Site icon Vistara News

Operation Kamala: ಬಿಜೆಪಿಯತ್ತ ಹೊರಟರೇ ಪ್ರಭಾವಿ ಕೈ ನಾಯಕ ಸತೀಶ್‌ ಜಾರಕಿಹೊಳಿ?

Satish Jarkiholi

I Will Claim Chief Minister Post In 2028: Says Karnataka Minister Satish Jarkiholi

ಬೆಳಗಾವಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ತೊರೆದು ಮರಳಿ ಬಿಜೆಪಿ ಸೇರಿದ ಬೆನ್ನಲ್ಲೇ ಇದೀಗ ಬೆಳಗಾವಿಯ ಪ್ರಭಾವಿ ಕಾಂಗ್ರೆಸ್‌ ನಾಯಕ, ಸಚಿವ ಸತೀಶ್‌ ಜಾರಕಿಹೊಳಿ ಅವರು ಬಿಜೆಪಿಗೆ (Operation Kamala) ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಸತೀಶ್‌ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ಈ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ್‌ ‌ಜೋಶಿ ಅವರ ಜತೆ ಚರ್ಚೆ ನಡೆಸಿರುವುದಾಗಿ ಸತೀಶ್‌ ಜಾರಕಿಹೊಳಿ ಅವರು ಹೇಳಿರುವುದು ಕುತೂಹಲ ಮೂಡಿಸಿದೆ.

ಸದ್ದಿಲ್ಲದೇ ಬಿಜೆಪಿಯಿಂದ ರಾಜ್ಯದಲ್ಲಿ ರಿವರ್ಸ್ ಆಪರೇಷನ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಐದು ವರ್ಷಗಳ ಕಾಲ ಸರ್ಕಾರ ಬದಲಾವಣೆ ಸಂಬಂಧ ಚರ್ಚೆಗಳು ಇರುತ್ತವೆ. ಸರ್ಕಾರ ಬಂದ ದಿನವೇ ನಾನು ಈ ಮಾತನ್ನು ಹೇಳಿದ್ದೆ, ಈಗಲೂ ಹಾಗೆಯೇ ಆಗುತ್ತಿದೆ. ಈ ಬಗ್ಗೆ ಜಾಸ್ತಿ ಚರ್ಚೆ ಬೇಡ, ಅಭಿವೃದ್ಧಿ ಕೆಲಸಗಳ ಮೇಲೆ ಎಲ್ಲರೂ ಬೆಳಕು ಚೆಲ್ಲೋಣ ಎಂದು ತಿಳಿಸಿದ್ದಾರೆ.

ತಾವು ರಾಜ್ಯದ ಏಕನಾಥ ಶಿಂಧೆ ಆಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ ಗಾಳಿ, ಮೋಡ, ಮಳೆ ಸ್ವಾಭಾವಿಕ. ಅಲ್ಲಿ ಹೋಗುವವರು, ಇಲ್ಲಿ ಬರುವವರು ಇದ್ದೇ ಇರುತ್ತಾರೆ. ಈಗಾಗಲೇ ನಾನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಲ್ಹಾದ್‌ ‌ಜೋಶಿ ಅವರ ಜೊತೆ‌ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆಯೋ? ರಾಜಕೀಯ ಚರ್ಚೆಯೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ‌ಜತೆಗೆ ರಾಜಕೀಯ ಬಗ್ಗೆಯೂ ಚರ್ಚೆ ಆಗಿದೆ ಎಂದು ಸತೀಶ್ ಜಾರಕಿಹೊಳಿ ನಸುನಕ್ಕಿದ್ದಾರೆ.

ಇತ್ತೀಚೆಗೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಸತೀಶ್‌ ಜಾರಕಿಹೊಳಿ ಅವರು ಅಸಮಾಧಾನಗೊಂಡಿದ್ದರು. ಅದರಲ್ಲೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕಾರಿಗಳ ವರ್ಗಾವಣೆ, ನಿಗಮ ಮಂಡಳಿಗಳಲ್ಲಿ ನೇಮಕ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ ಆಗುತ್ತಿದೆ ಎಂಬುವುದು ಜಾರಕಿಹೊಳಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಬೆಳಗಾವಿಯಲ್ಲಿ ಸತೀಶ್‌ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವಿಷಯ ಭಾರಿ ಸದ್ದು ಮಾಡಿತ್ತು. ಆದರೆ, ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಇಬ್ಬರು ನಾಯಕರೂ ಸ್ಪಷ್ಟಪಡಿಸಿದ್ದರು.

ಇನ್ನು ಬೆಳಗಾವಿ – ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಆಪ್ತರನ್ನೇ ಅಖಾಡಕ್ಕೆ ಇಳಿಸಬೇಕು ಅಂತ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬಣಗಳು ಪ್ರಯತ್ನ ನಡೆಸುತ್ತಿವೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇನ್ನೂ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Congress Karnataka: ಈ ನಿಗಮ – ಮಂಡಳಿ ಅವಧಿ ಕೇವಲ 2 ವರ್ಷ; ಸಿಎಂ, ಡಿಸಿಎಂ ಮಾಸ್ಟರ್‌ ಪ್ಲ್ಯಾನ್!

ಸತೀಶ್‌ ಜಾರಕಿಹೊಳಿ ಡಿಸಿಎಂ ಆಗಬೇಕು

ಸತೀಶ ಜಾರಕಿಹೊಳಿ ಡಿಸಿಎಂ ಆಗಬೇಕು ಎನ್ನುವ ಬೇಡಿಕೆ ಇದೆ ಎಂದು ಸಚಿವರನ್ನು ವರದಿಗಾರರು ಪ್ರಶ್ನಿಸಿದಾಗ ಮಾತಿಗೆ ಬಂದ ಶಾಸಕ ಆಸಿಫ್‌ ರಾಜು ಸೇಠ್‌ ಅವರು, ನಮ್ಮ ಬೇಡಿಕೆಯೂ ಸಹ ಅದೇ ಇದೆ. ಚುನಾವಣೆ ಆದಾಗಿನಿಂದಲೂ ಸತೀಶ್‌ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡುವಂತೆ ನಾವು ಡಿಮ್ಯಾಂಡ್ ಮಾಡುತ್ತಿದ್ದೇವೆ. ಈ ಭಾಗದ ಅಭಿವೃದ್ಧಿ ಆಗಬೇಕು ಅಂದರೆ ಸತೀಶ್‌ ಜಾರಕಿ ಡಿಸಿಎಂ ಆಗಬೇಕು ಎಂದು ತಿಳಿಸಿದರು.

Exit mobile version