ನೂರ ಅಖಾಡದಿಂದ ಹಿಂದೆ ಸರಿದರೆ ಮಾತ್ರ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ಇಲ್ಲವಾದರೆ ಕಾಂಗ್ರೆಸ್ ಮತಗಳು ವಿಭಜನೆ ಆಗಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ.
ಇದನ್ನೂ ಓದಿ | MLC Election | ಸುರ್ಜೇವಾಲ, ಡಿಕೆಶಿ ಸಮ್ಮುಖದಲ್ಲಿ ಬೆಳಗಾವಿ ಕೈ ಶಕ್ತಿ ಪ್ರದರ್ಶನ