ಕಲಬುರಗಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡು ಹಂದಿ ದಾಳಿ (Wild Boar Attack) ನಡೆಸಿದ್ದರಿಂದ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ತೆಗಲತಿಪ್ಪಿ ಗ್ರಾಮದಲ್ಲಿ ನಡೆದಿದೆ.
ಗುರುನಾಥ್‌ರೆಡ್ಡಿ (46) ಮೃತ ರೈತ. ಜಮೀನಿನಲ್ಲಿ ತೊಗರಿ ಕೊಯಿಲು ಸುಡಲು ಹೋದಾಗ ಕಾಡು ಹಂದಿ ದಾಳಿ ಮಾಡಿದೆ. ಇದರಿಂದ ದೇಹದ ಬಹುತೇಕ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು 2 ಎತ್ತುಗಳ ಸಾವು, ಮೂವರು ಬಾಲಕರಿಗೆ ಗಂಭೀರ ಗಾಯ
ಕೊಪ್ಪಳ: ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟು, ಮೂವರು ಬಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಸಂಜೆ ಬಡಿದ ಸಿಡಿಲಿನಿಂದ ಫಕೀರಸಾಬ್ ಎಂಬುವವರ 2 ಎತ್ತುಗಳು ಮೃತಪಟ್ಟಿವೆ. ಇದೇ ವೇಳೆ ಫಕೀರಸಾಬ ಅವರ ಮೂವರು ಮಕ್ಕಳಿಗೆ ಗಾಯವಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Crime News: ನೇಣುಕುಣಿಕೆಯಲ್ಲಿ ಶವಗಳು, ತಾಯಿ- ಮಗಳ ಅನುಮಾನಾಸ್ಪದ ಸಾವು
ಕೊಟ್ಟಿಗೆಯಲ್ಲಿ ಅಡಗಿದ್ದ ಚಿರತೆ ಸೆರೆ
ಶಿವಮೊಗ್ಗ: ಮನೆಯೊಂದರ ಕೊಟ್ಟಿಗೆಯಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಸೊರಬ ತಾಲೂಕಿನ ಕುಪ್ಪೆ ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿತ್ತು. ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಚಿರತೆಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹಂಪೆಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಎಫ್ಒ ಸಂತೋಷ್ ಕೆಂಚಪ್ಪ, ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರು, ಆರ್‌ಎಫ್ಒ ಜಾವೇದ್ ಅಹ್ಮದ್ ಅಂಗಡಿ, ಶಿವಮೊಗ್ಗ ಲಯನ್ಸ್ ಸಫಾರಿಯ ಅರವಳಿಕೆ ತಜ್ಞ ಡಾ. ಮುರುಳೀಧರ ಸೇರಿ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ಗಂಡ
ಶಿವಮೊಗ್ಗ: ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆ ಅಸ್ವಸ್ಥಗೊಂಡಾಗ ಎತ್ತಿಕೊಂಡು ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿಸಿ ಪತಿ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಗೆ ಹಲ್ಲೆ ಮಾಡಿದ ಗಂಡನನ್ನು ತೀರ್ಥಹಳ್ಳಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ | Hosakote News: ಹೂಳು ತುಂಬಿದ್ದ ಕಲ್ಯಾಣಿಗೆ ಬಿದ್ದು ಬಾಲಕಿ ದಾರುಣ ಸಾವು; 6 ವರ್ಷದ ಬಾಲಕ ಪಾರು
ಆಸ್ಪತ್ರೆಯಲ್ಲಿ ನಡೆದಿದ್ದೇನು?
ಬೆಂಗಳೂರು ಮೂಲದ ಮುರಳಿ ಎಂಬಾತ ತೀರ್ಥಹಳ್ಳಿಯ ಮೇಗರವಳ್ಳಿ ಕೈನಲ್ಲಿ ಎಂಬಲ್ಲಿ ವಾಸವಿದ್ದು, ಇಲ್ಲಿಯೇ, ಮದುವೆಯಾಗಿ ಕೆಲಸ ಮಾಡಿಕೊಂಡಿದ್ದ. ಶುಕ್ರವಾರ ಈತ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ಧಾನೆ. ಪರಿಣಾಮ ಆಕೆ ಅಸ್ವಸ್ಥಗೊಂಡಿದ್ಧಾಳೆ. ಇದರಿಂದ ಭಯ ಬಿದ್ದ ಪತಿ, ಪತ್ನಿಯನ್ನು ಎತ್ತಿಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ನೀಡುವಂತೆ ಹೇಳಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಹಲ್ಲೆಗೊಳಗಾಗಿದ್ದ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮುರಳಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.