Site icon Vistara News

Sathish Jarakiholi | ಹೇಳಿಕೆ ಹಿಂಪಡೆದುದು ಯಾಕೆ? ಕಾಂಗ್ರೆಸ್‌ ವರಿಷ್ಠರ ಒತ್ತಡಕ್ಕೆ ಮಣಿದ್ರಾ ಸತೀಶ್‌ ಜಾರಕಿಹೊಳಿ?

udupi prathibhatane

ಬೆಂಗಳೂರು: ಪರ್ಶಿಯನ್‌ ಭಾಷೆಯಲ್ಲಿರುವ ಹಿಂದು ಪದದ ಮೂಲದ ಅರ್ಥವನ್ನು ಉಲ್ಲೇಖಿಸಿ ವಿವಾದವನ್ನು ಮೈಮೇಲೆಳೆದುಕೊಂಡ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ತಮ್ಮದೇ ಮಾತನ್ನು ಹಿಂದಕ್ಕೆ ಪಡೆದಿದ್ದಾರೆ. ಒಂದು ಹಂತದಲ್ಲಿ ತಾನು ಯಾವ ಕಾರಣಕ್ಕೂ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಅವರು ಈಗ ದಿಢೀರಾಗಿ ಯೂ ಟರ್ನ್‌ ಹೊಡೆದಿದ್ದಾರೆ. ಜತೆಗೆ ಮುಖ್ಯಮಂತ್ರಿಗಳಿಗೆ ಒಂದು ಪತ್ರವನ್ನೂ ಬರೆದಿದ್ದಾರೆ. ಇದಕ್ಕೆ ಏನು ಕಾರಣ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಸತೀಶ್‌ ಜಾರಕಿಹೊಳಿ ಅವರು ಕಾಂಗ್ರೆಸ್‌ ವರಿಷ್ಠರ ಒತ್ತಡಕ್ಕೆ ಮಣಿದರಾ ಅಥವಾ ಬಿಜೆಪಿ ರಾಜ್ಯಾದ್ಯಂತ ಕೈಗೆತ್ತಿಕೊಂಡಿರುವ ಪ್ರತಿಭಟನೆ ಮತ್ತು ಅದರಿಂದ ಪಕ್ಷದ ಮೇಲೆ ಆಗಬಹುದಾದ ಪರಿಣಾಮಗಳಿಂದ ಅತಂಕಗೊಂಡರಾ ಎಂಬ ಪ್ರಶ್ನೆ ಎದುರಾಗಿದೆ.

ನಿಜವೆಂದರೆ, ಸತೀಶ್‌ ಜಾರಕಿಹೊಳಿ ಅವರ ಹಿಂದು ಕೀಳು ಹೇಳಿಕೆಯಿಂದ ಅವರಿಗೆ ಹೆಚ್ಚು ಡ್ಯಾಮೇಜ್‌ ಆಗಿರಲಿಲ್ಲ. ಸತೀಶ್‌ ಜಾರಕಿಹೊಳಿ ಅವರ ನಡವಳಿಕೆ, ಮೌಢ್ಯ ವಿರೋಧಿ ಹೋರಾಟ, ಓದು ಮತ್ತಿತರ ವಿಚಾರಗಳನ್ನು ಅರಿತವರು ಅವರ ಈ ಹೇಳಿಕೆ ಬಗ್ಗೆ ಆಚ್ಚರಿಯೇನೂ ಪಟ್ಟಿರಲಿಲ್ಲ. ಆದರೆ, ಇದು ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ಉಂಟು ಮಾಡುವುದಕ್ಕೆ ಎಲ್ಲ ರೀತಿಯಲ್ಲೂ ಅವಕಾಶಗಳಿವೆ.

ಇದನ್ನು ಅರಿತೇ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಈ ಮಾತನ್ನು ತೀವ್ರವಾಗಿ ಆಕ್ಷೇಪಿಸಿದ್ದರು. ಡಿ.ಕೆ. ಶಿವಕುಮಾರ್‌ ಅವರಂತೂ ಫುಲ್‌ ಗರಂ ಆಗಿದ್ದರು. ಸುರ್ಜೆವಾಲ ಅವರಂತೂ ಕೂಡಲೇ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದರು. ಸತೀಶ್‌ ಜಾರಕಿಹೊಳಿ ಅವರು ಪತ್ರಿಕಾಗೋಷ್ಠಿಯನ್ನೇನೋ ಕರೆದರು. ಆದರೆ, ‌ವಿವಾದವನ್ನು ತಣ್ಣಗಾಗಿಸುವ ಬದಲು ಮತ್ತಷ್ಟು ಬೆಂಕಿ ಹಚ್ಚಿದರು. ಯಾವ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆ ಇಲ್ಲ ಎಂದು ಹೇಳಿ ತಮ್ಮ ಹೇಳಿಕೆಯನ್ನೇ ಸಮರ್ಥಿಸಿದರು. ಎರಡು ದಿನಗಳಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವ ವಿಚಾರದ ಬಗ್ಗೆ ಅವರು ಯೋಚನೆಯೇ ಮಾಡದಂತಿದ್ದರು. ತನ್ನ ಮಾತಿಗೆ ತಾನು ಬದ್ಧ ಎಂದು ಹೇಳಿದ್ದರು.

ಈ ನಡುವೆ ಬಿಜೆಪಿ ಬುಧವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ, ಹೋರಾಟವನ್ನು ಸಂಘಟಿಸುವ ಮೂಲಕ ಹೇಳಿಕೆಯ ಲಾಭ ಎತ್ತುವ ಪ್ರಯತ್ನ ಶುರು ಮಾಡಿತ್ತು. ಎರಡೂ ದಿನ ನಡೆದ ಎಲ್ಲ ಜನ ಸಂಕಲ್ಪ ರ‍್ಯಾಲಿಗಳಲ್ಲೂ ಹಿಂದು ಅವಹೇಳನದ್ದೇ ಸದ್ದು. ಈ ಹಂತದಲ್ಲಿ ಕಾಂಗ್ರೆಸ್‌ನ ವರಿಷ್ಠರು ಸತೀಶ್‌ ಜಾರಕಿಹೊಳಿ ಅವರ ಹೇಳಿಕೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿದರು ಎನ್ನಲಾಗಿದೆ.

ಕೊನೆಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರೋ ಅಥವಾ ರಾಹುಲ್‌ ಗಾಂಧಿಯವರ ಮೂಲಕವೋ ಸತೀಶ್‌ ಜಾರಕಿಹೊಳಿ ಅವರಿಗೆ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಸ್ವಲ್ಪ ಉಡಾಫೆ ರೀತಿಯಲ್ಲಿ ನಡೆದುಕೊಂಡಿದ್ದ ಸತೀಶ್‌ ಅವರು ಕೂಡಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಠವನ್ನು ಬಿಟ್ಟರು ಎನ್ನಲಾಗಿದೆ.

ಕಾಂಗ್ರೆಸ್‌ಗೆ ರಾಜ್ಯದಲ್ಲಿ ಗೆಲುವು ಸಾಧಿಸುವ ಸಣ್ಣ ಅವಕಾಶ ಇದ್ದೇ ಇದೆ. ಇದನ್ನು ಇಂಥ ವಿವಾದಗಳ ಮೂಲಕ ಹಾಳು ಮಾಡಿಕೊಳ್ಳಬಾರದು ಎಂದು ಸತೀಶ್‌ ಜಾರಕಿಹೊಳಿ ಅವರಿಗೆ ಆಪ್ತರಾಗಿರುವ ನಾಯಕರು ಸಲಹೆ ನೀಡಿದ್ದರಿಂದ ಅವರು ತಮ್ಮ ಹಠದಿಂದ ಹಿಂದೆ ಸರಿದಿರುವ ಸಾಧ್ಯತೆಗಳಿವೆ.

ಹಾಗಂತ ಇದರಿಂದ ಪೂರ್ತಿ ಡ್ಯಾಮೇಜ್‌ ಕಂಟ್ರೋಲ್‌ ಆಯಿತು ಎಂದು ಹೇಳುವಂತಿಲ್ಲ. ರಾಜಕೀಯದಲ್ಲಿ ಪ್ರತಿಯೊಂದು ಸಣ್ಣ ಅಸ್ತ್ರವೂ ಬಳಕೆಯಾಗುತ್ತದೆ. ಹೀಗಿರುವಾಗ ಬಿಜೆಪಿ ಈಗ ಸಿಕ್ಕಿರುವ ಅಸ್ತ್ರವನ್ನು ಸರಿಯಾಗಿಯೇ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.

ಸತೀಶ್‌ ಜಾರಕಿಹೊಳಿ ಮತ್ತೊಂದು ತಂತ್ರ
ಇದರ ನಡುವೆಯೇ ಸತೀಶ್‌ ಜಾರಕಿಹೊಳಿ ಹೇಳಿಕೆ ಹಿಂಪಡೆಯುವ ಪತ್ರವನ್ನು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆಯುವ ಮೂಲಕ ಚಾಣಾಕ್ಷತೆ ಮೆರೆದಿದ್ದಾರೆ. ಹೇಳಿಕೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಈ ರೀತಿ ಮಾಡುವುದು ಸರಿಯಲ್ಲ. ಹೀಗೆ ಅಪಪ್ರಚಾರ ಮಾಡುವ ಬಗ್ಗೆ ತನಿಖೆ ನಡೆಸಿ ಎಂದು ಅವರನ್ನೇ ಹೊಣೆಗಾರರನ್ನಾಗಿಯೂ ಮಾಡಿದ್ದಾರೆ. ಇದರಿಂದ ಹೆಚ್ಚಿನ ಗುರಿ ಸಾಧನೆ ಆಗದೆ ಹೋದರೂ ಬಿಜೆಪಿಯ ಪ್ರತಿಭಟನೆ ಸ್ವಲ್ಪ ಮಟ್ಟಿಗೆ ತಣ್ಣಗಾಗಲೂ ಬಹುದು.

ಇದನ್ನೂ ಓದಿ | Sathish Jarakiholi | ʻಹಿಂದು ಕೀಳುʼ ಹೇಳಿಕೆ ವಾಪಸ್‌ ಪಡೆದ ಸತೀಶ್‌ ಜಾರಕಿಹೊಳಿ: ಮುಖ್ಯಮಂತ್ರಿಗೆ ಪತ್ರ

Exit mobile version