Site icon Vistara News

IT Companies : ಇನ್ಮುಂದೆ ಐಟಿ ಕಂಪನಿಗಳು ಕಂಡ ಕಂಡ ಹಾಗೆ ನೌಕರರ ಲೇ ಆಫ್‌ ಮಾಡೋ ಹಂಗಿಲ್ಲ!

IT Companies Labour laws

ಬೆಂಗಳೂರು: ಇನ್ನು ಮುಂದೆ ಐಟಿ ಬಿಟಿ ಕಂಪನಿಗಳಲ್ಲಿ (IT BT Companies) ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಾನೂನುಗಳು (Labour department Rules) ಅನ್ವಯವಾಗಲಿದೆಯಾ? ಹಾಗೆ ಅನ್ವಯವಾದರೆ ಕಂಡ ಕಂಡಂತೆ ಪಿಂಕ್‌ ಸ್ಲಿಪ್‌ ನೀಡುವ, ಲೇ ಆಫ್‌ ಮಾಡುವ ಅಧಿಕಾರವನ್ನು ಕಂಪನಿಗಳು ಕಳೆದುಕೊಂಡು ಬಿಡುತ್ತವಾ? ಈ ಒಂದು ಚರ್ಚೆ ಈಗ ಆರಂಭಗೊಂಡಿದೆ. ಇದಕ್ಕೆ ಕಾರಣ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ (ಐಟಿ, ಬಿಟಿ ಮತ್ತು ಬಿಪಿಒಗಳು) ಕಾರ್ಮಿಕ ಕಾನೂನುಗಳಿಂದ ವಿನಾಯಿತಿ (Concession from labour rules) ನೀಡಿದ್ದ ಅವಧಿ 2024ಕ್ಕೆ ಪೂರ್ಣಗೊಳ್ಳುತ್ತಿರುವುದು. ಈ ವಿನಾಯಿತಿ ಮುಂದುವರಿಯದೆ ಹೋದರೆ ಐಟಿ ಕಂಪನಿಗಳನ್ನೂ (IT Companies) ಕಾರ್ಮಿಕ ಕಾನೂನುಗಳು ಜಾರಿಯಾಗಲಿವೆ.

ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ (ಐಟಿ, ಬಿಟಿ ಮತ್ತು ಬಿಪಿಒಗಳು) ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯಿದೆ 1946ರಡಿ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆ. ಮೊದಲು 2014ರಲ್ಲಿ ವಿನಾಯಿತಿ ನೀಡಲಾಗಿತ್ತು. ನಂತರ 2019ರಲ್ಲಿ ಮತ್ತೆ 5 ವರ್ಷಗಳ ಕಾಲ ವಿನಾಯಿತಿ ಮುಂದವರಿಸಲಾಗಿತ್ತು. ಇದೀಗ ಅವಧಿ ಮುಗಿಯುತ್ತಿರುವುದರಿಂದ ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರುವುದಕ್ಕೆ ಸಂಬಂಧಿಸಿ ಎಲ್ಲಾ ಐಟಿ, ಬಿಟಿ ಕಂಪನಿಗಳು, ಕಾರ್ಮಿಕ ಸಂಘಟನೆಗಳು ಮತ್ತು ಇತರೆ ಸಂಬಂಧಿಸಿದ ಭಾಗಿದಾರರ ನಡುವೆ ಸಮಾಲೋಚನೆ ನಡೆಸುವಂತೆ ರಾಜ್ಯ ಸರಕಾರ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.

ಹೆಚ್ಚುತ್ತಿರುವ ಕಾರ್ಮಿಕ ವಿರೋಧಿ ನಿಲುವು, ಸಂಘರ್ಷ

ವಿನಾಯಿತಿ ಅವಧಿ ಮುಕ್ತಾಯ ಆಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಬಿಟಿ ಕಂಪನಿಗಳಲ್ಲಿನ ಉದ್ಯೋಗಿಗಳ ಉದ್ಯೋಗ ಸ್ಥಿತಿಯನ್ನು ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಅವಲೋಕನ ನಡೆಸಲಿದೆ. ಇತ್ತೀಚಿನ ದಿನಗಳಲ್ಲಿ ಐಟಿ, ಬಿಟಿ, ಬಿಪಿಒ ಉದ್ಯಮಗಳಲ್ಲಿ ಸಾಕಷ್ಟು ಕೈಗಾರಿಕಾ ವಿವಾದಗಳು, ಕಾರ್ಮಿಕ ಸಂಘರ್ಷಗಳು ನಡೆಸುತ್ತಿರುವುದು, ನೌಕರರನ್ನು ಸಕಾರಣಗಳಿಲ್ಲದೆ ವಜಾಗೊಳಿಸುತ್ತಿರುವುದು, ಐಡಿ ಬ್ಲಾಕೇಜ್‌, ಲೇ ಆಫ್‌, ಮಹಿಳಾ ನೌಕರರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುವುದರಿಂದ ಕಾರ್ಮಿಕ ಕಾನೂನುಗಳನ್ನು ಅಲ್ಲಿ ಜಾರಿ ಮಾಡಬೇಕೇ ಎಂಬ ಚರ್ಚೆ ಜೋರಾಗಿದೆ.

” ಅಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ರಕ್ಷಣೆಗೆ ಸರಕಾರವು ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸರಕಾರದ ಗಮನಕ್ಕೂ ಅನೇಕ ದೂರುಗಳು ಸಹ ಬರುತ್ತಿದ್ದು, ಸ್ಥಾಯಿ ಆದೇಶಗಳನ್ನು ಜಾರಿ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆ ವಿವಾದಗಳನ್ನು ಕಾರ್ಮಿಕ ನ್ಯಾಯಾಲಯ ಹಾಗೂ ಔದ್ಯಮಿಕ ನ್ಯಾಯಾಧೀಕರಣಗಳಿಗೆ ನ್ಯಾಯ ತೀರ್ಮಾನಕ್ಕೆ ಕಳುಹಿಸಲಾಗುತ್ತಿದೆ,” ಎಂದು ಹೆಚ್ಚುವರಿ ಕಾರ್ಮಿಕ ಆಯುಕ್ತ ಡಾ.ಜಿ.ಮಂಜುನಾಥ್‌ ಹೇಳುತ್ತಾರೆ.

‌ಕಾರ್ಮಿಕ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

  1. ಕೋವಿಡ್‌ ನಂತರದ ದಿನಗಳಲ್ಲಿ ಸೇವಾ ವಲಯದಲ್ಲಿ ಅನುಚಿತ ವರ್ತನೆ ಪ್ರಕರಣಗಳೂ ಹೆಚ್ಚುತ್ತಿವೆ.
  2. ಆ ಕುಂದುಕೊರತೆಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಔದ್ಯಮಿಕ ಉದ್ಯೋಗಗಳ (ಸ್ಥಾಯಿ ಆದೇಶ) ಕಾಯಿದೆ ಮತ್ತು ಕೈಗಾರಿಕಾ ವಿವಾದ ಕಾಯಿದೆಗಳನ್ನು ಜಾರಿಗೊಳಿಸುವುದು ಅವಶ್ಯಕವಾಗಿದೆ.
  3. ಈ ಕಾಯಿದೆಗಳನ್ನು ನೌಕರರ ಸೇವಾ ಷರತ್ತುಗಳನ್ನು ನಿಯಂತ್ರಿಸಲು ರೂಪಿಸಲಾಗಿದೆ.
  4. ಐಟಿ ಕಂಪನಿ ಹಾಗೂ ಇತರೆ ಉದ್ಯಮಗಳಲ್ಲಿ ಕೈಗಾರಿಕಾ ವಿವಾದಗಳು ಹೆಚ್ಚುತ್ತಿವೆ.
  5. ನೌಕರರಿಗೆ ಸೇವಾ ಭದ್ರತೆ ಒದಗಿಸಲು ಹಿಂದೆ ನೀಡಿರುವ ವಿನಾಯಿತಿ ಹಿಂಪಡೆಯುವ ಬಗ್ಗೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲು ಕಾರ್ಮಿಕ ಇಲಾಖೆ ಉದ್ದೇಶಿಸಿದೆ.

ಇದನ್ನೂ ಓದಿ : Google lay off : ಗೂಗಲ್‌ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ 12,000 ಉದ್ಯೋಗಿಗಳ ವಜಾ

ವಿನಾಯಿತಿ ಮರುಪರಿಶೀಲನೆಗೆ ನಿರ್ಧಾರ

ಪರಿಸ್ಥಿತಿಯ ಅವಲೋಕನ ನಡೆದರೆ ಐಟಿ ಬಿಟಿ ಕಂಪನಿಗಳು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಬಂದೇ ಬಿಡುತ್ತವೆ ಎಂದು ಹೇಳಲಾಗದು. ಆದರೆ, ಅನುಚಿತ ವರ್ತನೆಗಳ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಹಿತ ಕಾಯಲು ವಿನಾಯಿತಿ ಬಗ್ಗೆ ಮರು ಪರಿಶೀಲನೆ ನಡೆಸಬಹುದು. ಐಟಿ ಬಿಟಿ ಕಂಪನಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲು ಅವಕಾಶವಿರುತ್ತದೆ. ಇಂಥ ಘಟನೆಗಳು ಮರುಕಳಿಸಿದರೆ ವಿನಾಯಿತಿಯನ್ನು ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆ ನೀಡಲು ಅನುಕೂಲವಾಗುತ್ತದೆ. ಕಾರ್ಮಿಕರ ವಿಚಾರದಲ್ಲಿ ತಮಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಬೀಗುತ್ತಿರುವ ಕಂಪನಿಗಳಿಗೆ ಚುರುಕು ಮುಟ್ಟಿಸಿ ಕಾರ್ಮಿಕ ಹಿತರಕ್ಷಣೆಗೆ ಗಮನ ಹರಿಸುವಂತೆ ಮಾಡಲು ಸಾಧ್ಯವಿದೆ.

Exit mobile version