ಚಾಮರಾಜನಗರ: ರಾಜ್ಯದ ಹಲವು ಕಡೆ ಮಾನವ – ವನ್ಯ ಜೀವಿಗಳ (Wild Animal) ಸಂಘರ್ಷ ನಡೆಯುತ್ತಲೇ ಇವೆ. ಇದರಿಂದ ಸಾಕಷ್ಟು ಸಾವು – ನೋವುಗಳು ಸಂಭವಿಸಿವೆ. ಆಸ್ತಿ, ಬೆಳೆಗಳು ನಾಶವಾಗಿವೆ. ಆದರೂ, ಸಂಘರ್ಷಗಳು ನಿಂತಿಲ್ಲ. ಚಾಮರಾಜನಗರ ಸೇರಿದಂತೆ ಹಲವು ಕಡೆ ಒಮ್ಮೊಮ್ಮೆ ಆನೆಗಳ ದಾಳಿ (Elephant Attack) ನಡೆದರೆ, ಮತ್ತೆ ಕೆಲವು ಸಲ ಹುಲಿ, ಚಿರತೆಗಳ ದಾಳಿ (Tiger and leopard attacks) ನಡೆಯುತ್ತವೆ. ಇದರಿಂದ ಅಲ್ಲಿನ ನಾಗರಿಕರು ಕಂಗೆಟ್ಟು ಹೋಗಿದ್ದಾರೆ. ಈಗ ಗುಂಡ್ಲುಪೇಟೆ ತಾಲೂಕಿನಲ್ಲಿ ಚಿರತೆ ಮರಿಗಳು (Leopard cubs) ಕಾಣಿಸಿಕೊಂಡು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ.
ಗುಂಡ್ಲುಪೇಟೆ ತಾಲೂಕು ಲಕ್ಕೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಮರಿ ಚಿರತೆಗಳ ರಕ್ಷಣೆಗಾಗಿ ತಾಯಿ ಚಿರತೆಯು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದೆ. ಇದರಿಂದ ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತದೆಯೋ ಎಂಬ ಆತಂಕದಲ್ಲಿ ಜನರಿದ್ದಾರೆ.
ಇನ್ನು ಚಿರತೆಯು ಪ್ರತಿ ದಿನ ತನ್ನ ವಾಸಸ್ಥಳವನ್ನು ಬದಲಿಸುತ್ತಲೇ ಇದೆ. ಹೀಗಾಗಿ ಚಿರತೆ ಇಂಥ ಕಡೆಯೇ ಇದೆ ಎಂದು ತಿಳಿಯದಾಗಿದೆ. ಈಗ ಚಿರತೆ ಭಯದಿಂದ ಜಮೀನುಗಳಿಗೆ ಹೋಗಲು ರೈತರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಗೆ ದೂರು ನೀಡಿರುವ ಗ್ರಾಮಸ್ಥರು, ಮರಿ ಚಿರತೆಗಳನ್ನು ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾರೆ. ಇಷ್ಟಾದರೂ ಮರಿ ಚಿರತೆಗಳನ್ನು ತೆಗೆದುಕೊಂಡು ಹೋಗಲು ಅರಣ್ಯ ಇಲಾಖೆ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೋನಿಟ್ಟರೂ ಸೆರೆ ಸಿಗದ ತಾಯಿ ಚಿರತೆ!
ಚಿರತೆ ಸೆರೆಗೆ ಈ ಭಾಗದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿದೆ. ಆದರೆ, ತಾಯಿ ಚಿರತೆಯು ಬಹಳ ಚಾಲಾಕಿ ಇದ್ದು, ಇದುವರೆಗೂ ಬೋನಿಗೆ ಬೀಳದೆ ತಿರುಗಾಡುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಸ್ಥಳೀಯ ನಾಗರಿಕರು, “ಚಿರತೆ ಸೆರೆಗಾಗಿ ಬೋನು ಇಟ್ಟರೆ ಪ್ರಯೋಜನವಿಲ್ಲ. ಸೆರೆ ಹಿಡಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ” ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಜೀವ ವಾಪಸ್ ಕೊಡುತ್ತೀರಾ?
ನಾವು ನಿತ್ಯ ಜೀವ ಭಯದಲ್ಲೇ ಜಮೀನಿಗೆ ಹೋಗಬೇಕಿದೆ. ಎಲ್ಲಿ ಚಿರತೆಯು ನಮ್ಮನ್ನು ಕೊಂದು ಬಿಡುತ್ತದೋ ಎಂಬ ಭಯದಲ್ಲಿದ್ದೇವೆ. ಕುಟುಂಬಕ್ಕೆ ನಾವೇ ಆಧಾರವಾಗಿದ್ದೇವೆ. ನಾವು ಚಿರತೆ ದಾಳಿಯಿಂದ ಸತ್ತರೆ ಜೀವವನ್ನು ವಾಪಸ್ ತಂದು ಕೊಡುತ್ತೀರಾ? ನಮ್ಮ ಕುಟುಂಬಕ್ಕೆ ದಿಕ್ಕು ತೋರುತ್ತೀರಾ? ಹೆಂಡತಿ, ಮಕ್ಕಳಿಗೆ ಯಾರು ದಿಕ್ಕು? ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Ganesha Chaturthi 2023 : ಕೇರಳ, ಆಂಧ್ರಕ್ಕೆ ಹೋಗಲು ಸಿದ್ಧವಾಗಿದ್ದ ಪಿಒಪಿ ಗಣೇಶ ಮೂರ್ತಿ ಸೀಜ್!
ಇದು ಯಾವ ನ್ಯಾಯ?
ಕಾನೂನಿನ ಪ್ರಕಾರ ನಾವು ಕಾಡು ಪ್ರಾಣಿಯನ್ನು ಕೊಂದರೆ ನಮಗೆ ಜೈಲು ಶಿಕ್ಷೆ ಆಗುತ್ತದೆ. ಹಾಗಂತ ಕೊಲ್ಲದೇ ಇದ್ದರೆ ಅದು ನಮ್ಮ ಜೀವವನ್ನು ತೆಗೆಯುತ್ತದೆ. ಅದೇ ಚಿರತೆ ನಮ್ಮನ್ನು ಸಾಯಿಸಿದರೆ ನಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಕೊಡಲಾಗುತ್ತದೆ. ಇದ್ಯಾವ ನ್ಯಾಯ? ಎಂದು ಅರಣ್ಯ ಇಲಾಖೆಯ ವಿರುದ್ಧ ರೈತ ಪ್ರಭುಸ್ವಾಮಿ ಎಂಬುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.