ಮುಂಬಯಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ವಿವಾದದ ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ, ಸಂಸದ ಸಂಜಯ್ ರಾವತ್ ಈಗ ಇನ್ನಷ್ಟು ತುಪ್ಪಸುರಿದಿದ್ದಾರೆ. ‘ಚೀನಾ ಭಾರತವನ್ನು ಪ್ರವೇಶ ಮಾಡಿದಂತೆ, ನಾವೂ ಕರ್ನಾಟಕಕ್ಕೆ ನುಗ್ಗುತ್ತೇವೆ’ ಎಂದು ಹೇಳಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಿ, ಶಾಂತಿ ಕಾಪಾಡಿಕೊಳ್ಳಿ ಎಂದು ಎರಡೂ ರಾಜ್ಯಗಳ ಸರ್ಕಾರಗಳಿಗೆ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಆದರೆ ಎಂಇಎಸ್ ಕಾರ್ಯಕರ್ತರು ಪುಂಡಾಟ ಮೆರೆಯುತ್ತಿದ್ದಾರೆ. ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಕಾರ್ಯಕರ್ತರೂ ಇಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇವರೆಲ್ಲ ಗಡಿ ಪ್ರವೇಶ ಮಾಡಲು ಯತ್ನಿಸಿ ದಾಂಧಲೆ ಎಬ್ಬಿಸಿದ್ದರು.
ಪರಿಸ್ಥಿತಿ ಹೀಗಿರುವ ಹೊತ್ತಲ್ಲೇ ಸಂಜಯ್ ರಾವತ್ ಮತ್ತೊಂದು ಕಿಡಿ ಹೊತ್ತಿಸಿದ್ದಾರೆ. ‘ಭಾರತ ಭೂಭಾಗವನ್ನು ಚೀನಾ ಅತಿಕ್ರಮಿಸಿದಂತೆ, ನಾವೂ ಕರ್ನಾಟಕಕ್ಕೆ ನುಗ್ಗುತ್ತೇವೆ. ಇದಕ್ಕಾಗಿ ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಗಡಿ ಸಮಸ್ಯೆಯನ್ನು ಶಾಂತವಾಗಿಯೇ ಪರಿಹರಿಸಿಕೊಳ್ಳಲು ಇಚ್ಛಿಸಿದ್ದೆವು. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ದುರ್ಬಲವಾಗಿದೆ. ಒಂದು ಖಚಿತ ನಿಲುವನ್ನೇ ತೆಗೆದುಕೊಳ್ಳುತ್ತಿಲ್ಲ’ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಮಹಾ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಸಿಎಂ ಏಕನಾಥ ಶಿಂಧೆ ಇದರಲ್ಲಿ ವಿಫಲರಾಗಿದ್ದಾರೆ ಎಂದು ಅಲ್ಲಿನ ಪ್ರತಿಪಕ್ಷಗಳ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಇದೇ ಪ್ರಮುಖ ಚರ್ಚೆಯ ವಿಷಯವಾಗಿದೆ. ಇತ್ತ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲೂ ಗಡಿ ಸಮಸ್ಯೆ ಗದ್ದಲ ಎದ್ದಿದೆ. ಆದರೆ ಇಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ಗಳು ಗಡಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿವೆ. ಮಹಾರಾಷ್ಟ್ರದ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ ಮಾಡಿವೆ.