ಬೆಂಗಳೂರು: ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ – High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಲು ಇದ್ದ ಗಡುವನ್ನು ರಾಜ್ಯ ಸರ್ಕಾರ ಈಗ ಮೇ 17ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದೆ. ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಹೊರಡಿಸಿದ್ದ ಆದೇಶವನ್ನು ಇದುವರೆಗೆ ಎರಡು ಬಾರಿ ಮುಂದಕ್ಕೆ ಹಾಕಿದಂತಾಗಿದೆ. ಇದಕ್ಕೆ ಕಾರಣ, ಇನ್ನೂ ಅಲ್ಪಮಟ್ಟದಲ್ಲಿ ನೋಂದಣಿ ಆಗಿರುವುದು ಎಂಬ ಅಂಶ ತಿಳಿದುಬಂದಿದೆ.
ಕಳೆದ ಫೆ.17ಕ್ಕೆ HSRP ನಂಬರ್ ಪ್ಲೇಟ್ ಅನ್ನು ನೋಂದಣಿ ಮಾಡಲು ಕೊನೇ ದಿನಾಂಕ ಎಂದು ಘೋಷಿಸಲಾಗಿತ್ತು. ಆದರೆ, 18 ಲಕ್ಷ ವಾಹನಗಳಷ್ಟೇ ಈಗ ನೋಂದಣಿ ಮಾಡಿಸಿಕೊಂಡಿದ್ದರಿಂದ ರಾಜ್ಯ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಈ ಸಂಬಂಧ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಗೆ ಬಂದಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿ, ಇನ್ನೂ 18 ಲಕ್ಷ ವಾಹನ ಸವಾರರು ನೋಂದಣಿ ಮಾಡಿಸಿಕೊಂಡಿದ್ದರಿಂದ ಗಡುವನ್ನು ವಿಸ್ತರಣೆ ಮಾಡುತ್ತಿರುವುದಾಗಿ ಹೇಳಿದ್ದರು. ಇದರಂತೆ ಈಗ ಮೇ 17 ರವರೆಗೆ ಅವಧಿಯು ವಿಸ್ತರಣೆ ಆದಂತೆ ಆಗಿದೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರವೇ ನೋಂದಣಿ ಮಾಡಿ
ಅದೆಷ್ಟೋ ಜನರಿಗೆ ಎಲ್ಲಿ ಅಪ್ಲೈ ಮಾಡಬೇಕು ಎಂಬುದೇ ಗೊತ್ತಿಲ್ಲ. ಹೀಗಾಗಿ ಗೊತ್ತಾಗದೇ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ ಕೂಡ. ಇನ್ನು ಕೆಲವರು ಯಾವುದ್ಯಾವುದೋ ವೆಬ್‌ಸೈಟ್ ಓಪನ್ ಮಾಡಿ ವಂಚನೆಗೆ ಒಳಗಾಗುತ್ತಿದ್ದು, ಇದನ್ನು ತಪ್ಪಿಸುವ ಕೆಲಸ ಆಗಬೇಕಿದೆ. ಇನ್ನು ಮೊಬೈಲ್ ಇಲ್ಲವೇ ಡೆಸ್ಕ್‌ಟಾಪ್ ಮೂಲಕವೇ ನೋಂದಣಿ ಮಾಡಿಸಬಹುದಾಗಿದ್ದು, ಇದಕ್ಕೆ ಸರಳ ವಿಧಾನವಿದೆ.
ಅಧಿಸೂಚನೆ ಹೊರಡಿಸಿದ್ದ ಸರ್ಕಾರ
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (High Security Registration Plate-ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.
ಅರ್ಜಿ ಸಲ್ಲಿಕೆಗೆ ನವೆಂಬರ್ 17 ಕೊನೇ ದಿನವಾಗಿತ್ತು
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ನ. 17ರೊಳಗೆ ಅಳವಡಿಸುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಬಳಿಕ ವಿಸ್ತರಣೆ ಮಾಡಲಾಗುತ್ತಾ ಬರುತ್ತಿದೆ.
ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು? ಇಲ್ಲಿದೆ ವಿಡಿಯೊ
ಹೆಚ್ಚುವರಿ ಹಣ ವಸೂಲಿ ಮಾಡಿದರೆ ದೂರು ನೀಡಿ: ರಾಮಲಿಂಗಾ ರೆಡ್ಡಿ
HSRP ಅಳವಡಿಸಲು ಹೆಚ್ಚುವರಿ ಹಣ ವಸೂಲಿ ವಿಚಾರ ಸರ್ಕಾರದ ಗಮನಕ್ಕೆ ಬರುತ್ತಿದೆ. ಈ ಬಗ್ಗೆ ದೂರುಗಳು ಸಹ ಕೇಳಿ ಬಂದಿವೆ. ಅಲ್ಲದೆ, ಸರಿಯಾಗಿ ಅಳವಡಿಸದೇ ಇದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ನಾಗರಿಕರು ಹೆಚ್ಚುವರಿ ಹಣ ವಸೂಲಿ ಮಾಡುವಂತಹ ಡೀಲರ್‌ಗಳ ಮೇಲೆ ದೂರು ನೀಡಬೇಕು. ಸಾರಿಗೆ ಇಲಾಖೆಯ ಆಯುಕ್ತರಿಗೆ ದೂರು ನೀಡಿದರೆ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಪದೇ ಪದೆ ಗ್ರಾಹಕರಿಗೆ ಕಿರಿಕಿರಿ ಮಾಡಿದರೆ ಅಂತಹ ಡೀಲರ್‌ಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್ ಪ್ಲೇಟ್‌ಗಳನ್ನು ಎರಡು ಲಾಕ್ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.
ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?
- ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ವೆಬ್‌ಸೈಟ್ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್ ಮಾಡಿ.
- ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
- ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
- HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
- HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
- ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
- ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
- ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
- ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆಯನ್ನು ಹೊಂದಬಹುದು.
ಪ್ರಮುಖ ಅಂಶಗಳು
- ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಎಸ್‌ಐಎಎಂ ವೆಬ್‌ಸೈಟ್ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿಕೊಳ್ಳಿ.
- ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
- HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಸುವುದಿಲ್ಲ.
- ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
- HSRP ಅಳವಡಿಕೆಗೆ ಮೇ 17 ಕೊನೇ ದಿನವಾಗಿದ್ದು, ಕೂಡಲೇ ಅರ್ಜಿ ಸಲ್ಲಿಸಿ
ಎಚ್‌ಎಸ್‌ಆರ್‌ಪಿ ಯಾಕೆ ಮತ್ತು ವಿಶೇಷತೆ ಏನು?
- HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿಲ್ಲ.
- ನಂಬರ್ ಪ್ಲೇಟ್‌ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್ ಇರುತ್ತದೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಹಲವೆಡೆ ಇರುತ್ತದೆ.
- ಸುರಕ್ಷಿತ ನಂಬರ್ ಪ್ಲೇಟ್‌ನಲ್ಲಿ ನಂಬರ್ ಪ್ಲೇಟ್ ನಕಲು ಮಾಡುವುದು ಸಾಧ್ಯವಿಲ್ಲ.
- ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಕಾರಿಯಾಗಲಿದೆ.
- ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕಾರಿ.
- ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: KAS Recruitment 2024: 384 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್ 4ರಿಂದಲೇ ಅರ್ಜಿ ಸಲ್ಲಿಸಿ
ಹೆಚ್ಚುತ್ತಿವೆ ನಕಲಿ ಹಾವಳಿ; ಎಚ್ಚರ
HSRP ನಂಬರ್ ಪ್ಲೇಟ್‌ಗಳನ್ನು ನಕಲಿ ಮಾಡಿ ವಂಚನೆ ಮಾಡುವ ಜಾಲವು ಇದ್ದು, ಸಾರ್ವಜನಿಕರು ಮೋಸ ಹೋಗದಂತೆ ಮನವಿ ಮಾಡಲಾಗುತ್ತಿದೆ. ಈ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಂತೆಯೇ ಹೋಲಿಕೆ ಇರುವಂತೆ ಇಂಥವರು ಸಿದ್ಧಪಡಿಸಿ ಕೊಡುತ್ತಾರೆ. ಇದನ್ನು ಅಗ್ಗದ ಬೆಲೆಯಲ್ಲಿ ಕೊಡುವುದರಿಂದ ಜನರೂ ಗೊತ್ತಿಲ್ಲದೆ ಖರೀದಿ ಮಾಡುತ್ತಾರೆ. ಆದರೆ, ಅದರಲ್ಲಿ ಟ್ಯಾಂಪರ್ ಪ್ರೂಫ್ ವೈಶಿಷ್ಟ್ಯ, ಯುನೀಕ್ ಐಡೆಂಟಿಟಿ ಅಂಶಗಳು ಇರುವುದಿಲ್ಲ. ಇದರಿಂದ ಒಮ್ಮೆ ಆರ್‌ಟಿಒ ಪೊಲೀಸರಿಗೆ ಸಿಕ್ಕಿ ಬಿದ್ದರೆ ದಂಡ ಕಟ್ಟುವುದು ಗ್ಯಾರಂಟಿಯಾಗಿದೆ. ಇಲ್ಲಿ “IND” ಗುರುತಾಗಲೀ, ಅಶೋಕ ಚಕ್ರ ಚಿಹ್ನೆಯ Hot stamp ಆಗಲೀ ಇರುವುದಿಲ್ಲ. ಹೀಗಾಗಿ ಅಧಿಕೃತ ವಿತರಕರಿಂದ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರ ಸಹ ಹೇಳಿದೆ.