Site icon Vistara News

Hindi Diwas | ಕನ್ನಡಕ್ಕೆ ಧಕ್ಕೆಯಾದರೆ ಸುಮ್ಮನಿರಲ್ಲ: ಹೊಸಪೇಟೆಯಲ್ಲಿ ಜೆಡಿಎಸ್‌, ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ

Hindi Diwas

ಬೆಂಗಳೂರು: ಹಿಂದಿ ದಿನಾಚರಣೆ (Hindi Diwas) ವಿರೋಧಿಸಿ ರಾಜ್ಯದ ವಿವಿಧೆಡೆ ಹಲವು ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ರಾಜ್ಯದ ಜನರ ಮೇಲೆ ಒತ್ತಾಯವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಕನ್ನಡ ಭಾಷೆಗೆ ಧಕ್ಕೆಯಾದರೆ ಸುಮ್ಮನಿರಲ್ಲ
ಹೊಸಪೇಟೆ: ಕೇಂದ್ರ ಸರ್ಕಾರ ಕನ್ನಡಿಗರ ಅಸ್ಮಿತೆಯನ್ನು ಕೆಣಕುತ್ತಿದೆ. ದೇಶದ ಎಲ್ಲಾ ರಾಜ್ಯಗಳು ಸ್ಥಳೀಯ ಭಾಷೆಗಳನ್ನು ಹೊಂದಿವೆ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಭಾಷೆ ಇದೆ. ಕನ್ನಡ ಭಾಷೆಗೆ ಏನಾದರೂ ಧಕ್ಕೆಯಾದರೆ ಸುಮ್ಮನಿರಲ್ಲ ಎಂದು ಜೆಡಿಎಸ್ ವಿಜಯನಗರ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ್ ಎಚ್ಚರಿಕೆ ನೀಡಿದರು.

ಜಿಲ್ಲಾ ಜೆಡಿಎಸ್ ಘಟಕದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಹಿಂದಿ ರಾಷ್ಟ್ರ ಭಾಷೆ ಪಟ್ಟವನ್ನು ಅಸಂವಿಧಾನಿಕವಾಗಿ ಇಡೀ ದೇಶದ ಮೇಲೆ ಹೇರುವುದಾದರೆ ಅದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಆಚರಿಸುವುದಾದರೆ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಎಲ್ಲಾ ಭಾಷೆಗಳ ದಿನಾಚರಣೆಯನ್ನು ಆಚರಿಸಬೇಕಾಗುತ್ತದೆ ಅಥವಾ ಸರ್ವ ಭಾಷೆ ದಿನಾಚರಣೆ ಎಂಬ ಹೆಸರಿನಲ್ಲಿ ಆಯಾ ರಾಜ್ಯ ಭಾಷೆಗಳು ತಮ್ಮ ತಮ್ಮ ಭಾಷಾ ದಿನಾಚರಣೆಯನ್ನು ಆಚರಣೆ ಮಾಡುವುದು ಸೂಕ್ತ ಎಂದು ಹೇಳಿದರು.

ನಮ್ಮ ದೇಶ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ಎಲ್ಲಾ ಭಾಷೆಗಳು ಸಂವಿಧಾನದಲ್ಲಿ ಸ್ಥಾನಮಾನ ಪಡೆದಿವೆ. ರಾಷ್ಟ್ರ ಭಾಷೆ, ರಾಜ್ಯ ಭಾಷೆ ಎಂಬ ಪ್ರತ್ಯೇಕ ವ್ಯವಸ್ಥೆ ಇಲ್ಲ. ಅದರಲ್ಲೂ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಎಲ್ಲೂ ಹೇಳಿಲ್ಲ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ‌ಯಿಂದ ಪ್ರತಿಭಟನಾ ಮೆರವಣಿಗೆ
ಕರ್ನಾಟಕ ರಕ್ಷಣಾ ವೇದಿಕೆ‌ ಜಿಲ್ಲಾ ಘಟಕದಿಂದ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಮೆರವಣಿಗೆ ಮೂಲಕ ಸಾಗಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ದೇಶಾದ್ಯಂತ ಹಿಂದಿ ಹೇರಿಕೆ ಮಾಡಲು ಹೊರಟಿದೆ. ಜತೆಗೆ ಹಿಂದಿ ಸಪ್ತಾಹ ದಿನಾಚರಣೆ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು. ಕೇಂದ್ರ ಸರ್ಕಾರ ಜನರ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಲು ಹೊರಟಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ಭಾಷೆ ವೈಭವೀಕರಣ ಕೊನೆಗೊಳ್ಳಬೇಕು ಎಂದು ಧಿಕ್ಕಾರ ಕೂಗಿದರು.

ಕರವೇ ಜಿಲ್ಲಾಧ್ಯಕ್ಷ ತಾರಿಹಾಳ ಹನುಮಂತಪ್ಪ ಮಾತನಾಡಿ, ಜನರ ಮೇಲೆ ಹಿಂದಿ ಹೇರಿಕೆ ನಿಲ್ಲಲಿ, ಸಮಾನತೆಯ ಭಾಷಾ ನೀತಿ ಜಾರಿಗೆ ಬರಲಿ. ಜತೆಗೆ ಹಿಂದಿ ಹೇರಿಕೆ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಭಾರತ ಐಕ್ಯತೆಯನ್ನು ಒಡೆತುವ ಹಿಂದಿ ದಿವಸ್ ಆಚರಣೆ ನಿಲ್ಲಬೇಕು. ಕೇಂದ್ರ ಸರ್ಕಾರ ಪ್ರತಿವರ್ಷ ಕೇವಲ ಹಿಂದಿ ದಿವಸ್ ಮಾತ್ರ ಆಚರಣೆ ಮಾಡುತ್ತಿದೆ. ದೇಶದ ಇತರ ಭಾಷೆಗಳನ್ನು ಕಡೆಗಣಿಸುತ್ತಿದೆ. ಸಂವಿಧಾನ 8ನೇ ಪರಿಚ್ಛೇದದಲ್ಲಿರುವ 22 ಅಧಿಕೃತ ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿವೆ. ಹೀಗಾಗಿ ಬಲವಂತದ ಹಿಂದಿ ಹೇರಿಕೆಯನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬಾಗಲಕೋಟೆ ಡಿಸಿ ಕಚೇರಿ ಎದುರು ಪ್ರತಿಭಟನೆ

ಬಾಗಲಕೋಟೆ: ಹಿಂದಿ ದಿವಸ್ ವಿರೋಧಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜೆಡಿಎಸ್‌ನಿಂದ ನವನಗರದ ಡಿಸಿ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಹಿಂದಿ ದಿವಸ್ ಸ್ಥಗಿತಗೊಳಿಸುವಂತೆ ಡಿಸಿಗೆ ಮನವಿ ಸಲ್ಲಿಸಲಾಯಿತು.

ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಧಿಕ್ಕಾರ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಹಿಂದಿ ಹೇರಿಕೆ ಸರಿಯಲ್ಲ, ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಭಾಷೆ. ಕರ್ನಾಟದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಹೀಗಾಗಿ 22 ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಚಿಕ್ಕಬಳ್ಳಾಪುರ: ಹಿಂದಿ ದಿವಸ್ ಆಚರಣೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಮತ್ತು ಜೆಡಿಎಸ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್ ಸರ್ಕಲ್ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ | U T Khader : ‘ಹಿಂದಿಯನ್ನು ಯಾಕೆ ವಿರೋಧ ಮಾಡ್ತಾರೋ ಗೊತ್ತಿಲ್ಲ’

Exit mobile version