| ಲೋಹಿತ್ ಎಂ.ಆರ್., ವಿಸ್ತಾರ ನ್ಯೂಸ್, ಕೊಡಗು
ಕೊಡವರು ಹಾಗೂ ಗೌಡರ ಮತಗಳು ಹೆಚ್ಚಿರುವ, ಹಿಂದುತ್ವದ ರಾಜಕಾರಣಕ್ಕೆ ಹೆಸರಾಗಿರುವ, ಬಿಜೆಪಿ ಭದ್ರಕೋಟೆಯೇ ಆಗಿರುವ ಕೊಡಗಿನಲ್ಲಿ ಈ ಬಾರಿಯ ಚುನಾವಣೆ ಕುತೂಹಲ ಕೆರಳಿಸಿದೆ. ಹಿಂದುತ್ವ ರಾಜಕಾರಣದ ಜತೆಗೆ ಜಾತಿ ರಾಜಕಾರಣವೂ ಈ ಬಾರಿ ಮುನ್ನೆಲೆಗೆ ಬಂದಿರುವ ಕಾರಣ ಕದನ ಕುತೂಹಲ ಹೆಚ್ಚಾಗಿದೆ. ಕೊಡಗಿನಲ್ಲಿ ಹಿಂದುತ್ವದ ಆಧಾರದ ಮೇಲೆ ರಾಜಕಾರಣ ಮಾಡುವ ಬಿಜೆಪಿ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತಿ ಲೆಕ್ಕಾಚಾರದ ಪ್ರತಿತಂತ್ರ ಹೂಡಿವೆ. ಹಾಗಾಗಿ, ಈ ಬಾರಿ ಬಿಜೆಪಿಗೆ ಕೊಡಗಿನಲ್ಲಿ ಹೆಚ್ಚಿನ ಸವಾಲುಗಳಿವೆ. ಇವುಗಳನ್ನು ಮೆಟ್ಟಿ ಬಿಜೆಪಿ ಗೆಲುವು ಸಾಧಿಸುತ್ತದೆಯೇ ಅಥವಾ ಕಾಂಗ್ರೆಸ್ ಸೆಡ್ಡು ಹೊಡೆದು ಜಯದ ಮಾಲೆ ಧರಿಸುತ್ತದೆಯೇ ಎಂಬ ನಿರೀಕ್ಷೆ ಹೆಚ್ಚಾಗಿವೆ. ಈ ನಡುವೆ, ಬಜರಂಗದಳ ನಿಷೇಧ ವಿವಾದ ಬಿಜೆಪಿಗೆ ಎಷ್ಟರಮಟ್ಟಿಗೆ ನೆರವು ನೀಡುತ್ತದೆ ಎನ್ನುವುದೂ ಕುತೂಹಲಕರವಾಗಿದೆ. ಹಾಗಾದರೆ, ಕೊಡಗಿನಲ್ಲಿ ರಾಜಕೀಯ ತಂತ್ರ-ಪ್ರತಿತಂತ್ರಗಳು ಹೇಗಿವೆ? ಯಾವ ಪಕ್ಷದ ಅಭ್ಯರ್ಥಿಗಳ ಲೆಕ್ಕಾಚಾರ ಹೇಗಿದೆ? ಯಾರ ಕೈ ಮೇಲಾಗಲಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮಡಿಕೇರಿ: ದ್ವಿಕೋನ ಕದನದಲ್ಲಿ ಯಾರಿಗೆ ಗೆಲುವು?
ಕೊಡಗಿನ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಕೂಡ ಒಂದು. ಕಳೆದ 25 ವರ್ಷದಿಂದಲೂ ಕೂಡ ಈ ಭಾಗದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಅವರೇ ಗೆಲುವಿನ ನಗೆ ಬೀರುತ್ತಿದ್ದಾರೆ. 6 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅಪ್ಪಚ್ಚು ರಂಜನ್, 5 ಬಾರಿ ಗೆದ್ದಿದ್ದಾರೆ. ಹಾಗೆಯೇ, ಒಂದು ಬಾರಿ ಜಾತ್ಯಾತೀತ ಜನತಾದಳದ ಜೀವಿಜಯ ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ. ಇನ್ನೂ ಈ ಬಾರಿಯೂ ಕೂಡ ಅಖಾಡಕ್ಕೆ ಇಳಿದ ಅಪ್ಪಚ್ಚು ರಂಜನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಹಲವು ಚುನಾವಣೆಯಲ್ಲಿ ಕೊಡಗಿನಲ್ಲಿ ಬಿಜೆಪಿಗೆ ಯಾವುದೇ ಪ್ರಬಲ ಪೈಪೋಟಿ ಇರಲಿಲ್ಲ. ಯಾರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಬಿಜೆಪಿಯದ್ದೇ ಆಗಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಎ.ಮಂಜು (ವಾಲೆ ಮಂಜು) ಪುತ್ರ ಡಾ.ಮಂತರ್ ಗೌಡ ಹಾಗೂ ಜೆಡಿಎಸ್‌ನಿಂದ ನಾಪಂಡ ಮುತ್ತಪ್ಪ ಚುನಾವಣಾ ಅಖಾಡದಲ್ಲಿ ಇಳಿದಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂತರ್ ಗೌಡ ಮಿಂಚಿನ ಸಂಚಲನ ನಡೆಸಿ ಬಿಜೆಪಿಯ ಸುಜಾ ಕುಶಾಲಪ್ಪ ವಿರುದ್ಧ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದೀಗ ಮತ್ತೆ ವಿಧಾನಸಭಾ ಚುನಾವಣೆಗೂ ಸ್ಪರ್ಧೆ ಮಾಡಿದ್ದು, ಜನರ ಬೆಂಬಲ ಪಡೆಯುತ್ತಿದ್ದಾರೆ. ಮಂತರ್ ಗೌಡ ಪರ ಹೆಚ್ಚಿನ ಯುವ ಸಮೂಹವೇ ಇದ್ದು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮಂತರ್‌ಗೆ ಅವರ ಪತ್ನಿ ಕೂಡ ಸಾಥ್ ನೀಡುತ್ತಿದ್ದಾರೆ. ಮಡಿಕೇರಿಯಲ್ಲಿ ಮಂತರ್ ಪ್ರಚಾರ ನಡೆಸಿದರೆ, ಸೋಮವಾರಪೇಟೆ ಭಾಗದಲ್ಲಿ ದಿವ್ಯಾ ಮಂತರ್ ಗೌಡ ಪ್ರಚಾರ ನಡೆಸುತ್ತಿದ್ದಾರೆ.
ಇನ್ನು, ಜೆಡಿಎಸ್‌ನ ನಾಪಂಡ ಮುತ್ತಪ್ಪ ಕೂಡ ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಲ್ಲಿದ್ದ ಮುತ್ತಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದರೆ, ಕಾಂಗ್ರೆಸ್ ಅವರಿಗೆ ಮಣೆಹಾಕದ ಹಿನ್ನಲೆಯಲ್ಲಿ ಜಾತ್ಯತೀತ ಜನತಾದಳಕ್ಕೆ ಬಂದ ನಾಪಂಡ ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿ ಹೆಚ್ಚು ಮತದಾರನ್ನು ಹೊಂದಿದ್ದಾರೆ ಇವರು ಕೂಡ ಹೆಚ್ಚು ಯುವ ಪಡೆಯನ್ನು ಹೊಂದಿದ್ದು ಮಡಿಕೇರಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಇನ್ನು, ಮಡಿಕೇರಿ ಭಾಗದಲ್ಲಿ ಎಸ್‌ಡಿಪಿಐ ಕೂಡ ಅಭ್ಯರ್ಥಿಯನ್ನು ಕಣಕಿಳಿಸಿದ್ದು ಪ್ರಚಾರದಲ್ಲಿ ತೊಡಗಿದೆ.
ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಲ್ಲಿ ಬದಲಾವಣೆಯ ನಿರೀಕ್ಷೆ ಇತ್ತು. ಅಭ್ಯರ್ಥಿಯ ಬದಲಾವಣೆಗೆ ಬಿಜೆಪಿಯ ಪ್ರಮುಖರು ಪಟ್ಟುಹಿಡಿದಿದ್ದರು. ಆದರೂ ಅಪ್ಪಚ್ಚು ರಂಜನ್ ಅವರಿಗೇ ಟಿಕೆಟ್ ನೀಡಿರುವುದು ಕೆಲವು ಬಿಜೆಪಿಗರಿಗೆ ಅಸಮಾಧಾನ ತಂದಿದೆ. ಆದರೂ, ಅಪ್ಪಚ್ಚು ರಂಜನ್ ಅವರ ವರ್ಚಸ್ಸು ಇದೆಲ್ಲವನ್ನೂ ಮರೆಮಾಚುವ ಸಾಧ್ಯತೆ ಇದೆ. ಆದರೆ, ಈ ಭಾಗದಲ್ಲಿ ಗೌಡ ಮತದಾರರೇ ಜಾಸ್ತಿ ಇದ್ದು, ಮಂತರ್ ಗೌಡ ಪರ ಬೆಂಬಲ ವಾಲುವ ಸಾಧ್ಯತೆ ಇದೆ. ಹಾಗಾಗಿ, ಚುನಾವಣೆಯು ಹೆಚ್ಚಿನ ಕುತೂಹಲ ಮೂಡಿಸಿದೆ.
ಕಣದಲ್ಲಿರುವ ಅಭ್ಯರ್ಥಿಗಳು
1. ಅಪ್ಪಚ್ಚು ರಂಜನ್- ಬಿಜೆಪಿ
2. ಮಂತರ್ ಗೌಡ- ಕಾಂಗ್ರೆಸ್
3. ನಾಪಂಡ ಮುತ್ತಪ್ಪ- ಜೆಡಿಎಸ್
2018ರ ಚುನಾವಣೆ ಫಲಿತಾಂಶ
– ಅಪ್ಪಚ್ಚು ರಂಜನ್ – ಬಿಜೆಪಿ-70,631
– ಬಿ.ಎ. ಜೀವಿಜಯ- ಜೆಡಿಎಸ್- 54,616
– ಗೆಲುವಿನ ಅಂತರ- 16,015
ವಿರಾಜಪೇಟೆ: ಕೆ.ಜಿ.ಬೋಪಯ್ಯಗೆ ಪೊನ್ನಣ್ಣ ತೀವ್ರ ಸ್ಪರ್ಧೆ
ಕೊಡಗಿನ ಜಿದ್ದಾ ಜಿದ್ದಿನ ಮತ್ತೊಂದು ಕ್ಷೇತ್ರ ಅಂದರೆ, ಅದು ವಿರಾಜಪೇಟೆ ವಿಧಾನಸಭಾ ಕ್ಷೇತ್ರ. ಈ ಒಂದು ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಸೋಲಿಲ್ಲದ ಸರದಾರ ಅಂದರೆ, ಅದು ಬಿಜೆಪಿಯ ಕೆ.ಜಿ. ಬೋಪಯ್ಯ ಅವರು. ಕಳೆದ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಿದವರಲ್ಲಿ ಕೆ.ಜಿ ಬೋಪಯ್ಯ ಕೂಡ ಒಬ್ಬರು. ಸ್ಪೀಕರ್ ಆಗಿ ಕೆಲಸ ಮಾಡಿದ ಅನುಭವ ಕೂಡ ಕೆ.ಜಿ ಬೋಪಯ್ಯರಿಗೆ ಇದೆ. ಈ ಬಾರಿ ಕೂಡ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿರುವ ಬೋಪಯ್ಯರಿಗೆ ಕಾಂಗ್ರೆಸ್‌ನ ಎ.ಕೆ.ಸುಬ್ಬಯ್ಯ ಅವರ ಪುತ್ರ ಎ.ಎಸ್.ಪೊನ್ನಣ್ಣ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ. ಹೈಕೋರ್ಟ್ ವಕೀಲರಾಗಿರುವ ಪೊನ್ನಣ್ಣ ಕಳೆದ ಹಲವು ವರ್ಷದಿಂದ ವಿರಾಜಪೇಟೆ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಮತದಾರರು ಅಂದರೆ ಅದು ಕೊಡವರು. ಈ ಭಾರಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ- ಧರ್ಮ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವರು ಏನು ಮಾಡುತ್ತಾರೆಂಬ ಕುತೂಹಲವಿದೆ.
ಕೊಡವರು ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿದ್ದಾರೆ. ಹಿಂದುತ್ವ, ಮೋದಿ ನಾಯಕತ್ವ ಹಾಗೂ ಕಾಂಗ್ರೆಸ್ ವಿರುದ್ಧವಾಗಿ ಬಿಜೆಪಿಯಲ್ಲಿ ಕೊಡವರು ಗುರುತಿಸಿಕೊಂಡಿದ್ದಾರೆ. ಅಭ್ಯರ್ಥಿ ಯಾರೆಂದು ನೋಡದೆ ಬಿಜೆಪಿಗೆ ಮತ ಹಾಕುತ್ತ ಬಂದಿದ್ದಾರೆ. ಇದೇ ಬಿಜೆಪಿಗೆ ವರದಾನವಾಗಿದೆ. ಈ ಬಾರಿ ಕೊಡವ ಮತದಾರರ ನಿಲುವು ಕುತೂಹಲಕ್ಕೆ ಕಾರಣವಾಗಿದೆ. ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕೊಡವರ ನಿರ್ಧಾರದ ಬಗ್ಗೆ ಗಮನಿಸುವಂತೆ ಮಾಡಿದೆ. ಹಲವು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೊಡವ ಸಮುದಾಯದ ಶಾಂತೆಯಂಡ ವೀಣಾ ಅಚ್ಚಯ್ಯ, ಬಿದ್ದಾಟಂಡ ಟಿ. ಪ್ರದೀಪ್, ಚೆಪ್ಪುಡೀರ ಅರುಣ್ ಮಾಚಯ್ಯ, ಮೇರಿಯಂಡ ಸಂಕೇತ್ ಪೂವಯ್ಯ ಸೋಲು ಅನುಭವಿಸಿದ್ದಾರೆ. ಪ್ರಸ್ತುತ ಸ್ಪರ್ಧಾ ಕಣದಲ್ಲಿ ಪೊನ್ನಣ್ಣ ಅವರೊಂದಿಗೆ ಕರ್ನಾಟಕ ಸರ್ವೋದಯ ಪಕ್ಷದ ಕಾಡ್ಯಮಾಡ ಮನು ಸೋಮಯ್ಯ, ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳಾಗಿ ರವೀಂದ್ರ ಕಣದಲ್ಲಿ ಇದ್ದಾರೆ.
ಪೊನ್ನಣ್ಣ ಕೊಡವ ಸಮುದಾಯಕ್ಕೆ ಸೇರಿದ್ದಾರೆಂಬ ಕಾರಣಕ್ಕಾಗಿ ಕೊಡವರು ಬೆಂಬಲ ನೀಡಬೇಕೆಂಬ ಪ್ರಬಲ ಬೇಡಿಕೆ ವ್ಯಕ್ತವಾಗುತ್ತಿದೆ. ಜಾತಿ ಆಧಾರದಲ್ಲಿ ಅಥವಾ ಪಕ್ಷದ ಆಧಾರದಲ್ಲಿ ಮತ ನೀಡಬೇಕಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪಕ್ಷದ ನೆಲೆಗಟ್ಟಿನಲ್ಲಿ ಅರೆಭಾಷೆ ಗೌಡ ಸಮುದಾಯಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿಗೆ ಕೊಡವರು ಬೆಂಬಲ ನೀಡುತ್ತ ಬಂದಿದ್ದಾರೆ. ಸತತ ನಾಲ್ಕು ಬಾರಿಗೆ ಗೆಲುವು ಸಾಧಿಸಿರುವ ಕೆ.ಜಿ. ಬೋಪಯ್ಯ ಐದನೇ ಬಾರಿಗೆ ಗೆಲ್ಲುವ ಉತ್ಸಾಹದಲ್ಲಿ ಇದ್ದಾರೆ. ಕೊಡವರು ಬಿಜೆಪಿ ಕೈ ಹಿಡಿದರೆ ಕೆ.ಜಿ ಬೋಪಯ್ಯ ಗೆಲುವು ಖಂಡಿತ. ಕೊಡವರು ಬಿಜೆಪಿಗೆ ಕೈ ಕೊಟ್ಟರೆ ಪೊನ್ನಣ್ಣ ಗೆಲುವು ಖಚಿತ. ವಿರಾಜಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಮುಸ್ಲಿಂ ಮತ ಕೂಡ ನಿರ್ಣಾಯಕವಾಗಿದೆ. ಮುಸ್ಲಿಂ ಮತ ವಿಭಜನೆ ಮಾಡುವ ಮೂಲಕ ಬಿಜೆಪಿ ಗೆಲುವು ಸಾಧಿಸುವಂತೆ ಮಾಡುವ ಕಾರ್ಯತಂತ್ರ ಬಿಜೆಪಿ ಪಾಳಯದಲ್ಲಿ ನಡೆದಿದೆ.
ಇದನ್ನೂ ಓದಿ: ಹಾಸನ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಏಳು ಸುತ್ತಿನ ಕೋಟೆ ಭೇದಿಸುವವರು ಯಾರು?
ಜೆಡಿಎಸ್‌ನಿಂದ ಎಂ.ಎ. ಮನ್ಸೂರ್ ಆಲಿ, ಪಕ್ಷೇತರ ಅಭ್ಯರ್ಥಿ ಮಕ್ಕಿ ನಾಸಿರ್ ಹೆಚ್ಚು ಮತ ಪಡೆದಲ್ಲಿ ಕಾಂಗ್ರೆಸ್‌ಗೆ ಹೊಡೆತ ನೀಡಲಿದೆ, ಬಿಜೆಪಿಗೆ ಗೆಲುವಿನ ಹಾದಿ ಸುಲಭವಾಗಲಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಇಷ್ಟು ವರ್ಷ ಹಿಂದುತ್ವ ವರ್ಕೌಟ್ ಆಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಜಾತಿ ರಾಜಕಾರಣ ನಡೆಯುತ್ತಿದ್ದು, ಕೊಡವರು ಹಾಗೂ ಗೌಡ ಮತದಾರರೇ ಇಲ್ಲಿ ನಿರ್ಣಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ಕಣದಲ್ಲಿರುವ ಅಭ್ಯರ್ಥಿಗಳು
1. ಕೆ.ಜಿ. ಬೋಪಯ್ಯ- ಬಿಜೆಪಿ
2. ಎ.ಎಸ್. ಪೊನ್ನಣ್ಣ- ಕಾಂಗ್ರೆಸ್
3. ಎಂ.ಎ. ಮನ್ಸೂರ್ ಆಲಿ- ಜೆಡಿಎಸ್
ಇದನ್ನೂ ಓದಿ: ಕೋಲಾರ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಜೆಡಿಎಸ್‌ನ ಸವಾಲು