ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗಾಗಿ (Karnataka Election 2023) ಭಾರತೀಯ ಜನತಾ ಪಕ್ಷ 40 ಜನ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನ ಸ್ಥಾನ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಸೇರಿ ಹಲವು ನಾಯಕರು ಪಟ್ಟಿಯಲ್ಲಿದ್ದಾರೆ. ಆದರೆ, ಭಾರತೀಯ ಜನತಾ ಯುವ ಮೋರ್ಚಾ (BJYM) ರಾಷ್ಟ್ರೀಯ ಅಧ್ಯಕ್ಷ, ಯುವ ಸಂಸದ ತೇಜಸ್ವಿ ಸೂರ್ಯ ಹೆಸರಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೆಲ ತಿಂಗಳ ಹಿಂದೆ ತೇಜಸ್ವಿ ಸೂರ್ಯ ಅವರು ವಿಮಾನದ ತುರ್ತು ನಿರ್ಗಮನದ ದ್ವಾರ ತೆಗೆಯಲು ಯತ್ನಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಹಾಗಾಗಿಯೇ, ತೇಜಸ್ವಿ ಸೂರ್ಯ ಅವರ ಹೆಸರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಲಾಗಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಪಕ್ಷದ ಮೂಲಗಳು ಹೇಳುತ್ತಿರುವುದೇ ಬೇರೆ. ಪಕ್ಷವು ಸಿದ್ಧಪಡಿಸಿದ ಪಟ್ಟಿಯೊಂದಕ್ಕೆ ಚುನಾವಣೆ ಆಯೋಗವು ಅನುಮೋದನೆ ನೀಡಿದೆ ಅಷ್ಟೆ. ಚುನಾವಣೆ ಪ್ರಚಾರದಲ್ಲಿ ತೇಜಸ್ವಿ ಸೂರ್ಯ ಭಾಗವಹಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಪುತ್ತೂರಿನಲ್ಲಿ ತೇಜಸ್ವಿ ಸೂರ್ಯ ಪ್ರಚಾರ
“ತೇಜಸ್ವಿ ಸೂರ್ಯ ಅವರು ಪ್ರತಿಯೊಂದು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ. ಹಾಗಾಗಿ, ಅವರಿಗೆ ಹೊರೆ ಆಗಬಾರದು ಎಂಬ ಕಾರಣಕ್ಕಾಗಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಆದರೆ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ” ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬ ನಾಯಕ ಈ ಕುರಿತು ಪ್ರತಿಕ್ರಿಯಿಸಿದ್ದು, “ತೇಜಸ್ವಿ ಸೂರ್ಯ ಅವರಿಗೆ 50 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದೆ. ಅವರು ಭರ್ಜರಿ ಪ್ರಚಾರ ಮಾಡಲಿದ್ದಾರೆ” ಎಂದು ತಿಳಿಸಿದ್ದಾರೆ. ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ ಕೂಡ ಪಟ್ಟಿಯಲ್ಲಿ ಇಲ್ಲ.
ಯಾರೆಲ್ಲ ಸ್ಟಾರ್ ಪ್ರಚಾರಕರು?
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್ ಇದ್ದಾರೆ.
ಹಾಗೆಯೇ, ಪಕ್ಷದ ನಾಯಕರಾದ ಮನ್ಸುಖ್ ಮಂಡಾವಿಯ, ಅಣ್ಣಾಮಲೈ, ಅರುಣ್ ಸಿಂಗ್, ಡಿ.ಕೆ. ಅರುಣಾ, ಸಿ.ಟಿ ರವಿ, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾನ್, ಹೇಮಂತ್ ಬಿಸ್ವಾ ಶರ್ಮಾ, ದೇವೇಂದ್ರ ಫಡ್ನವಿಸ್, ಪ್ರಭಾಕರ್ ಕೋರೆ, ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ಭಗವಂತ್ ಖೂಬಾ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಸನ ಗೌಡ ಪಾಟೀಲ್ ಯತ್ನಾಳ್, ಉಮೇಶ್ ಜಾಧವ್, ಚಲವಾದಿ ನಾರಾಯಣ ಸ್ವಾಮಿ, ಎನ್. ರವಿಕುಮಾರ್, ಜಿ.ವಿ. ರಾಜೇಶ್, ಜಗ್ಗೇಶ್, ಶ್ರುತಿ, ತಾರಾ ಅನುರಾಧ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ.
ಇದೇ ಪ್ರಶ್ನೆ ಎತ್ತಿದ ಎಐಸಿಸಿ ವಕ್ತಾರ ಗೌರವ್ ವಲ್ಲಭ್
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಮಾನದ ಎಮರ್ಜನ್ಸಿ ಗೇಟ್ ಓಪನ್ ಪ್ರಕರಣದ ತೇಜಸ್ವಿ ಸೂರ್ಯ ಹೆಸರು ಏಕಿಲ್ಲ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ, ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರಿರದಿರುವ ಕುರಿತು ಕೂಡ ಇವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗಳಗಳನೆ ಅತ್ತ ಅಭ್ಯರ್ಥಿ, ಕುದುರೆ ಏರಿ ಬಂದು ನಾಮಪತ್ರ ಸಲ್ಲಿಕೆ; ಇವು ದಿನದ ಇಂಟರೆಸ್ಟಿಂಗ್ ಘಟನೆಗಳು