ಚಾಮರಾಜನಗರ/ಮೈಸೂರು: ಆಹಾರ ಅರಸಿ ಕಾಡು ಪ್ರಾಣಿಗಳು (Wild animals Attack) ನಾಡಿನತ್ತ ಹೆಜ್ಜೆ ಹಾಕುತ್ತಿವೆ. ರಾಜ್ಯದಲ್ಲಿ ಚಿರತೆ (Leopard attack) ಹಾವಳಿ ಹೆಚ್ಚಾಗಿದ್ದು ಎಲ್ಲೆಂದರಲ್ಲಿ, ಯಾವಾಗೆಂದರೆ ಆಗ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಜತೆಗೆ ಕಾಡಾನೆ ಹಾವಳಿಯು (Wild Animals) ರೈತರ ನಿದ್ದೆಗೆಡಿಸಿದೆ.
ಚಿರತೆ ದಾಳಿಗೆ ಹಸು ಬಲಿ
ತಡರಾತ್ರಿ ನುಗ್ಗಿದ ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ದಾಳಿ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಹಿರಿಬೇಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹದೇವಸ್ವಾಮಿ ಎಂಬುವರಿಗೆ ಸೇರಿದ ಹಸು ಮೃತಪಟ್ಟಿದೆ.
ದಿನದಿಂದ ದಿನಕ್ಕೆ ಜನರಲ್ಲಿ ಆತಂಕ ಹೆಚ್ಚಾಗುತ್ತಿದ್ದು, ರಾತ್ರಿಯಾದರೆ ಸಾಕು ಚಿರತೆಯು ಪ್ರತ್ಯಕ್ಷವಾಗುತ್ತಿದೆ. ರಾತ್ರಿ ವೇಳೆ ಬಂದು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ. ಕಾಡು ಬಿಟ್ಟು ನಾಡಿನತ್ತ ಬರುತ್ತಿರುವ ಚಿರತೆಗಳನ್ನು ಸೆರೆ ಹಿಡಿಯುವಂತೆ ರೈತರು ಆಗ್ರಹಿಸಿದ್ದಾರೆ.
ಬೋನಿಗೆ ನಿದ್ದ ಚಿರತೆ
ಕಳೆದೊಂದು ತಿಂಗಳಿಂದ ಚಿರತೆ ಹಾವಳಿಗೆ ಜನರು ಕಂಗಲಾಗಿದ್ದಾರೆ. ಮೈಸೂರಿನ ಕೆ.ಆರ್.ನಗರ ತಾಲೂಕಿನ ಗುಳುವಿನ ಅತ್ತಿಗುಪ್ಪೆ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಹಲವು ದಿನಗಳಿಂದ ಚಿರತೆಯು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ತೇಗುತ್ತಿತ್ತು. ಹೀಗಾಗಿ ಅರಣ್ಯಾ ಇಲಾಖೆ ರೈತ ಮಂಜೇಗೌಡ ಜಮೀನಿನಲ್ಲಿ ಬೋನು ಇರಿಸಲಾಗಿತ್ತು.
ಬಟಿಗನಹಳ್ಳಿ, ಮುಂಜನಹಳ್ಳಿ, ಸೋಮನಹಳ್ಳಿ, ಸಂಬ್ರವಳ್ಳಿ, ಹೊಸ ಅಗ್ರಹಾರ ಸೇರಿ ಹಲವು ಕಡೆ ದಾಳಿ ಮಾಡಿ ಕರು, ನಾಯಿ, ಮೇಕೆ ತಿಂದು ಹಾಕಿತ್ತು. ಮೂರು ದಿನದ ಹಿಂದೆ ರೈತ ಮಂಜೇಗೌಡರ ಜಮೀನಿನಲ್ಲಿ ಚಿರತೆ ಓಡಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿತ್ತು. ಇದೀಗ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Huttari Habba : ಈ ವರ್ಷದ ಹುತ್ತರಿ ಹಬ್ಬಕ್ಕೆ ದಿನಾಂಕ ನಿಗದಿ; ಕೊಡಗಿನಲ್ಲಿ ಭಾರಿ ಸಂಭ್ರಮ
ಬಾವಿಗೆ ಬಿದ್ದು ಚಿರತೆ ಸಾವು
ರಾತ್ರಿ ವೇಳೆ ಆಹಾರ ಹುಡುಕುತ್ತ ಜನವಸತಿ ಪ್ರದೇಶಕ್ಕೆ ಬಂದ ಚಿರತೆಯೊಂದು ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಶಿರಸಿ ತಾಲೂಕಿನ ಬಿಕ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಶಿರಸಿ ವಲಯದ ಉಂಚಳ್ಳಿ ಬಿಕ್ನಳ್ಳಿ ಗ್ರಾಮದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯಲ್ಲಿ ಒಂದುವರೆ ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ.
ಮುಂಜಾನೆ ನಸುಕಿನ ವೇಳೆ ಬಿದ್ದು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಡಿಎಫ್ಓ ಅಜ್ಜಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಚಿರತೆ ಶವ ತೆಗೆದಿದ್ದಾರೆ.
ಚಿರತೆಯೊಂದಿಗೆ ಕಾಡಾನೆ ಹಾವಳಿ
ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿ- ಮಾನವ ಸಂಘರ್ಷ ಮುಂದುವರಿದಿದೆ. ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಚಿರತೆಯೊಂದಿಗೆ ಆನೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ನಾಗರಹೊಳೆ ಉದ್ಯಾನದ ಕಾಡಂಚಿನ ಗ್ರಾಮದಲ್ಲಿ ಬೆಳೆ ಹಾನಿ ಮಾಡಿದೆ.
ಬಿಲ್ಲೇನಹೊಸಹಳ್ಳಿ ಗ್ರಾಮದ ರೈತ ಚಿನ್ನದೊರೆ, ವೆಂಕಟೇಶ್ ಎಂಬುವವರು ಬೆಳೆದಿದ್ದ ರಾಗಿ, ಮುಸುಕಿನ ಜೋಳ, ಮರಗೆಣಸು ಬೆಳೆಯನ್ನು ತಿಂದು, ತುಳಿದು ನಾಶ ಮಾಡಿದೆ. ವಾಸದ ಮನೆ ಮೇಲೂ ದಾಳಿ ಮಾಡಿ, ಡ್ರಮ್‌ನಲ್ಲಿ ತುಂಬಿಸಿ ಇಟ್ಟಿದ್ದ ನೀರು ಕುಡಿದು ಹೋಗಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ