Site icon Vistara News

Video Viral : ಫ್ರೀ ಬಸ್ಸಲ್ಲಿ ಟ್ರಿಪ್‌ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ; ಬಸ್‌ ಚಕ್ರಕ್ಕೆ ತಲೆ ಇಟ್ಟು ಕುಡುಕನ ಕಿರಿಕ್!

Against Shakti shceme protest by Man

ಹೊಸಕೋಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವು ಮಹಿಳೆಯರು ಟ್ರಿಪ್‌ ಮೇಲೆ ಟ್ರಿಪ್‌ ಮಾಡುತ್ತಿದ್ದಾರೆ. ಪುಣ್ಯ ಕ್ಷೇತ್ರ, ಪ್ರವಾಸಿ ತಾಣ, ನೆಂಟರ ಮನೆ ಹೀಗೆ ಸಾಲು ಸಾಲು ಪಟ್ಟಿಯನ್ನು ಮಾಡಿಕೊಂಡು ಕೆಎಸ್‌ಆರ್‌ಟಿಸಿ ಬಸ್‌ ಹತ್ತುತ್ತಿದ್ದಾರೆ. ಇದೀಗ ಮನೆಯಲ್ಲಿರುವ ಕೆಲವು ಗಂಡಸರಿಗೆ ಸಂಕಷ್ಟ ತಂದೊಡ್ಡಿದೆ. ಬಸ್‌ ಹತ್ತಿ ಹೋಗುವ ಮಡದಿಯರು ಮನೆಗೆ ಬರುವುದು ಯಾವಾಗ ಎಂಬ ಪ್ರಶ್ನೆ ಅವರಿಗೆ ತಲೆದೋರಿದೆ. ಈಗ ಇಲ್ಲೊಬ್ಬ ಕುಡುಕ ಗಂಡ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಹೆಂಡತಿಗಾಗಿ ಕಿರಿಕ್‌ ತಗೆದಿದ್ದಾನೆ! ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ಹೊಸಕೋಟೆ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಬಂದು ನಿಂತಿತ್ತು. ಎಲ್ಲರೂ ಬಸ್‌ ಹತ್ತುತ್ತಿದ್ದರು. ಈ ವೇಳೆ ಬಸ್‌ ಕೆಳಗೆ ಟಯರ್‌ ಬದಿಯಿಂದ ಯಾರೋ ಕೂಗಿಕೊಳ್ಳುತ್ತಿರುವುದು ಕೇಳಿಸಿದೆ. ಬಗ್ಗಿ ನೋಡಿದರೆ ಒಬ್ಬ ವ್ಯಕ್ತಿ! ಅರ‍್ರೇ, ಆತನೇನಾದರೂ ಟಯರ್‌ಗೆ ಸಿಕ್ಕಿಬಿಟ್ಟಿದ್ದಾನೆಯೇ ಎಂದು ಒಮ್ಮೆಲೆಗೆ ಎಲ್ಲರೂ ಗಾಬರಿಯಾಗಿದ್ದರು. ಆದರೆ, ಆತ ಬಡಬಡಿಸುತ್ತಲೇ ಇದ್ದ. ಕೊನೆಗೆ ಏನಪ್ಪಾ ನಿನ್ನ ಕಥೆ ಎಂದು ಕೇಳಿದರೆ, ಶುರುವಾಯಿತು “ಹೆಂಡತಿ ಸಂಕಟ”. ನನ್ನ ಹೆಂಡ್ತಿ ಮನೆಗೆ ಬಂದಿಲ್ಲ ಎಂದು ವರಾತ ಶುರು ಮಾಡಿದ್ದಾನೆ.

ಅಯ್ಯೋ ನಿನ್ನ ಹೆಂಡತಿ ಮನೆಗೆ ಬಾರದಿರುವುದಕ್ಕೂ ನೀನಿಲ್ಲಿ ಬಸ್‌ ಕೆಳಗೆ ಚಕ್ರಕ್ಕೆ ತಲೆ ಕೊಡುವುದಕ್ಕೂ ಏನಯ್ಯಾ ಸಂಬಂಧ? ಎಂದು ಅಲ್ಲಿದ್ದ ಜನ ಕೇಳಿದ್ದಾರೆ. ಅದಕ್ಕೆ ಸಿಟ್ಟಾದ ಆತ, ಇಷ್ಟೆಲ್ಲಾ ಆಗೋದಕ್ಕೆ ಸಿಎಂ ಸಿದ್ದರಾಮಯ್ಯನೇ ಕಾರಣ. ಅವರು ಮಹಿಳೆಯರಿಗೆ ಫ್ರೀ ಬಸ್‌ ಮಾಡದೆ ಇದ್ದರೆ ಎಲ್ಲರೂ ಮನೆಯಲ್ಲೇ ಇರುತ್ತಿದ್ದರು. ಈಗ ನೋಡಿ ನನ್ನ ಹೆಂಡತಿ ಟ್ರಿಪ್‌ಗೆಂದು ಹೋದವಳು ಇನ್ನೂ ಮನೆಗೆ ಬಂದಿಲ್ಲ ಎಂದು ಕೂಗಾಡಿದ್ದಾನೆ.

ಉಚಿತ ಬಸ್‌ ರದ್ದು ಮಾಡಲಿ

ಸಿದ್ದರಾಮಯ್ಯ ಸರಿಯಿಲ್ಲ, ಮಹಿಳೆಯರಿಗೆ ಈಗ ನೀಡಿರುವ ಫ್ರೀ ಬಸ್ ಪ್ರಯಾಣವನ್ನು ರದ್ದು ಮಾಡಲಿ ಎಂದು ಕೂಗಾಡ ತೊಡಗಿದ್ದಾನೆ. ಈ ವೇಳೆ ಬಸ್‌ ನಿರ್ವಾಹಕರು, “ಮೊದಲು ಅಲ್ಲಿಂದ ಹೊರಗೆ ಬಾರಯ್ಯ” ಎಂದು ಕೇಳಿದ್ದಾರೆ. ಅದಕ್ಕೆ ಆತ, “ಇಲ್ಲ ನನ್ನ ಹೆಂಡತಿ ಮನೆಗೆ ಬರುವವರೆಗೂ ನಾನು ಬರಲಾರೆ. ನೀವು ಬಸ್‌ ಹೊರಡಿಸಿ, ಈ ಚಕ್ರಕ್ಕೆ ತಲೆ ಕೊಟ್ಟು ಸಾಯುವೆ ಎಂದು ಕೂಗಾಡಿದ್ದಾನೆ. ಕೊನೆಗೆ ಆತನನ್ನು ಹೇಗೋ ಹೊರಗೆ ಕರೆ ತಂದಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ‌ಒಪ್ಪಿಸಲಾಗಿದೆ.

ಕುಡುಕನ ಅವಾಂತರದ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Karnataka News kannada Live: ರಾಜ್ಯದ ಕ್ಷಣಕ್ಷಣದ ಸುದ್ದಿ ಬೆಳವಣಿಗೆಗಳು: ಕರಾವಳಿಯಲ್ಲಿಂದು ಹೇಗಿರಲಿದೆ ಮುಂಗಾರು ಮಳೆ ದರ್ಬಾರ್‌

ವಿಡಿಯೊ ವೈರಲ್‌ (Video Viral)

ಈ ಎಲ್ಲ ಸಂಗತಿಯನ್ನು ಸಾರ್ವಜನಿಕರು ವಿಡಿಯೊ ಮಾಡಿಕೊಂಡಿದ್ದಾರೆ. ಕೆಲವು ಕಾಲ ಆತನ ಮಾತಿನಿಂದ ಮನರಂಜನೆಯನ್ನೂ ಪಡೆದುಕೊಂಡಿದ್ದಾರೆ. ಬಳಿಕ ಈ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಅದೀಗ ವೈರಲ್‌ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version