ಬೆಂಗಳೂರು: ಸಿನಿ ಕ್ಷೇತ್ರದಲ್ಲಿ ಮಿಂಚಿದವರು ರಾಜಕೀಯಕ್ಕೆ ಎಂಟ್ರಿ ಕೊಡುವುದನ್ನು ನಾವು ನೋಡಿದ್ದೇವೆ. ನಟ ಕಮಲ ಹಾಸನ್, ಚಿರಂಜೀವಿ, ಜಗ್ಗೇಶ್, ನಟಿ ರಮ್ಯಾ ಸೇರಿ ಅನೇಕರು ಆ ಸಾಲಿನಲ್ಲಿದ್ದಾರೆ. ಇದೀಗ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kichcha Sudeepa) ಕೂಡ ಅದೇ ಸಾಲಿಗೆ ಸೇರಿಕೊಳ್ಳುತ್ತಾರಾ ಎನ್ನುವ ಚರ್ಚೆಗಳು ಆರಂಭವಾಗಿವೆ.
ಹೌದು. ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಭೇಟಿಯಾಗಿದ್ದರು. ಅವರೊಂದಿಗಿನ ಫೋಟೊ ಹಂಚಿಕೊಂಡಿದ್ದ ಡಿಕೆಶಿ ಅವರು, “ನಾನಾ ಚಿತ್ರರಂಗಗಳಲ್ಲಿ ಛಾಪು ಮೂಡಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದೆವು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ರೂಪಿಸುತ್ತಿರುವ ವಿಶೇಷ ಪ್ರಣಾಳಿಕೆಗೆ ಅವರ ಸಲಹೆಗಳನ್ನು ಪಡೆದೆ” ಎಂದು ಬರೆದುಕೊಂಡಿದ್ದರು. ಚುನಾವಣೆ ಹತ್ತಿರದಲ್ಲಿರುವಾಗ ಈ ರೀತಿ ಪಕ್ಷದ ಹಿರಿಯರೊಬ್ಬರು ಸುದೀಪ್ ಅವರನ್ನು ಭೇಟಿಯಾಗಿರವುದು ಅನುಮಾನಕ್ಕೆ ಕಾರಣವಾಗಿದೆ.
ಅದಷ್ಟೇ ಅಲ್ಲದೆ ಇತ್ತೀಚೆಗೆ ಮಾಧ್ಯಮವೊಂದರ ಜತೆಗೆ ಮಾತನಾಡಿದ್ದ ಸುದೀಪ್ ಅವರು, “ನನಗೆ ರಾಜಕೀಯ ಎಲ್ಲರೊಂದಿಗೆ ಉತ್ತಮ ಸಂಬಂಧ ಇದೆ. ಆದರೆ ನನ್ನ ರಾಜಕೀಯ ಪ್ರವೇಶದ ಬಗ್ಗೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ನಿರ್ಧಾರ ತೆಗೆದುಕೊಂಡಾಗ ಅದನ್ನು ಸಾರ್ವಜನಿಕಗೊಳಿಸುತ್ತೇನೆ. ರಾಜಕೀಯ ಸೇರುವುದಕ್ಕೂ ಮೊದಲು ನಾನು ನನ್ನ ಅಭಿಮಾನಿಗಳನ್ನು ಸಂಪರ್ಕಿಸಬೇಕು. ರಾಜಕೀಯವಿಲ್ಲದೆಯೂ ಸೇವೆ ಮಾಡಬಹುದು. ಮೊದಲಿಗೆ, ನಾನು ನನ್ನ ಬಗ್ಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ನಾನು ಏಕೆ ರಾಜಕೀಯ ಧುಮುಕಬೇಕು? ಅಥವಾ ನಾನು ಇನ್ನೂ ವೈಯಕ್ತಿಕ ಸಾಮರ್ಥ್ಯದಲ್ಲಿ ಕೊಡುಗೆ ನೀಡಬಲ್ಲೆನೇ? ಎನ್ನುವುದನ್ನು ಕಂಡುಕೊಳ್ಳಬೇಕು” ಎಂದು ಹೇಳಿದ್ದರು.