ಬೆಂಗಳೂರು: ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದು ನಾನು. ಎಲ್ಲ ಜಾತಿಗಳ ಬಡವರಿಗೆ ತಿಂಗಳಿಗೆ 7 ಕೆ.ಜಿ ಉಚಿತವಾಗಿ ಅಕ್ಕಿ ನೀಡುವ ಯೋಜನೆ ಅದು. ಬಸವರಾಜ ಬೊಮ್ಮಾಯಿ ಅವರು ಈಗ ಕೇಂದ್ರ ಸರಕಾರದ ಅಕ್ಕಿಯನ್ನು ಸಿದ್ದರಾಮಯ್ಯ ಕೊಟ್ಟಿದ್ದು ಅಂತಾರೆ. ಹಾಗಿದ್ದರೆ ಬಿಜೆಪಿ ಅಧಿಕಾರದಲ್ಲಿರುವ ಬೇರೆ ರಾಜ್ಯಗಳಲ್ಲಿ ಈ ಯೋಜನೆ ಯಾಕಿಲ್ಲ? ಇದಕ್ಕೆ ಬೊಮ್ಮಾಯಿ ಅವರ ಬಳಿ ಉತ್ತರವಿದೆಯಾ?- ಹೀಗೆಂದು ಪ್ರಶ್ನಿಸಿದರು (Karnataka Elections) ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮಂಜುನಾಥ ನಗರದಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅನಾವರಣಗೊಳಿಸಿ ಬೃಹತ್ ಸಮಾವೇಶ ಉದ್ದೇಶಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.
ʻʻನಾನು ಮುಖ್ಯಮಂತ್ರಿಯಾಗಿದ್ದಾಗ ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದೆ. ಸರ್ಕಾರದ ವತಿಯಿಂದ ನೂರು ಎಕರೆ ಜಮೀನು ಮಂಜೂರು ಮಾಡಿ ರಾಯಣ್ಣ ಹೆಸರಿನಲ್ಲಿ ಒಂದು ಸೈನಿಕ ಶಾಲೆ, ಕೆರೆ ಅಭಿವೃದ್ಧಿ, ಯಾತ್ರಾ ಸ್ಥಳ ನಿರ್ಮಾಣ ಮಾಡುವ ಉದ್ದೇಶದಿಂದ 272 ಕೋಟಿ ರೂ. ಅನುದಾನ ನೀಡಿದ್ದೆ. ಕೆಲವರು ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಹೆಸರೇಳಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಾರೆ, ಅವರ ಕೊಡುಗೆ ಏನು?ʼʼ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ʻʻಪ್ರತೀ ಶೋಷಿತ ವರ್ಗದ ಜನ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸದೃಢರಾಗಬೇಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಂಘಟನೆ ಮಾಡಿ ಆದರೆ ಮತ ಹಾಕುವಾಗ ಎಚ್ಚರಿಕೆಯಿಂದ ನೀಡಿ. ಯಾರು ನಿಮ್ಮ ಜೊತೆ ಇರುತ್ತಾರೆ, ಯಾರು ನಿಮ್ಮ ಶ್ರೇಯಸನ್ನು ಬಯಸುತ್ತಾರೆ ಅವರ ಜೊತೆ ನೀವು ಗಟ್ಟಿಯಾಗಿ ನಿಲ್ಲಬೇಕುʼʼ ಎಂದು ಸಿದ್ದರಾಮಯ್ಯ ಕಿವಿಮಾತು ಕೇಳಿದರು.
೩೩% ಮೀಸಲಾತಿ ಕೊಟ್ಟಿದ್ದು ನಾನು
ʻʻ1994-95ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಸಂಪುಟ ಉಪಸಮಿತಿಯ ಸದಸ್ಯನಾಗಿದ್ದುಕೊಂಡು ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ಜಾರಿಗೆ ತಂದಿದ್ದು. ಇದು ನಮ್ಮ ಕೊಡುಗೆ. ಮಹಿಳೆಯರಿಗೆ 50% ಮೀಸಲಾತಿ ಸಿಕ್ಕಿರುವುದು ನಮ್ಮಿಂದ. ಇವೆಲ್ಲವನ್ನು ಇಂದು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಜನ ಹುಷಾರಾಗಿರಬೇಕುʼʼ ಎಂದು ಸಿದ್ದರಾಮಯ್ಯ ಹೇಳಿದರು.
ʻʻಕಾಗಿನೆಲೆಯಲ್ಲಿ ಗುರುಪೀಠ ಸ್ಥಾಪನೆ ಮಾಡಿ, ಅದನ್ನು ಪವಿತ್ರ ಸ್ಥಳವಾಗಿ ಮಾಡಿದ್ದು ನಾನು. ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ, ಕೆಂಪೇಗೌಡ ಜಯಂತಿ ಆರಂಭಿಸಿದ್ದು ನಮ್ಮ ಸರ್ಕಾರ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಿದ್ದು ನಾನು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡುವಂತೆ ಆದೇಶ ನೀಡಿದ್ದು ನಾನುʼʼ ಎಂದು ಹೇಳಿಕೊಂಡರು ಸಿದ್ದರಾಮಯ್ಯ.
ಸಂಗೊಳ್ಳಿ ರಾಯಣ್ಣನ ಬಯಕೆ ಏನಾಗಿತ್ತು?
ʻʻಸಂಗೊಳ್ಳಿ ರಾಯಣ್ಣ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ತ್ಯಾಗ ಬಲಿದಾನ ಮಾಡಿದ್ದಾರೆ. ರಾಯಣ್ಣ ಅವರು ಹುಟ್ಟಿದ್ದು ಆಗಸ್ಟ್ 15, ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ, ಅವರನ್ನು ನೇಣಿಗೇರಿಸಿದ್ದು ಜನವರಿ 26, ನಮ್ಮ ಸಂವಿಧಾನ ಜಾರಿಗೆ ಬಂದ ದಿನ. ಎಂಥಾ ಕಾಕತಾಳೀಯ ಇದು. ಪ್ರತೀ ಮನೆಯಲ್ಲಿ ಒಬ್ಬ ದೇಶಪ್ರೇಮಿ ಹುಟ್ಟಬೇಕು ಎಂಬುದು ರಾಯಣ್ಣ ಬಯಕೆ ಆಗಿತ್ತು. ನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲ ರಾಯಣ್ಣ ಅವರಂತೆ ಸಿದ್ಧರಾಗಬೇಕು ಎಂಬ ಕಾರಣಕ್ಕೆ ಇಂಥಾ ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪನೆ ಮಾಡುವುದು. ಈ ನೆಲವನ್ನು ಪ್ರೀತಿಸುವುದು, ದೇಶದ ಐಕ್ಯತೆಗಾಗಿ ತ್ಯಾಗದ ಮನೋಭಾವ ಬೆಳೆಸಿಕೊಳ್ಳುವುದು ರಾಯಣ್ಣನಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ. ಕುರುಬ ಸಮುದಾಯದಲ್ಲಿ ರಾಯಣ್ಣ, ಕನಕದಾಸರು, ಕಾಳಿದಾಸರು ಮುಂತಾದ ಮಹಾನ್ ಚೇತನಗಳು ಹುಟ್ಟಿದ್ದಾರೆʼʼ ಎಂದು ಸಿದ್ದರಾಮಯ್ಯ ನುಡಿದರು.
ಕ್ಷೇತ್ರದ ಶಾಸಕರಾದ ಮಂಜುನಾಥ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ನಾಗಲಕ್ಮ್ಮಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಶಿವರಾಂ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | Congress politics | ಡಿಕೆಶಿ- ಸಿದ್ದರಾಮಯ್ಯ ಬಣದ ಹೆಸರಲ್ಲಿ ಕಾಂಗ್ರೆಸ್ ನಾಯಕಿಯರ ಜಿದ್ದಾಜಿದ್ದಿ, ಕಣ್ಣೀರು!