Site icon Vistara News

Wild Animals Attack: ಆಹಾರವೆಂದು ಮೋಟಾರ್‌ ವೈಯರ್‌ ತಿಂದ ಕಾಡಾನೆ ಸಾವು!

Elephant dies of electric shock

ಆನೇಕಲ್‌: ಆಹಾರ ಅರಸಿ ಕಾಡು ಪ್ರಾಣಿಗಳು ಕಾಡು ತೊರೆದು ನಾಡಿಗೆ ಬರುತ್ತಿವೆ. ಹುಲಿ, ಚಿರತೆ, ಕರಡಿ ಹಾಗೂ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ದಾಳಿ (Wild Animals Attack) ಮಾಡುತ್ತಿವೆ. ಹೀಗೆ ಆಹಾರಕ್ಕಾಗಿ ಕರ್ನಾಟಕದಿಂದ ತಮಿಳುನಾಡಿನತ್ತ ಹೋಗಿದ್ದ ಕಾಡಾನೆಯೊಂದು ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದೆ.

ವಿದ್ಯುತ್ ಮೋಟಾರ್ ವೈಯರ್ ಅನ್ನು ಆಹಾರವೆಂದು ತಿಳಿದು ತಿನ್ನಲು ಹೋದ ಆನೆಗೆ ಕ್ಷಣ ಮಾತ್ರದಲ್ಲಿ ವಿದ್ಯುತ್‌ ಪ್ರವಹಿಸಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ತಾವರೆಕೆರೈ ಬಳಿ ನಡೆದಿದೆ. ಬನ್ನೇರುಘಟ್ಟ ಅರಣ್ಯದಿಂದ ತಮಿಳುನಾಡಿನತ್ತ ಸುಮಾರು 8 ಕಾಡಾನೆಗಳ ಹಿಂಡು ಆಹಾರ ಅರಸಿ ಜವಳಗೆರೆ ಮೂಲಕ ಹೊಸೂರಿಗೆ ಹೋಗಿದ್ದವು.

ತಾವರೆಕೆರೈ ಸುತ್ತಮುತ್ತಲಿನ ಗ್ರಾಮಗಳ ಕಡೆ ಬೀಡು ಬಿಟ್ಟಿತ್ತು. ಈ ವೇಳೆ ಕೋಳಿ ಫಾರಂ ಹಾಗೂ ಬೋರ್ ವೆಲ್‌ಗೆ ವಿದ್ಯುತ್ ತಂತಿಯನ್ನು ರೈತರೊಬ್ಬರು ಹಾಕಿದ್ದರು. ನೆಲದ ಮೇಲೆ ತಂತಿ ಹಾಕಿ ಹಾಗೆ ಬಿಟ್ಟಿದ್ದರು. ಇದರ ಅರಿವು ಇರದ ಗುಂಪಿನಲ್ಲಿದ್ದ ಆನೆಯೊಂದು ವಿದ್ಯುತ್ ವೈಯರ್ ತಿನ್ನಲು ಮುಂದಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಎಂಟು ವರ್ಷದ ಹೆಣ್ಣಾನೆ ಸ್ಥಳದಲ್ಲೇ ಮೃತಪಟ್ಟಿದೆ. ನೆಲದ ಒಳಗೆ ಅಥವಾ ಕಂಬಕ್ಕೆ ವಿದ್ಯುತ್ ತಂತಿ ಹಾಕಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ.

ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು, ಕೋಳಿ ಫಾರಂ ಮಾಲೀಕ ಪಾಲ್ ನಾರಾಯಣ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Self Harming: ರನ್ನಿಂಗ್ ರೇಸ್​ನಲ್ಲಿ ಸೋಲು; ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಸೂಸೈಡ್‌!

ಉಡುಪಿಯಲ್ಲಿ ನಾಲ್ವರ ಮೇಲೆ ಎರಗಿದ ಚಿರತೆ

ಎರಡು ಮೂರು ದಿನಗಳಲ್ಲಿ ನಾಲ್ವರ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ಉಡುಪಿಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ನಾಗಂಟೆಲ್ ದಾಳಿ ಮಾಡಿದೆ. ನಾಗಂಟೆಲ್‌ನ ಸುದೀರ್ ನಾಯ್ಕ್ ಎಂಬುವವರ ಮನೆಯ ಮುಂಭಾಗದಲ್ಲಿದ್ದ ಸಾಕು ನಾಯಿ ತಿನ್ನಲು ಚಿರತೆ ಬಂದಿದೆ. ಇದೇ ವೇಳೆ ಹೊರಗೆ ಬಂದಿದ್ದ ಸುಧೀರ್ ನಾಯ್ಕ್ ಹಾಗೂ ಮಗಳು ಸುಧೀಕ್ಷಾ ಮೇಲೆ ಚಿರತೆ ಎರಗಿದೆ. ಈ ವೇಳೆ ಮಗಳನ್ನು ರಕ್ಷಿಸಲು ಚಿರತೆಯನ್ನು ತಳ್ಳಿದ್ದ ಸುಧೀರ್ ನಾಯ್ಕ್ ಅವರ ಮುಖಕ್ಕೆ ಪರಚಿದೆ. ಮುಂಜಾನೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ದಾಳಿ‌ ಮಾಡಿ ಚಿರತೆ ಪರಾರಿಯಾಗಿದೆ.

ಇದೇ ರೀತಿ ಬೈಕ್‌ನಲ್ಲಿ ತೆರಳುತ್ತಿದ್ದ ನಿದೀಶ್ ಆಚಾರ್ಯ ಎಂಬುವವರ ಮೇಲೂ ಚಿರತೆ ದಾಳಿ ಮಾಡಿತ್ತು. ಬೈಕ್ ಸವಾರ ಸದಾನಂದ ಪುತ್ರನ್ ತಲೆ ಮೇಲೆ ಹಾರಿ ಹೋಗಿತ್ತು. ಅದೇ ಪರಿಸರದಲ್ಲಿ ದನ ಮೇಯಿಸುತ್ತಿದ್ದ ಜಯಂತಿ ನಾಯ್ಕ್ ಮತ್ತು ಮಲ್ಲಿಕಾ ನಾಯ್ಕ್ ಅವರ ಮೇಲೂ ಚಿರತೆ ಅಟ್ಯಾಕ್‌ ಮಾಡಿತ್ತು. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಸದ್ಯ ಘಟನಾ ಸ್ಥಳಗಳಿಗೆ ಭೇಟಿ ನೀಡಿರುವ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಸೆರೆಗೆ ಬೋನು ಇರಿಸಿದ್ದಾರೆ. ಚಿರತೆ ದಾಳಿಯ ಬಳಿಕ ಸ್ಥಳೀಯರು ಮತ್ತು ಶಾಲಾ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಒಬ್ಬೊಬ್ಬರೆ ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Love Jihad: ಲವ್ ಜಿಹಾದ್‌ ಬಲೆಗೆ ಬೀಳಲ್ಲ; ಗದಗದಲ್ಲಿ ಯುವತಿಯರಿಂದ ಆಣೆ ಪ್ರಮಾಣ

ಮೈಸೂರಲ್ಲಿ ಬೋನಿಗೆ ಬಿದ್ದ ಚಿರತೆ

ರಾಜ್ಯಾದ್ಯಂತ ಚಿರತೆ ಕಾಟ ಹೆಚ್ಚಾಗಿದ್ದು, ಮೈಸೂರಿನ ಕೀರಾಳು ಗ್ರಾಮದಲ್ಲಿ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಆಹಾರ ಅರಸಿ ಬಂದ ಚಿರತೆಯು ಕಳೆದ ರಾತ್ರಿ ಬೋನಿಗೆ ಬಿದ್ದಿದೆ. ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿತ್ತು. ಇದರಿಂದ ಗ್ರಾಮಸ್ಥರು ಆತಂಕದಲ್ಲಿದ್ದರು, ಇದೀಗ ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಹಾಸನದಲ್ಲಿ ಮುಂಜಾನೆ ಒಂಟಿ ಸಲಗದ ಬಿಂದಾಸ್‌ ವಾಕಿಂಗ್‌

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿ ಗ್ರಾಮಕ್ಕೆ ಒಂಟಿ ಸಲಗವೊಂದು ಎಂಟ್ರಿ ಕೊಟ್ಟಿತ್ತು. ಮುಂಜಾನೆ ಗ್ರಾಮದೊಳಗೆ ಆರಾಮಾಗಿ ನಡೆದು ಹೋಗುತ್ತಿದ್ದಾಗ, ಬೈಕ್ ಸವಾರನೊಬ್ಬ ಎದುರಿಗೆ ಬಂದಿದ್ದ. ಸಲಗದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಜಮ್ಮನಹಳ್ಳಿ ಗ್ರಾಮದ ರಸ್ತೆಯಲ್ಲಿ ಕಾಡಾನೆ ನಡೆದುಕೊಂಡು ಬರುವಾಗ, ಎದುರಿಗೆ ವೇಗವಾಗಿ ಬೈಕ್‌ ಸವಾರ ಬಂದಿದ್ದಾನೆ. ಕಾಡಾನೆ ಕಂಡ ತಕ್ಷಣ ಸವಾರ ಬೈಕ್ ನಿಲ್ಲಿಸದೆ ಎಡಕ್ಕೆ ತಿರುಗುವ ಬದಲು ನೇರ ಹೋಗಿದ್ದಾನೆ. ಎದುರಿಗೆ ಹೋದ ಬೈಕ್‌ ಕಂಡು ಕ್ಷಣಕಾಲ ನಿಂತು ಮುಂದೆ ಸಾಗಿದೆ. ಒಂಟಿ ಸಲಗದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version