Site icon Vistara News

ಚುನಾವಣೆ ವೇಳೆಯೇ ಕಾಂಗ್ರೆಸ್‌ಗೇಕೆ ಲಿಂಗಾಯತರ ಮೇಲೆ ಪ್ರೀತಿ; ರಾಹುಲ್‌ ಗಾಂಧಿಗೆ ವಿಜಯೇಂದ್ರ ಪ್ರಶ್ನೆ

Vijayendra questions Rahul Gandhi

ಬಿ.ವೈ.ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಸವ ಜಯಂತಿ ದಿನವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಲಿಂಗಾಯತರ ಮತಗಳನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. “ರಾಹುಲ್‌ ಗಾಂಧಿಯವರೇ, ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‌ಗೇಕೆ ಲಿಂಗಾಯತರ ಮೇಲೆ ಇಷ್ಟೊಂದು ಪ್ರೀತಿ” ಎಂದು ಪ್ರಶ್ನಿಸಿದ್ದಾರೆ.

“ರಾಹುಲ್‌ ಗಾಂಧಿಯವರೇ, ವೀರೇಂದ್ರ ಪಾಟೀಲ್‌ ಹಾಗೂ ನಿಜಲಿಂಗಪ್ಪ ಅವರನ್ನು ಅವಮಾನಿಸುವಾಗ ಲಿಂಗಾಯತರ ಮೇಲಿರುವ ಈ ಪ್ರೀತಿ ಎಲ್ಲಿ ಹೋಗಿತ್ತು? ನೀವು ಲಿಂಗಾಯತ ಸಮುದಾಯವನ್ನು ಇಬ್ಭಾಗ ಮಾಡಲು ಹೊರಟಿದ್ದಾಗ, ಬಸವಣ್ಣನವರ ಬೋಧನೆಗಳು ಮರೆತು ಹೋಗಿದ್ದವಾ” ಎಂದು ಸರಣಿ ಟ್ವೀಟ್‌ಗಳ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ವಿಜಯೇಂದ್ರ ಮಾಡಿದ ಸರಣಿ ಟ್ವೀಟ್‌ಗಳು

“1989ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್‌ ನಾಯಕತ್ವದಲ್ಲಿ ಕಾಂಗ್ರೆಸ್‌ 178 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಜನಪ್ರಿಯ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರ ಮೇಲೆ ಕಾಂಗ್ರೆಸ್‌ ದುರಹಂಕಾರ ಪ್ರದರ್ಶಿಸಿತು. ಅವರನ್ನು ಅಧಿಕಾರದಿಂದ ಕೆಳಗಿಳಿಸಿತು. ಇದೇ ಕಾರಣದಿಂದಾಗಿ, ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು” ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯರನ್ನು ಕೋಲಾರ ಬಿಟ್ಟು ಕಳುಹಿಸಲು ಡಿಕೆಶಿ ಬೋಗಸ್‌ ಸರ್ವೇ; ವಿಜಯೇಂದ್ರ ಆರೋಪ

ಕಾಂಗ್ರೆಸ್‌ ಈಗ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ. ಒಂದು ಸಣ್ಣ ಮುನ್ನಡೆಗಾಗಿ ಹಾತೊರೆಯುತ್ತಿದೆ. ಆದರೂ, ಕಾಂಗ್ರೆಸ್ಸಿಗರು 2023ರ ಚುನಾವಣೆಯಲ್ಲಿ ಗೆಲುವಿನ ಎಲ್ಲ ಭರವಸೆ ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಹತಾಶಗೊಂಡಿರುವ ಕಾರಣದಿಂದಾಗಿಯೇ ಕುತಂತ್ರ ಮಾಡಲಾಗುತ್ತಿದೆ. ನೀವು ಇದಕ್ಕೂ ಮೊದಲು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದರೆ ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ಕುತಂತ್ರಗಳು ಬಸವಣ್ಣವರ ಅನುಯಾಯಿಗಳಿಗೆ ಗೊತ್ತಿವೆ. ನಿಮ್ಮ ಹುಸಿ ಪ್ರಯತ್ನಗಳಿಗೆ, ಚಟುವಟಿಕೆಗಳಿಗೆ ಯಾರೂ ಬೆಲೆ ಕೊಡುವುದಿಲ್ಲ. ನಿಮ್ಮನ್ನು ನೀವೇ ಮೂರ್ಖರನ್ನಾಗಿಸಿಕೊಳ್ಳುವುದನ್ನು ನಿಲ್ಲಿಸಿ” ಎಂದು ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಮತಗಳ ಪ್ರಾಮುಖ್ಯವನ್ನು ಅರಿತ ಕಾಂಗ್ರೆಸ್‌, ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಆ ಮೂಲಕ ಲಿಂಗಾಯತರ ಮತಗಳನ್ನು ಸೆಳೆಯುವುದು ಅದರ ಉದ್ದೇಶವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಲಿಂಗಾಯತರ ಮತಗಳನ್ನು ಬಿಟ್ಟುಕೊಡಬಾರದು ಎಂದು ಪಣ ತೊಟ್ಟಿರುವ ಬಿಜೆಪಿಯು, ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದೆ.

Exit mobile version