ಮಂಡ್ಯ/ಹಾಸನ: ಇಲ್ಲಿನ ಬಿ.ಗಂಗನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ (Wild Animals Attack) ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಯಪ್ಪ (37) ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ.
ಜಮೀನು ಕೆಲಸಕ್ಕಾಗಿ ಹೋಗಿದ್ದ ಮಾಯಪ್ಪ ನಾಲ್ಕು ದಿನಗಳ ಹಿಂದೆ ನಾಪತ್ತೆ ಆಗಿದ್ದರು. ಆದರೆ ಸೋಮವಾರ ಕೊಳೆತ ಸ್ಥಿತಿಯಲ್ಲಿ ಜಮೀನಿನ ಪಕ್ಕದ ಗುಡ್ಡದಲ್ಲಿ ರೈತ ಮಾಯಪ್ಪನ ಶವ ಪತ್ತೆ ಆಗಿದೆ.
ಗ್ರಾಮದ ಕೆಲವರು ಕುರಿ ಮೇಯಿಸಲು ಬಂದಾಗ ಅವರ ಕಣ್ಣಿಗೆ ಬಿದಿದ್ದು, ಕೂಡಲೇ ಕಿಕ್ಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಚಿರತೆ ದಾಳಿ ಮಾಡಿರುವುದು ತಿಳಿದುಬಂದಿದೆ. ಮಾಯಪ್ಪನವರು ಜಮೀನಿನಲ್ಲಿ ರಾತ್ರಿ ಸಮಯದಲ್ಲಿ ಕೆಲಸ ಮಾಡಲು ಹೋದಾಗ ಚಿರತೆ ದಾಳಿ ಮಾಡಿರುವುದು ತಿಳಿದು ಬಂದಿದೆ.
ಆಹಾರ ಅರಸಿ ಮನೆ ಮುಂದೆಯೇ ಬಂದ ಕಾಡಾನೆ
ಒಂದು ಕಡೆ ಚಿರತೆ ಕಾಟವಾದರೆ ಮತ್ತೊಂದು ಕಡೆ ಕಾಡಾನೆ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಾಟೆಗದ್ದೆ ಗ್ರಾಮದೊಳಗೆ ಹೆಣ್ಣು ಕಾಡಾನೆ ಪ್ರತ್ಯಕ್ಷವಾಗಿತ್ತು. ಭಾನುವಾರ ರಾತ್ರಿ 9ರ ಸುಮಾರಿಗೆ ಆಹಾರ ಅರಸಿ ಮನೆ ಬಾಗಿಲಿಗೆ ಬಂದು ನಿಂತ ಕಾಡಾನೆ ಕೆಲಕಾಲ ನಿಂತು ವಾಪಸಾಗಿದೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.