ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆ ಇತ್ತೀಚಿನ ಕೆಲವು ದಿನಗಳಲ್ಲಿ ವರದಿಯಾದ ಪ್ರಕಾರ ಹಲವಾರು ಮಂದಿ ಗೀಸರ್ನ ಗ್ಯಾಸ್ ಸೋರಿಕೆಯಾಗಿ (Gas geyser leak) ಮೃತಪಟ್ಟಿದ್ದಾರೆ. ಗ್ಯಾಸ್ ಗೀಸರ್ ಆನ್ನಲ್ಲಿಟ್ಟು ಸ್ನಾನ ಮಾಡಲು ಮುಂದಾದ ಹಲವಾರು ಮಂದಿ ವಿಷಾನಿಲ ದೇಹಕ್ಕೆ ಸೇರಿ ಅಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಮೂಗಿನ ಮೂಲಕ ವಿಷಾನಿಲ ಪ್ರವೇಶಿಸಿದ್ದು ಗೊತ್ತಾಗದೇ ಕೊಂಚವೂ ಸುಳಿವಿಲ್ಲದೇ ಅವರೆಲ್ಲರೂ ಮೃತಪಟ್ಟಿದ್ದಾರೆ. ಹೀಗಾಗಿ ಗ್ಯಾಸ್ ಗೀಸರ್ ಬಳಕೆಯ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಕೆಲವರು ಈ ಅಪಾಯಕಾರಿ ಸಾಧನವನ್ನೇ ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಕಾರ್ಯಸಾಧುವೊ ಎಂಬುದು ಸ್ಪಷ್ಟವಿಲ್ಲ. ಆದರೆ, ಗ್ಯಾಸ್ ಗೀಸರ್ ಅನ್ನು ಸುರಕ್ಷಿತವಾಗಿ ಬಳಸಿದರೆ ಏನೂ ಅಪಾಯ ಇಲ್ಲ ಎಂಬುದು ಪರಿಣತರ ಅಭಿಪ್ರಾಯ.
ಬೆಂಗಳೂರಿನಲ್ಲಿ ಸೋಮವಾರ (ಡಿಸೆಂಬರ್ 25) 21 ವರ್ಷದ ಯುವತಿಯೊಬ್ಬಳು ಸ್ನಾನದ ಮನೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಅದಕ್ಕೆ ಗ್ಯಾಸ್ ಗೀಸರ್ ನ ಅನಿಲ ಸೋರಿಕೆ ಕಾರಣ. ಅಣ್ಣನ ಮದುವೆಗೆಂದು ರಜೆ ಹಾಕಿದ್ದವಳು ಇಹಲೋಕ ತ್ಯಜಿಸಿದ್ದಾಳೆ. ಇದೇ ರೀತಿ ಡಿಸೆಂಬರ್ 23ರಂದು ನಡೆದ ಘಟನೆಯಲ್ಲಿ ಗರ್ಭಿಣಿಯೊಬ್ಬರು ಮೃತಪಟ್ಟಿದ್ದಾರೆ. ಇದು ಬೆಂಗಳೂರಿನ ಅಶ್ವತ್ಥನಗರದಲ್ಲಿ ನಡೆದಿದೆ. ಜತೆಗಿದ್ದ ಮಗವೂ ಗಂಭಿರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದೆ. ಮಗುವನ್ನು ಸ್ನಾನ ಮಾಡಿಸಲು ಹೋದಾಗ ಘಟನೆ ನಡೆದಿದೆ. ಕಳೆದ ಜೂನ್ನಲ್ಲಿ ಯುವ ಜೋಡಿಯೊಂದು ಜತೆಯಾಗಿ ಸ್ನಾನ ಮಾಡಲು ಬಾತ್ರೂಮ್ಗೆ ಹೋಗಿದ್ದ ವೇಳೆ ಮೃತಪಟ್ಟಿತ್ತು. ಚಾಮರಾಜನಗರದ ಗುಂಡ್ಲುಪೇಟೆಯ ಯುವಕ ಮತ್ತು ಯುವತಿ ಬೆಂಗಳೂರಿನ ಚಿಕ್ಕಜಾಲದಲ್ಲಿ ವಾಸವಿದ್ದರು. ಸ್ನಾನಕ್ಕೆ ಹೋದವರು ಹೊರಕ್ಕೆ ಬಾರದಿದ್ದಾಗ ಉಳಿದವರು ಅನುಮಾನಗೊಂಡು ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಕುಸಿದು ಮೃತಪಟ್ಟಿದ್ದರು.
ಮುಂಬೈನಲ್ಲೂ ನಡೆದಿತ್ತು ಪ್ರಕರಣ
ಗೀಸರ್ ಅನಿಲ ಸೋರಿಕೆಯಿಂದಾಗಿ ಮುಂಬೈ ಮತ್ತು ಗಾಜಿಯಾಬಾದ್ನಲ್ಲೂ ಕಳೆದ ವಾರ ದಂಪತಿಗಳು ಮೃತಪಟ್ಟಿದ್ದರು. ಎರಡೂ ಪ್ರತ್ಯೇಕ ಪ್ರಕರಣವಾಗಿದೆ. ಮುಂಬೈನ ದೀಪಕ್ ಶಾ (45) ಮತ್ತು ಟೀನಾ ಶಾ (39) ಮತ್ತು ಗಾಜಿಯಾಬಾದ್ನ ದೀಪಕ್ (40) ಮತ್ತು ಶಿಲ್ಪಿ (36) ಮೃತಪಟ್ಟವರು. ಇಬ್ಬರೂ ತಮ್ಮ ನಗರಗಳ ಮನೆಯಲ್ಲಿ ಮೃತಪಟ್ಟಿದ್ದಾರೆ.
ಇಷ್ಟೊಂದು ಅಪಾಯಕಾರಿಯಾಗಿರುವ ಗ್ಯಾಸ್ ಗೀಸರ್ ಬಳಕೆ ಇನ್ನೂ ಯಾಕೆ ಜನಪ್ರಿಯ ಹಾಗೂ ಅಪಾಯ ತಡೆಯಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
ಗ್ಯಾಸ್ ಗೀಸರ್ ಎಂದರೇನು?
ಹೆಸರೇ ಹೇಳುವಂತೆ ಎಲ್ಪಿಜಿ ಮೂಲಕ ಕೆಲಸ ಮಾಡುವ ಗೀಸರ್ ಇದು. ಗ್ಯಾಸ್ ಗೀಸರ್ ಗಳು ಗಾಳಿಯಲ್ಲಿರುವ ಆಮ್ಲಜನಕವನ್ನು ಬಳಸುತ್ತವೆ ಮತ್ತು ನೀರನ್ನು ಬಿಸಿ ಮಾಡುವ ವೇಳೆ ಕಾರ್ಬನ್ ಮಾನಾಕ್ಸೈಡ್ ಅನ್ನು ಹೊರಸೂಸುತ್ತದೆ. ಮುಚ್ಚಿದ ಸ್ಥಳದಲ್ಲಿ ಗೀಸರ್ ಬಿಡುವ ವಿಷಾನಿಲ ವಾತಾವರಣದಲ್ಲಿನ ಆಮ್ಲಜನಕದ ಕೊರತೆ ಉಂಟು ಮಾಡುತ್ತದೆ. ಇದು ಉಸಿರುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ಮಾರಣಾಂತಿಕ.
ಇದನ್ನೂ ಓದಿ : ಗೀಸರ್ ಗ್ಯಾಸ್ ಸೋರಿಕೆ; ಪ್ರಜ್ಞೆ ತಪ್ಪಿ ಬಿದ್ದ ಯುವತಿ ಬಾತ್‌ರೂಮ್‌ನಲ್ಲೇ ಸಾವು
ಅನ್ನಸಲ್ಸ್ ಆಫ್ ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ ಸಂಸ್ಥೆ 2008-2011 ರ ನಡುವೆ ನಡೆಸಿದ ಅಧ್ಯಯನದಲ್ಲಿ, ಗಾಳಿಯಾಡದ ಸ್ನಾನಗೃಹಗಳಲ್ಲಿರುವ ಗ್ಯಾಸ್ ಗೀಸರ್ಗಳು 26 ರೀತಿಯ ಅಪಸ್ಮಾರಗಳಿಗೆ ಕಾರಣವಾಗುತ್ತದೆ.
ಅಪಾಯಕಾರಿ ಆದರೂ ಜನಪ್ರಿಯ ಯಾಕೆ?
ವಿದ್ಯುತ್ ಬಿಲ್ಗಳನ್ನು ಉಳಿಸುವುದಕ್ಕಾಗಿ ಕೆಲವರು ಗ್ಯಾಸ್ ಗೀಸರ್ ಬಳಸುತ್ತಾರೆ. ಎಲೆಕ್ಟ್ರಿಕ್ ಗೀಸರ್ಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆ ವೆಚ್ಚದಾಯಕ. ಹೀಗಾಗಿ ಅದಿನ್ನೂ ಜನಪ್ರಿಯವಾಗಿದೆ.
ಗ್ಯಾಸ್ ಗೀಸರ್ ಮನೆಯಲ್ಲಿದ್ದವರು ಈ ವಿಷಯಗಳ ಬಗ್ಗೆ ತಿಳಿದುಕೊಂಡಿರಿ
- ಗ್ಯಾಸ್ ಗೀಸರ್ ನಲ್ಲಿ, ಒಲೆಯಂತೆಯೇ ಬೆಂಕಿ ಉರಿಯುತ್ತದೆ. ಹೀಗಾಗಿ ಇಂಗಾಲದ ಮಾನಾಕ್ಸೈಡ್ ಅನ್ನು ಹೊರಸೂಸುತ್ತದೆ. ಕಾರ್ಬನ್ ಮಾನಾಕ್ಸೈಡ್ ವಾಸನೆ ರಹಿತ ಮತ್ತು ಬಣ್ಣರಹಿತ, ಆದ್ದರಿಂದ ಸೋರಿಕೆಯಾದರೆ ಅದರ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ.
- ಕಾರ್ಬನ್ ಮಾನಾಕ್ಸೈಡ್ ಅಪಾಯಕಾರಿ. ಅದನ್ನು ಉಸಿರಾಡಿದ ಕೆಲವೇ ನಿಮಿಷಗಳ ತಲೆ ತಿರುಗುವಿಕೆ ಶುರುವಾಗುತ್ತದೆ. ಸ್ವಲ್ಪ ಹೊತ್ತಿನಲ್ಲಿಯೇ ಮೂರ್ಛೆ ಹೋಗುತ್ತಾರೆ.
- ಕಾರ್ಬನ್ ಮಾನಾಕ್ಸೈಡ್ ವಿಷಕ್ಕೆ ಯಾವುದೇ ಮನೆಮದ್ದುಗಳಿಲ್ಲ. ಅಸ್ವಸ್ಥಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ. ತಡವಾದರೆ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.
ಸುರಕ್ಷತಾ ಸಲಹೆಗಳು
- ಗ್ಯಾಸ್ ಗೀಸರ್ ಅನ್ನು ಸ್ನಾನಗೃಹ ಅಥವಾ ಅಡುಗೆಮನೆಯಂತಹ ಮುಚ್ಚಿದ ಸ್ಥಳದಲ್ಲಿ ಹಾಕಲೇಬೇಡಿ. ಹಾಕಿದ್ದರೂ ಕೋಣೆಗಳ ಕಿಟಕಿ, ಬಾಗಿಲು ತೆರೆದಿಡಲೇಬೇಕು. ಸ್ನಾನಗೃಹ ಅಥವಾ ಅಡುಗೆಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಇದ್ದರೆ ಅದನ್ನು ಸ್ವಿಚ್ ಆನ್ ಮಾಡಿಡಬೇಕು.
- ಸೋರಿಕೆಗಳು ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆಗಾಗಿ ಪ್ರತಿ ಬಾರಿಯೂ ಪರಿಶೀಲನೆ ಮಾಡಿ.
- ದಿನವಿಡೀ ಗೀಸರ್ ಆನ್ ಮಾಡಿ ಇಡಬೇಡಿ. ಬಳಸುವ ಪ್ರತಿ ಬಾರಿಯೂ ಕೆಲವು ಗಂಟೆಗೆಳ ಅಂತರವನ್ನು ಕಾಯ್ದುಕೊಳ್ಳಬೇಕು.
- ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಅಸ್ವಸ್ಥಗೊಂಡವರನ್ನು ತೆರೆದ ಪ್ರದೇಶಕ್ಕೆ ಕರೆತನ್ನಿ.
- ಎಲ್ಲದಕ್ಕೂ ಮೊದಲಾಗಿ ಸ್ನಾನಗೃಹಕ್ಕೆ ಪ್ರವೇಶಿಸುವ ಮೊದಲು ಗೀಸರ್ ಅನ್ನು ಸ್ವಿಚ್ ಆಫ್ ಮಾಡಿ. ಇದು ಅಪಾಯ ಸಾಕಷ್ಟು ಕಡಿಮೆ ಮಾಡುತ್ತದೆ.